ಬೇಸಿಗೆಯ ಧಗೆಗೆ ಎಷ್ಟು ಪಾನೀಯಗಳನ್ನು ಕುಡಿದರೂ ದಾಹ ಇಂಗುವುದೇ ಇಲ್ಲ. ನಮ್ಮ ಮನೆಯಲ್ಲಂತೂ ಬೇಸಿಗೆಯಲ್ಲಿ ಟೀ, ಕಾಫಿ ತಯಾರಿಸುವುದೇ ಅಪರೂಪವಾಗಿಬಿಟ್ಟಿದೆ. ಬೇಕು ಎಂದೆನಿಸಿದಾಗಲೆಲ್ಲ ಮನೆಯಲ್ಲಿರುವ ಹಣ್ಣುಗಳನ್ನು ಬಳಸಿ ಜ್ಯೂಸ್, ಮಿಲ್ಕ್ ಶೇಕ್, ಸ್ಮೂದಿ ಇತ್ಯಾದಿ ಪಾನೀಯಗಳನ್ನು ತಯಾರಿಸಿ ಕುಡಿಯುತ್ತೇವೆ. ಟೀ, ಕಾಫಿಗಳಿಗಿಂತ ಇವು ಆರೋಗ್ಯಕ್ಕೂ ಒಳ್ಳೆಯದು..ಅಲ್ಲವೆ?
ನನ್ನ ಮಗಳಿಗೆ ಸ್ಟ್ರಾಬೆರಿ ಹಣ್ಣೆಂದರೆ ಬಹಳ ಇಷ್ಟ. ಫ್ರೆಶ್ ಹಣ್ಣು ಸಿಗದಿದ್ದರೆ ಫ್ರೋಜನ್ ಹಣ್ಣಾದರೂ ಸರಿಯೇ..ಹೀಗಾಗಿ ಸ್ಟ್ರಾಬೆರಿ ಹಣ್ಣುಗಳನ್ನು ಜಾಸ್ತಿ ತಂದಾಗ ಅದರ ತೊಟ್ಟು ತೆಗೆದು ಕ್ಲೀನ್ ಮಾಡಿ ಫ್ರೀಜರ್ ನಲ್ಲಿ ಇಟ್ಟಿರುತ್ತೇನೆ. ಯಾವಾಗಲಾದರೊಮ್ಮೆ ಮಿಲ್ಕ್ ಶೇಕ್ ತಯಾರಿಸುವುದಕ್ಕೂ ಈ ಹಣ್ಣುಗಳು ಉಪಯೋಗವಾಗುತ್ತವೆ.
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
ಸ್ಟ್ರಾಬೆರಿ ಹಣ್ಣುಗಳು (ಫ್ರೆಶ್ / ಫ್ರೋಜನ್) - 250 ಗ್ರಾಂ
ತಣ್ಣನೆಯ ಹಾಲು: 300 ml
ಸಕ್ಕರೆ - 2 ರಿಂದ 3 ಟೇಬಲ್ ಸ್ಪೂನ್ (ರುಚಿಗೆ ತಕ್ಕಷ್ಟು)
ಐಸ್ ಕ್ರೀಮ್ - 2 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
ಸ್ಟ್ರಾಬೆರಿ ಹಣ್ಣುಗಳನ್ನು ತೊಳೆದುಕೊಂಡು ಮೀಡಿಯಮ್ ಸೈಜಿನ ಹೋಳುಗಳಾಗಿ ಹೆಚ್ಚಿಕೊಳ್ಳಿ.
ಹೆಚ್ಚಿದ ಸ್ಟ್ರಾಬೆರಿ ಹೋಳುಗಳನ್ನು ಸಕ್ಕರೆಯೊಡನೆ ಮಿಕ್ಸಿಯಲ್ಲಿ ನುಣ್ಣಗಿನ ಪೇಸ್ಟ್ ಆಗುವವರೆಗೆ ತಿರುವಿ. ಬೇಕಿದ್ದರೆ ಸ್ವಲ್ಪ ಹಾಲು ಸೇರಿಸಿ.
ಮಿಶ್ರಣ ನುಣ್ಣಗಾದ ನಂತರ ಇದಕ್ಕೆ ಉಳಿದ ಹಾಲನ್ನು ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವವರೆಗೆ ತಿರುವಿ.
ಕೊನೆಯಲ್ಲಿ ಇದಕ್ಕೆ ಐಸ್ ಕ್ರೀಮ್ ಸೇರಿಸಿ ಅರ್ಧ ನಿಮಿಷ ತಿರುವಿ.
ತಯಾರಾದ ಮಿಲ್ಕ್ ಶೇಕ್ ನ್ನು ಗ್ಲಾಸುಗಳಲ್ಲಿ ಹಾಕಿ ಸರ್ವ್ ಮಾಡಿ.
ಟಿಪ್ಸ್:
ಹಾಲನ್ನು ಕಡಿಮೆ ಬಳಸುವುದಾದರೆ 200 ml ಹಾಲು ಹಾಗೂ 100 ml ನೀರು ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)