ನಮ್ಮ ಮನೆಯಲ್ಲಿ ತಯಾರಿಸುವ ಸಿಂಪಲ್ ಅಡುಗೆಗಳಲ್ಲಿ ಈ ಪಲ್ಯವೂ ಒಂದು. ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಇರುವ ಕೆಲವೇ ಸಾಮಗ್ರಿಗಳನ್ನು ಬಳಸಿ ಜಟ್ ಪಟ್ ಎಂದು ಮಾಡಿಬಿಡಬಹುದಾದ ಸೈಡ್ ಡಿಶ್ ಇದು.
ತುಂಬಾ ಜನರಿಗೆ ಬೆಂಡೆಕಾಯಿ ಇದರ ಲೋಳೆ ಗುಣದಿಂದಾಗಿ ಇಷ್ಟವಾಗುವುದಿಲ್ಲ. ಆದರೆ ಲೋಳೆ ಆಗದಂತೆ ಕ್ರಮಬದ್ಧವಾಗಿ ಅಡುಗೆ ಮಾಡಿದರೆ ಅದರ ರುಚಿಯೇ ಬೇರೆ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಬೆಂಡೆಕಾಯಿಯ ಸೇವನೆ ಬಹಳ ಒಳ್ಳೆಯದು.
ಸಿಂಪಲ್ ಆಗಿ ತಯಾರಿಸಬಹುದಾದ ಬೆಂಡೆಕಾಯಿ ಪಲ್ಯದ ರೆಸಿಪಿ ಇಲ್ಲಿದೆ:
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
- ಬೆಂಡೆಕಾಯಿ - 15
- ಆಮ್ ಚೂರ್ ಪೌಡರ್ (ಹುಳಿಪುಡಿ) - 3/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
- ತೆಂಗಿನತುರಿ - 2ರಿಂದ 3 ಟೇಬಲ್ ಸ್ಪೂನ್
- ಒಗ್ಗರಣೆಗೆ:
ಒಣಮೆಣಸು - ಒಂದು ಚೂರು,
ಉದ್ದಿನಬೇಳೆ - 1 ಟೀ ಸ್ಪೂನ್,
ಸಾಸಿವೆ - 1 ಟೀ ಸ್ಪೂನ್,
ಇಂಗು - ಚಿಟಿಕೆ,
ಅರಿಶಿನ - 1/4 ಟೀ ಸ್ಪೂನ್,
ಕರಿಬೇವು - 7ರಿಂದ 8 ಎಲೆಗಳು,
ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
ತಯಾರಿಸುವ ವಿಧಾನ:
- ಬೆಂಡೆಕಾಯಿಯನ್ನು ತೊಳೆದು ಬಟ್ಟೆ ಅಥವಾ ಪೇಪರ್ ಟವೆಲ್ ನಿಂದ ಚೆನ್ನಾಗಿ ಒರೆಸಿಕೊಳ್ಳಿ. ನಂತರ ಇವನ್ನು ಆದಷ್ಟು ತೆಳ್ಳಗೆ ಹೆಚ್ಚಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆ ಬಿಸಿಗಿಟ್ಟು ಎಣ್ಣೆ, ಒಣಮೆಣಸು, ಉದ್ದಿನಬೇಳೆ, ಸಾಸಿವೆ ಸೇರಿಸಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಇಂಗು, ಅರಿಶಿನ, ಸೀಳಿದ ಹಸಿಮೆಣಸು, ಕರಿಬೇವು ಹಾಕಿ ಕೈಯಾಡಿಸಿ ಒಂದು ನಿಮಿಷ ಹುರಿಯಿರಿ.
- ನಂತರ ಇದಕ್ಕೆ ಹೆಚ್ಚಿದ ಬೆಂಡೆಕಾಯಿ ಸೇರಿಸಿ ಕೈಯಾಡಿಸಿ.
- ಪಲ್ಯದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚದೆ ಬೇಯಿಸಿ. ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ. ಬೆಂಡೆಕಾಯಿ ತೆಳ್ಳಗೆ ಹೆಚ್ಚಿರುವುದರಿಂದ ಬೇಯಲು ಹೆಚ್ಚು ಸಮಯ ಬೇಕಾಗುವುದಿಲ್ಲ.
- ಪಲ್ಯದ ಮಿಶ್ರಣ ಮುಕ್ಕಾಲುಭಾಗ ಬೆಂದಾಗ ಇದಕ್ಕೆ ತೆಂಗಿನತುರಿ ಸೇರಿಸಿ. ಮಿಶ್ರಣ ಪೂರ್ತಿ ಬೆಂದನಂತರ ಉರಿ ಆಫ್ ಮಾಡಿ.
- ಈ ಪಲ್ಯ ಅನ್ನ, ಚಪಾತಿಯೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ.
ಟಿಪ್ಸ್:
- ಈ ಪಲ್ಯಕ್ಕೆ ಬೆಂಡೆಕಾಯಿಯನ್ನು ತೆಳ್ಳಗೆ ಹೆಚ್ಚಿದಷ್ಟೂ ಚೆನ್ನ.
- ಈ ಪಲ್ಯ ಬೇಯಿಸುವಾಗ ನೀರು ಸೇರಿಸಬೇಡಿ.
- ಈರುಳ್ಳಿ ಇಷ್ಟಪಡುವವರು ಪಲ್ಯ ಮುಕ್ಕಾಲುಭಾಗ ಬೆಂದಾಗ ಹೆಚ್ಚಿದ ಈರುಳ್ಳಿ ಸೇರಿಸಿಕೊಳ್ಳಬಹುದು.
- ಪಲ್ಯವನ್ನು ತುಂಬಾ ಸಲ ಕೈಯಾಡಿಸಿದರೆ ಮಿಶ್ರಣ ಮುದ್ದೆಯಾಗಿಬಿಡುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)