ಲೋಟಸ್ ಸೀಡ್ಸ್ ಸ್ನ್ಯಾಕ್ । ಫೂಲ್ ಮಖಾನಾ ಒಗ್ಗರಣೆ । ಫಾಕ್ಸ್ ನಟ್ ಸ್ನಾಕ್ಸ್

ಮನೆಯಲ್ಲಿ ಸ್ಕೂಲ್ ಗೆ ಹೋಗುವ ಮಕ್ಕಳಿದ್ದಾಗ ಎಷ್ಟು ಬಗೆಯ ತಿಂಡಿಗಳನ್ನು ಮಾಡಿಟ್ಟರೂ ಕಡಿಮೆಯೇ. ನನ್ನ ಮಗಳು ಇತ್ತೀಚೆಗೆ ದಿನವೂ ಸ್ಕೂಲ್ ನಿಂದ ಬಂದ ನಂತರ ಏನಾದರೂ ಕುರುಮ್ ಕುರುಮ್ ತಿಂಡಿ ಬೇಕೆಂದು ಕೇಳುತ್ತಾಳೆ. ಅಂಗಡಿಯಿಂದ ತರುವ ಸ್ನ್ಯಾಕ್ಸ್ ಗಳಿಗಿಂತ ಮನೆಯಲ್ಲೇ ಏನಾದರೂ ತಿಂಡಿಗಳನ್ನು ಮಾಡಿಟ್ಟಿರುತ್ತೇನೆ ನಾನು. ಅವಳಿಷ್ಟದ ತಿಂಡಿಗಳಲ್ಲಿ ಲೋಟಸ್ ಸೀಡ್ (ಕಮಲದ ಬೀಜ) ಸ್ನ್ಯಾಕ್ಸ್ ಕೂಡ ಒಂದು. 
ಇಂಡಿಯನ್ ಸ್ಟೋರ್ ನಲ್ಲಿ ಸಿಗುವ ಹುರಿದ ಲೋಟಸ್ ಸೀಡ್ಸ್ ಅಥವಾ ಫೂಲ್ ಮಖಾನಾ ಪ್ಯಾಕೆಟ್ ಇದ್ದುಬಿಟ್ಟರೆ 10-15 ನಿಮಿಷದಲ್ಲಿ ರುಚಿರುಚಿಯಾದ ಸ್ನ್ಯಾಕ್ಸ್ ರೆಡಿ! ಲೋಟಸ್ ಸೀಡ್ ಅಥವಾ ಫೂಲ್ ಮಖಾನ - ಇದು ಪ್ರೊಟೀನ್ ಮತ್ತು ವಿಟಮಿನ್ ಬಿ ಯ ಆಗರವೆಂದು ಹೇಳಲಾಗುತ್ತದೆ. ಲೋಟಸ್ ಸೀಡ್ಸ್ ಸ್ನ್ಯಾಕ್ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಸರ್ವಿಂಗ್ಸ್: 8 - 10
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಹುರಿದ ಲೋಟಸ್ ಸೀಡ್ಸ್ (ಫೂಲ್ ಮಖಾನಾ) - 100 ಗ್ರಾಂ 
  • ಎಣ್ಣೆ - 4 1/2 ಟೇಬಲ್ ಸ್ಪೂನ್ 
  • ಅರಿಶಿನ - 1/2 ಟೀ ಸ್ಪೂನ್ 
  • ಮೆಣಸಿನಪುಡಿ - 1 ಟೀ ಸ್ಪೂನ್ ಅಥವಾ ಖಾರಕ್ಕೆ ತಕ್ಕಷ್ಟು 
  • ಚಾಟ್ ಮಸಾಲಾ - 1 1/2 ಟೀ ಸ್ಪೂನ್ 
  • ಉಪ್ಪು - ರುಚಿಗೆ ತಕ್ಕಷ್ಟು 
  • ಸಕ್ಕರೆ ಪುಡಿ (ಬೇಕಿದ್ದರೆ) - 1 1/2 ಟೀ ಸ್ಪೂನ್ 



ತಯಾರಿಸುವ ವಿಧಾನ:
  • ಒಂದು ಅಗಲವಾದ ಬಾಣಲೆಯಲ್ಲಿ ಲೋಟಸ್ ಸೀಡ್ಸ್ ನ್ನು ಹಾಕಿಕೊಂಡು ಸಣ್ಣ ಅಥವಾ ಮೀಡಿಯಂ ಉರಿಯಲ್ಲಿ 8 - 10 ನಿಮಿಷ ಅಥವಾ ಗರಿಯಾಗುವತನಕ ಹುರಿಯಿರಿ. 
  • ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಅದಕ್ಕೆ ಅರಿಶಿನ, ಮೆಣಸಿನಪುಡಿ, ಸೇರಿಸಿ ಉರಿ ಆಫ್ ಮಾಡಿ. ಇದಕ್ಕೆ ಚಾಟ್ ಮಸಾಲಾ, ಉಪ್ಪು, ಸಕ್ಕರೆಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
  • ಮೊದಲೇ ಹುರಿದಿಟ್ಟ ಲೋಟಸ್ ಸೀಡ್ಸ್ ನ್ನು ಒಗ್ಗರಣೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಲೋಟಸ್ ಸೀಡ್ಸ್ ಸ್ನ್ಯಾಕ್ ಸವಿಯಲು ಸಿದ್ಧ!


ಟಿಪ್ಸ್:
  • ಚಾಟ್ ಮಸಾಲಾ ಬೇಡ ಎಂದರೆ ಆಮ್ ಚೂರ್ ಪೌಡರ್ ಬಳಸಬಹುದು. 
  • ಒಗ್ಗರಣೆಗೆ ಲೋಟಸ್ ಸೀಡ್ಸ್ ಹಾಕಿದ ನಂತರ ಸೌಟಿನ ಬದಲು ಕೈಗಳಿಂದ ಮಿಕ್ಸ್ ಮಾಡಿದರೆ ಮಸಾಲೆ ಚೆನ್ನಾಗಿ ಮತ್ತು ಬೇಗ ಅಂಟಿಕೊಳ್ಳುತ್ತದೆ. 

ಕಾಮೆಂಟ್‌ಗಳು