ಬೀನ್ಸ್ - ಹಿತಿಕಿದ ಅವರೇಕಾಳು ಪಲ್ಯ

ಅವರೇಕಾಳು ಎಂದತಕ್ಷಣ ನನಗೆ ನೆನಪಾಗುವುದು ಬೆಂಗಳೂರು. ಅವರೇಕಾಳಿನ ಸೀಸನ್ ನಲ್ಲಿ ಎಲ್ಲ ಕಡೆಯೂ ಅವರೆಕಾಳಿನ ರಾಶಿಯೇ ಕಾಣಸಿಗುತ್ತದೆ. ಸಾಂಬಾರು, ರೊಟ್ಟಿ, ಪಲ್ಯ, ಉಪ್ಪಿಟ್ಟು, ಹೀಗೆ ಬಗೆಬಗೆಯಾದ ಅಡುಗೆಗಳನ್ನು ಅವರೇಕಾಳು ಬಳಸಿ ತಯಾರಿಸುತ್ತಾರೆ. ನಾನು ಇಂಡಿಯನ್ ಸ್ಟೋರ್ ನಲ್ಲಿ ಸಿಗುವ ಹಿತಿಕಿದ ಅವರೆಕಾಳಿನ ಪ್ಯಾಕೆಟ್ ನ್ನು ಆಗಾಗ್ಗೆ ತರುತ್ತಿರುತ್ತೇನೆ. ಸಾಂಬಾರ್, ರೈಸ್ ಐಟಮ್ಸ್, ಪಲ್ಯ ಎಲ್ಲವಕ್ಕೂ ಇದು ಚೆನ್ನ. 
ಬೀನ್ಸ್ ಒಟ್ಟಿಗೆ ಹಿತಿಕಿದ ಅವರೇಕಾಳು ಬಳಸಿ ಪಲ್ಯ ತಯಾರಿಸುವ ವಿಧಾನ ಇಂತಿದೆ: 


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಸರ್ವಿಂಗ್ಸ್: ಈ ಅಳತೆಯಿಂದ 3 ಜನರಿಗೆ ಆಗುವಷ್ಟು ಪಲ್ಯ ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಂ 

ಬೇಕಾಗುವ ಸಾಮಗ್ರಿಗಳು:
  • ಬೀನ್ಸ್ - 200 ಗ್ರಾಂ 
  • ಹಿತಿಕಿದ ಅವರೇಕಾಳು(ಫ್ರೆಶ್ ಅಥವಾ ಫ್ರೋಜನ್): 1/2 ಕಪ್ (ಜಾಸ್ತಿ ಬೇಕಿದ್ದರೆ ಹಾಕಬಹುದು)
  • ಉಪ್ಪು - ರುಚಿಗೆ ತಕ್ಕಷ್ಟು 
  • ಹುಳಿಪುಡಿ / ಆಮಚೂರ್ ಪೌಡರ್ - 2/3 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು 
  • ತೆಂಗಿನತುರಿ (ಬೇಕಿದ್ದರೆ) - 2 ಟೇಬಲ್ ಚಮಚ 
          ಒಗ್ಗರಣೆಗೆ: 
  • ಎಣ್ಣೆ - 2 ಟೇಬಲ್ ಚಮಚ 
  • ಒಣಮೆಣಸು - ಒಂದು ಚೂರು 
  • ಉದ್ದಿನಬೇಳೆ - 1 ಟೀ ಚಮಚ
  • ಇಂಗು - ದೊಡ್ಡ ಚಿಟಿಕೆಯಷ್ಟು 
  • ಸಾಸಿವೆ - 1 ಟೀ ಚಮಚ
  • ಅರಿಶಿನ - 1/4 ಟೀ ಚಮಚ 
  • ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ) 
  • ಕರಿಬೇವು - 8ರಿಂದ 10 ಎಲೆಗಳು 


ತಯಾರಿಸುವ ವಿಧಾನ:
  • ಬೀನ್ಸ್ ನ್ನು ಸ್ವಚ್ಛವಾಗಿ ತೊಳೆದುಕೊಂಡು ತೊಟ್ಟು ಮತ್ತು ನಾರನ್ನು ಬೇರ್ಪಡಿಸಿ. ನಂತರ ಇವನ್ನು ಆದಷ್ಟೂ ತೆಳ್ಳಗೆ ಹೆಚ್ಚಿಕೊಳ್ಳಿ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉದ್ದಿನಬೇಳೆ, ಒಣಮೆಣಸು, ಸಾಸಿವೆ, ಇಂಗು ಹಾಕಿ ಹುರಿಯಿರಿ. ಸಾಸಿವೆ ಸಿಡಿಯತೊಡಗಿದಾಗ ಅರಿಶಿನ, ಹಸಿಮೆಣಸು, ಕರಿಬೇವು ಸೇರಿಸಿ ಒಂದು ನಿಮಿಷ ಕೈಯಾಡಿಸಿ. 
  • ನಂತರ ಇದಕ್ಕೆ ಹೆಚ್ಚಿದ ಬೀನ್ಸ್ ಸೇರಿಸಿ ಮಿಕ್ಸ್ ಮಾಡಿ. ಬಾಣಲೆಗೆ ಮುಚ್ಚಳ ಮುಚ್ಚಿ 5 - 6 ನಿಮಿಷ ಬೇಯಿಸಿ. ಮಧ್ಯೆ ಒಮ್ಮೆ ಮುಚ್ಚಳ ತೆಗೆದು ಕೈಯಾಡಿಸಿ. 
  • ಅರ್ಧ ಬೆಂದ ಪಲ್ಯಕ್ಕೆ ಹಿತಿಕಿದ ಅವರೇಕಾಳು ಸೇರಿಸಿ 5 ನಿಮಿಷ ಬೇಯಿಸಿ. 
  • ನಂತರ ಪಲ್ಯಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿಪುಡಿ, ತೆಂಗಿನತುರಿ ಸೇರಿಸಿ ಮಿಕ್ಸ್ ಮಾಡಿ 5 ನಿಮಿಷ ಅಥವಾ ಪೂರ್ತಿ ಬೇಯುವವರೆಗೆ ಬೇಯಿಸಿ. 
  • ಊಟಕ್ಕೆ ಸೈಡ್ ಡಿಶ್ ಆಗಿ ಹಾಕಿಕೊಳ್ಳಲು ಈ ಪಲ್ಯ ಚೆನ್ನಾಗಿರುತ್ತದೆ. 


ಟಿಪ್ಸ್:
  • ಈ ಪಲ್ಯ ಬೇಯಿಸುವಾಗ ನೀರು ಸೇರಿಸಬೇಡಿ. ತರಕಾರಿಯಲ್ಲಿರುವ ನೀರಿನಂಶವೇ ಬೇಯಲು ಸಾಕಾಗುತ್ತದೆ. 

ಕಾಮೆಂಟ್‌ಗಳು