ಅಕ್ಕಿ - ಪುಟಾಣಿಬೇಳೆ ಚಕ್ಲಿ । ಮೊಸರು ಬಳಸಿ ಮಾಡುವ ಚಕ್ಲಿ

ನಾನು ಮನೆಯಲ್ಲಿ ಕರಿದ ತಿಂಡಿಗಳನ್ನು ತಯಾರಿಸುವುದು ಬಹಳ ಕಡಿಮೆ. ಬಜ್ಜಿ, ಬೋಂಡಾ, ಪೂರಿ ಇಂಥ ತಿಂಡಿಗಳನ್ನು ಯಾವಾಗಲೋ ಒಮ್ಮೆ ಮನೆಗೆ ಅತಿಥಿಗಳು ಬಂದಾಗ ತಯಾರಿಸುವುದಷ್ಟೆ. ನನ್ನ ಮಗಳಿಗೆ ಚಕ್ಲಿ ಎಂದರೆ ತುಂಬಾ ಇಷ್ಟ. ಸ್ನ್ಯಾಕ್ಸ್ ಗೆ ಏನು ಬೇಕೆಂದರೆ ಯಾವಾಗಲೂ ಬರುವ ಉತ್ತರ 'ಚಕ್ಲಿ'. ಹೀಗಾಗಿ ಚಕ್ಲಿ ಕಂಬಳ ನಮ್ಮ ಮನೆಯಲ್ಲಿ ಆಗಾಗ ಆಗುತ್ತಿರುತ್ತದೆ.
ಒಮ್ಮೆ ನನ್ನ ಪರಿಚಯದ ಆಂಟಿಯೊಬ್ಬರ ಮನೆಯಲ್ಲಿ ಮಜ್ಜಿಗೆ/ಮೊಸರು ಬಳಸಿ ತಯಾರಿಸಿದ ಚಕ್ಲಿಯನ್ನು ತಿಂದಿದ್ದೆ. ನಾನು ತಯಾರಿಸುವ ಚಕ್ಲಿ ರೆಸಿಪಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಮೊಸರು ಸೇರಿಸಿ ಚಕ್ಲಿ ತಯಾರಿಸಿದೆ. ಗರಿಗರಿಯಾಗಿ ರುಚಿಕರವಾದ ಈ ಚಕ್ಲಿಗಳು ನಮಗೆಲ್ಲ ಇಷ್ಟವಾದವು. ಈಗ ಚಕ್ಲಿ ಮಾಡಬೇಕೆಂದಾಗಲೆಲ್ಲ ಈ ರೆಸಿಪಿಯೇ ಸುಲಭ ಮತ್ತು ಅನುಕೂಲವೆನಿಸುತ್ತದೆ!


ತಯಾರಿಸಲು ಬೇಕಾಗುವ ಸಮಯ: 2 ಘಂಟೆ 
ಡಿಫಿಕಲ್ಟಿ ಲೆವೆಲ್: ಮೀಡಿಯಂ 
ಈ ಅಳತೆಯಿಂದ ಸುಮಾರು 60 ಚಕ್ಲಿಗಳನ್ನು ತಯಾರಿಸಬಹುದು  

ಬೇಕಾಗುವ ಸಾಮಗ್ರಿಗಳು:

  • ಅಕ್ಕಿಹಿಟ್ಟು - 4 ಕಪ್  
  • ಪುಟಾಣಿಬೇಳೆ - 1/2 ಕಪ್ 
  • ಬೆಣ್ಣೆ - ನಿಂಬೇಗಾತ್ರ 
  • ಉಪ್ಪು - ರುಚಿಗೆ ತಕ್ಕಷ್ಟು 
  • ಸಕ್ಕರೆ - 1 1/2 ಟೀ ಸ್ಪೂನ್ 
  • ಮೆಣಸಿನಪುಡಿ - 2 ಟೀ ಸ್ಪೂನ್ ಅಥವಾ ಖಾರಕ್ಕೆ ತಕ್ಕಷ್ಟು 
  • ಓಮ - 1 ಟೀ ಸ್ಪೂನ್ 
  • ಎಳ್ಳು - 1 ಟೇಬಲ್ ಸ್ಪೂನ್ 
  • ಜೀರಿಗೆ - 1 ಟೀ ಸ್ಪೂನ್ 
  • ಮೊಸರು - 1/2 ಕಪ್ 
  • ನೀರು - 2 1/4 ಕಪ್ (ಅಂದಾಜು)
  • ಕರಿಯಲು ಎಣ್ಣೆ 


ತಯಾರಿಸುವ ವಿಧಾನ:

  • ಮಿಕ್ಸಿ ಜಾರ್ ನಲ್ಲಿ ಪುಟಾಣಿಬೇಳೆ, ಓಮ, ಜೀರಿಗೆ, ಎಳ್ಳು ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. 
  • ಅಕ್ಕಿಹಿಟ್ಟು, ಪುಟಾಣಿಹಿಟ್ಟು, ಉಪ್ಪು, ಸಕ್ಕರೆ, ಮೆಣಸಿನಪುಡಿ ಇಷ್ಟನ್ನೂ ಒಂದು ಪಾತ್ರೆಯಲ್ಲಿ ಹಾಕಿ ಮಿಕ್ಸ್ ಮಾಡಿ. 
  • ಬೆಣ್ಣೆಯನ್ನು ಬಿಸಿಮಾಡಿ, ಅದನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಕೈಯಾಡಿಸಿ. 
  • ಹಿಟ್ಟಿಗೆ ಅರ್ಧ ಕಪ್ ನಷ್ಟು ಮೊಸರು ಸೇರಿಸಿ ಕಲಸಿ. 
  • ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  • ಚಕ್ಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಪ್ರೆಸ್ ಮಾಡಿ, ಚಕ್ಲಿ ಸುತ್ತಿ ಕಾದ ಎಣ್ಣೆಯಲ್ಲಿ ಗರಿಯಾಗುವವರೆಗೆ ಕರಿಯಿರಿ. 

English version

ಕಾಮೆಂಟ್‌ಗಳು