ಗೆಣಸಲೆ | ಸಿಹಿ ಕಡುಬು

ಗೆಣಸಲೆ - ಇದು ನಮ್ಮೂರ ಕಡೆ ತಯಾರಿಸುವ ಒಂದು ಬಗೆಯ ಸಿಹಿ ಕಡುಬು. ದಾಲ್ಚಿನ್ನಿ ಎಲೆಯಮೇಲೆ ಹಿಟ್ಟನ್ನು ಹಚ್ಚಿ, ನಡುವೆ ಸಿಹಿ ಹೂರಣವನ್ನಿಟ್ಟು ಹಬೆಯಲ್ಲಿ ಬೇಯಿಸುವ ಈ ಖಾದ್ಯ ಪರಿಮಳ ಭರಿತವಾಗಿ ಬಹಳ ರುಚಿಯಾಗಿರುತ್ತದೆ.
ನಮ್ಮ ಮನೆಯ ಹತ್ತಿರವೇ ಇರುವ ಒಬ್ಬರು ಇತ್ತೀಚೆಗೆ ಒಂದಿಷ್ಟು ತಾಜಾ ದಾಲ್ಚಿನ್ನಿ ಎಲೆಗಳನ್ನು ಕೊಟ್ಟಿದ್ದರು. ಹೀಗಾಗಿ ಅಪರೂಪಕ್ಕೆ ದಾಲ್ಚಿನ್ನಿ ಎಲೆ ಸಿಕ್ಕಾಗ ತಯಾರಾದ ಬಹು ಅಪರೂಪದ ಖಾದ್ಯ ಇದು! ದಾಲ್ಚಿನ್ನಿ ಎಲೆಯ ಬದಲು ಅರಿಶಿನ ಎಲೆ ಬಳಸಿಯೂ ಈ ಕಡುಬನ್ನು ತಯಾರಿಸಬಹುದು.


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಕಷ್ಟಕರ
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
  • ಮೀಡಿಯಮ್ ಸೈಜಿನ ದಾಲ್ಚಿನ್ನಿ ಎಲೆ (ಬೇ ಲೀಫ್) - 15ರಿಂದ 20
- ಕಣಕಕ್ಕೆ:
  • ಸೂಜಿ ರವಾ - 3/4 ಕಪ್ 
  • ಉಪ್ಪು - 1/3 ಟೀ ಸ್ಪೂನ್
  • ಬೆಲ್ಲ - 1 1/2 ಟೇಬಲ್ ಸ್ಪೂನ್
  • ಅರಿಶಿನ - 1/4 ಟೀ ಸ್ಪೂನ್
  • ನೀರು - ಸ್ವಲ್ಪ
- ಹೂರಣಕ್ಕೆ:
  • ತೆಂಗಿನತುರಿ - 1/2 ಕಪ್ (ಅಳತೆ ಮಾಡುವಾಗ ತುರಿಯನ್ನು ಕಪ್ ನಲ್ಲಿ ಪ್ರೆಸ್ ಮಾಡಿ ತುಂಬಿ)
  • ಬೆಲ್ಲ - 1/3 ಕಪ್ ಅಥವಾ ರುಚಿಗೆ ತಕ್ಕಷ್ಟು
  • ಏಲಕ್ಕಿಪುಡಿ - 1/2 ಟೀ ಸ್ಪೂನ್
  • ನೀರು - 1 ಟೇಬಲ್ ಸ್ಪೂನ್ (ಟಿಪ್ಸ್ ನೋಡಿ)

ತಯಾರಿಸುವ ವಿಧಾನ:
  • ದಾಲ್ಚಿನ್ನಿ ಎಲೆಗಳನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ. 
  • ತೆಂಗಿನತುರಿಯನ್ನು ಮಿಕ್ಸಿಯಲ್ಲಿ ಅರ್ಧ ನಿಮಿಷ ರುಬ್ಬಿ ತೆಗೆಯಿರಿ. 
  • ಒಂದು ದಪ್ಪ ತಳದ ಬಾಣಲಿಯಲ್ಲಿ ತೆಂಗಿನತುರಿ, ಬೆಲ್ಲ, 1- 2 ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿ ಬಿಸಿಗಿಡಿ. 
  • ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ ಚೆನ್ನಾಗಿ ಮಿಕ್ಸ್ ಮಾಡಿ. 
  • 10 - 12 ನಿಮಿಷಕ್ಕೆ ಈ ಮಿಶ್ರಣ ನೀರಿನಂಶ ಆರಿ, ಸ್ವಲ್ಪ ಗಟ್ಟಿಯಾಗತೊಡಗುತ್ತದೆ. ಆಗ ಏಲಕ್ಕಿಪುಡಿ ಸೇರಿಸಿ ಉರಿ ಆಫ್ ಮಾಡಿ, ಮಿಶ್ರಣ ತಣ್ಣಗಾಗಲು ಬಿಡಿ. 
  • ಸೂಜಿ ರವೆಯನ್ನು ಒಂದು ಪಾತ್ರೆಯಲ್ಲಿ ಹಾಕಿ, ಇದಕ್ಕೆ ನೆನೆಯಲು ಬೇಕಾಗುವಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ, 5 ನಿಮಿಷ ನೆನೆಯಲು ಬಿಡಿ. 
  • ಐದು ನಿಮಿಷದ ನಂತರ ಹೆಚ್ಚಿನ ನೀರನ್ನು ತೆಗೆದುಬಿಡಿ. ಆದರೆ ಗಟ್ಟಿಯಾಗಿ ಹಿಂಡಬೇಡಿ. 
  • ನೆನೆದ ರವೆಯನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ ಒಂದು ನಿಮಿಷಕಾಲ ತಿರುವಿ. ಮಿಶ್ರಣ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ. ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. 
  • ಒಂದು ದಪ್ಪ ತಳದ ಪಾತ್ರೆಯಲ್ಲಿ ರುಬ್ಬಿದ ರವೆ, ಉಪ್ಪು, ಬೆಲ್ಲ, ಅರಿಶಿನ ಸೇರಿಸಿ ಮಿಕ್ಸ್ ಮಾಡಿ. 
  • ಮಿಶ್ರಣವನ್ನು ಸಣ್ಣ ಅಥವಾ ಮಾಧ್ಯಮ ಉರಿಯಲ್ಲಿ ಬಿಡದೆ ಕೈಯಾಡಿಸಿ. ಮಿಶ್ರಣ ದಪ್ಪಗಾಗಿ, ಹಿಟ್ಟಿನ ಬಣ್ಣ ಬದಲಾದಾಗ ಉರಿ ಆಫ್ ಮಾಡಿ ತಣ್ಣಗಾಗಲು ಬಿಡಿ. ಮಿಶ್ರಣ ಚಪಾತಿ ಹಿಟ್ಟಿನ ಹದಕ್ಕಿರಲಿ; ಒಮ್ಮೆ ಕೈಯಲ್ಲಿ ನಾದಿಕೊಂಡರೆ ಉತ್ತಮ.  
  • ಒಂದು ಅಗಲವಾದ ಪಾತ್ರೆಯಲ್ಲಿ 3 - 4 ಕಪ್ ನಷ್ಟು ನೀರು ಹಾಕಿ ಇದಕ್ಕೆ ಕಾಲು ಚಮಚದಷ್ಟು ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಎಣ್ಣೆ ಹಾಕಿದ ನೀರಿನಲ್ಲಿ ಎಲೆಗಳನ್ನು ಅದ್ದಿಕೊಳ್ಳುವುದರಿಂದ ಗೆಣಸಲೆ ಬೆಂದ ನಂತರ ಎಲೆಗೆ ಅಂಟುವುದಿಲ್ಲ. 
  • ದಾಲ್ಚಿನ್ನಿ ಎಲೆಯನ್ನು ಒಂದೊಂದಾಗಿ ತೆಗೆದುಕೊಂಡು ನೀರಿನಲ್ಲಿ ಒದ್ದೆ ಮಾಡಿಕೊಳ್ಳಿ. 
  • ರವಾ ಮಿಶ್ರಣವನ್ನು ಚಿಕ್ಕ ಉಂಡೆಯಷ್ಟು ತೆಗೆದುಕೊಂಡು, ದಾಲ್ಚಿನ್ನಿ ಎಲೆಯ ಮೇಲ್ಭಾಗಕ್ಕೆ ತೆಳ್ಳಗೆ ಹಚ್ಚಿ. 
  • ಇದರಮೇಲೆ ಒಂದು ಟೀ ಚಮಚದಷ್ಟು (ಅಥವಾ ಹೆಚ್ಚು) ತೆಂಗಿನತುರಿ ಮಿಶ್ರಣ ಹಾಕಿ, ಹೂರಣ ಒಳಗೆ ಬರುವಂತೆ ಎಲೆಯನ್ನು ಅರ್ಧಕ್ಕೆ ಮಡಿಚಿ. ಹೂರಣ ಹೊರಬರದಂತೆ ಅಂಚುಗಳನ್ನು ನಾಜೂಕಾಗಿ ಪ್ರೆಸ್ ಮಾಡಿ. 
  • ಇದೇ ರೀತಿ ಬೇಕಾದಷ್ಟು ಎಲೆಗಳನ್ನು ರೆಡಿ ಮಾಡಿಕೊಂಡು ಒಂದು ಪ್ಲೇಟ್ ನಲ್ಲಿಟ್ಟು ಸ್ಟೀಮರ್ ನಲ್ಲಿ ಇಟ್ಟು 5 ನಿಮಿಷ ಬೇಯಿಸಿ. ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದಾದರೆ ವಿಸಿಲ್ ತೆಗೆದಿಟ್ಟು ಬೇಯಿಸಿ. 
  • ದಾಲ್ಚಿನ್ನಿ ಎಲೆಯನ್ನು ಬೇರ್ಪಡಿಸಿ, ಬಿಸಿಯಾದ ಪರಿಮಳ ಭರಿತ ಗೆಣಸಲೆ ಯನ್ನು ತುಪ್ಪದೊಡನೆ ಸವಿಯಿರಿ. 

ಟಿಪ್ಸ್:
  • ನಾನು ತುರಿದ ಬೆಲ್ಲ ಬಳಸಿರುವುದರಿಂದ, ಬೆಲ್ಲ ಕರಗಲು ಒಂದು ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿದ್ದೇನೆ. ಜೋನಿ ಬೆಲ್ಲ ಬಳಸಿದರೆ ನೀರು ಹಾಕಬೇಕಿಲ್ಲ. 
  • ದಾಲ್ಚಿನ್ನಿ ಎಲೆಯ ಬದಲು ಅರಿಶಿನ ಎಲೆ ಬಳಸಿಯೂ ಈ ಕಡುಬನ್ನು ತಯಾರಿಸಬಹುದು. 
  • ಎಲೆಯಮೇಲೆ ಹಚ್ಚುವುದು ಕಷ್ಟವೆನಿಸಿದರೆ ಕಡುಬನ್ನು ಹಾಗೆಯೇ ತಯಾರಿಸಿ, ಬೇಯಿಸುವಾಗ ಗೆಣಸಲೆಯ ಮೇಲ್ಭಾಗಕ್ಕೆ ದಾಲ್ಚಿನ್ನಿ ಎಲೆಗಳನ್ನಿಟ್ಟು ಬೇಯಿಸಿ. 
English version

ಕಾಮೆಂಟ್‌ಗಳು