ಕ್ಯಾಬೇಜ್ - ಮೊಳಕೆ ಹೆಸರುಕಾಳು ಮಸಾಲೆ ಪಲ್ಯ

ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಧ್ಯಾಹ್ನ ಊಟಕ್ಕೆ ಅನ್ನ ಮಾಡಿದರೆ, ಸಂಜೆ ಊಟಕ್ಕೆ ಚಪಾತಿ. ಹೀಗಾಗಿ ಅಡುಗೆ ಮಾಡುವಾಗ ನಾನು ಸಾಂಬಾರ್, ದಾಲ್ ಅಥವಾ ಪಲ್ಯ ಯಾವುದಾದರೊಂದು ಐಟಮ್ ಅನ್ನ ಹಾಗೂ ಚಪಾತಿ ಇವೆರಡಕ್ಕೂ ಸೂಟ್ ಆಗುವಂತೆ ಪ್ಲಾನ್ ಮಾಡಿಕೊಳ್ಳುತ್ತೇನೆ. 
ಈಗ ನಾನು ಶೇರ್ ಮಾಡುತ್ತಿರುವ ಕ್ಯಾಬೇಜ್ - ಮೊಳಕೆ ಹೆಸರುಕಾಳು ಮಸಾಲೆ ಪಲ್ಯ ಅನ್ನ, ಚಪಾತಿ, ದೋಸೆ, ಪೂರಿ ಇವೆಲ್ಲದರೊಡನೆಯೂ ಒಳ್ಳೆಯ ಕಾಂಬಿನೇಷನ್. 


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
  • ಸಣ್ಣಗೆ ಹೆಚ್ಚಿದ ಕ್ಯಾಬೇಜ್ - 3 ಕಪ್ 
  • ಮೊಳಕೆಬಂದ ಹೆಸರುಕಾಳು - 1/2 ಕಪ್ (ಜಾಸ್ತಿ ಬೇಕಿದ್ದರೂ ಬಳಸಬಹುದು)
  • ಉಪ್ಪು - ರುಚಿಗೆ ತಕ್ಕಷ್ಟು 
  • ಆಮಚೂರ್ ಪುಡಿ / ಹುಳಿಪುಡಿ - 3/4 ಟೀ ಚಮಚ 
  • ಸಕ್ಕರೆ - 1/3 ಟೀ ಚಮಚ 
  • ಪಾವ್ ಭಾಜಿ ಮಸಾಲಾ ಪುಡಿ - 1 ಟೀ ಚಮಚ 
  • ಅಚ್ಚ ಖಾರದ ಪುಡಿ - 1/4 ಟೀ ಚಮಚ (ಖಾರಕ್ಕೆ ತಕ್ಕಷ್ಟು)
 - ಒಗ್ಗರಣೆಗೆ:
  • ಎಣ್ಣೆ - 1 1/2 ಟೇಬಲ್ ಚಮಚ 
  • ಒಣಮೆಣಸು - 1 ಇಂಚು ಚೂರು 
  • ಉದ್ದಿನಬೇಳೆ - 1 ಟೀ ಚಮಚ 
  • ಸಾಸಿವೆ - 1 ಟೀ ಚಮಚ 
  • ಅರಿಶಿನ - 1/3 ಟೀ ಚಮಚ 
  • ಹಸಿಮೆಣಸು - 1
  • ಕರಿಬೇವು - 5ರಿಂದ 6 ಎಲೆಗಳು 

ತಯಾರಿಸುವ ವಿಧಾನ:
  • ಒಂದು ದಪ್ಪ ತಳದ ಬಾಣಲೆಯಲ್ಲಿ ಒಂದೂವರೆ ಟೇಬಲ್ ಚಮಚದಷ್ಟು ಎಣ್ಣೆ ಬಿಸಿಮಾಡಿ. ಇದಕ್ಕೆ ಒಣಮೆಣಸಿನ ಚೂರು, ಉದ್ದಿನಬೇಳೆ, ಸಾಸಿವೆ ಸೇರಿಸಿ ಹುರಿಯಿರಿ. 
  • ಸಾಸಿವೆ ಚಟಪಟ ಎಂದಾಗ ಅರಿಶಿನ, ಹಸಿಮೆಣಸಿನ ಚೂರು, ಕರಿಬೇವು ಸೇರಿಸಿ ಕೈಯಾಡಿಸಿ. 
  • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಬೇಜ್, ಮೊಳಕೆಬಂದ ಹೆಸರುಕಾಳು ಸೇರಿಸಿ ಕೈಯಾಡಿಸಿ, ಬಾಣಲೆಗೆ ಮುಚ್ಚಳ ಮುಚ್ಚಿ ಬೇಯಿಸಿ. 
  • ಮಿಶ್ರಣ ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ. ಈ ಪಲ್ಯಕ್ಕೆ ನಾನು ನೀರು ಸೇರಿಸಿಲ್ಲ. ಪಲ್ಯದ ಮಿಶ್ರಣ ತೀರಾ ಡ್ರೈ ಎನಿಸಿದರೆ 2ಅಥವಾ 3 ಚಮಚದಷ್ಟು ನೀರು ಸೇರಿಸಬಹುದು. 
  • ಮಿಶ್ರಣ ಮುಕ್ಕಾಲುಭಾಗ ಬೆಂದಾಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮಚೂರ್ ಪೌಡರ್ / ಹುಳಿಪುಡಿ, ಪಾವ್ ಭಾಜಿ ಮಸಾಲಾ, ಅಚ್ಚ ಮೆಣಸಿನ ಪುಡಿ - ಇಷ್ಟನ್ನೂ ಸೇರಿಸಿ ಕೈಯಾಡಿಸಿ, ಮಿಶ್ರಣ ಪೂರ್ತಿ ಬೇಯುವವರೆಗೆ ಬೇಯಿಸಿ. 
  • ಈ ಪಲ್ಯ ಅನ್ನ, ಚಪಾತಿ, ಪೂರಿ, ದೋಸೆಯೊಡನೆ ಚೆನ್ನಾಗಿರುತ್ತದೆ. 

ಟಿಪ್ಸ್:
  • ಹಸಿಮೆಣಸು ಬಳಸದಿದ್ದರೆ ಅಚ್ಚಖಾರದ ಪುಡಿಯನ್ನು ಸ್ವಲ್ಪ ಜಾಸ್ತಿ ಹಾಕಿ. 
  • ಸಿಹಿ ಇಷ್ಟವಾಗದಿದ್ದರೆ ಸಕ್ಕರೆ ಬಳಸಬೇಡಿ. 
  • ಪಾವ್ ಭಾಜಿ ಮಸಾಲಾ ಬದಲು ಸಾಂಬಾರ್ ಪುಡಿ ಅಥವಾ ಇನ್ಯಾವುದೇ ಮಸಾಲಾ ಪುಡಿ ಬಳಸಬಹುದು. 

ಕಾಮೆಂಟ್‌ಗಳು