Click here for English version
'ತಂಬ್ಳಿ' - ಇದು ಮಜ್ಜಿಗೆ ಬಳಸಿ ತಯಾರಿಸುವ ಒಂದು ಸರಳವಾದ ಹಾಗೂ ಆರೋಗ್ಯಕರವಾದ ಮೇಲೋಗರ. ಬೇಸಿಗೆ ಬಂತೆಂದರೆ ಹವ್ಯಕರ ಮನೆಗಳಲ್ಲಿ ಸಾಮಾನ್ಯವಾಗಿ ದಿನವೂ ಊಟಕ್ಕೆ ಒಂದು ಬಗೆಯ ತಂಬ್ಳಿ ಇದ್ದೇ ಇರುತ್ತದೆ. 'ತಂಬ್ಳಿ' ತಯಾರಿಸಲು ಯಾವುದೇ ವಿಶೇಷವಾದ ಸಾಮಗ್ರಿಗಳು ಬೇಕಿಲ್ಲ. ತೊಂಡೆಬಳ್ಳಿಯ ಎಲೆಯಿಂದ ತಂಬ್ಳಿ ತಯಾರಿಸುವ ವಿಧಾನ ಇಲ್ಲಿದೆ:
- ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು
- ಡಿಫಿಕಲ್ಟಿ ಲೆವೆಲ್: ಮೀಡಿಯಮ್
- ಸರ್ವಿಂಗ್ಸ್: 4 - 5 ಜನರಿಗೆ ಆಗುತ್ತದೆ
ತಯಾರಿಸಲು ಬೇಕಾಗುವ ಸಾಮಗ್ರಿಗಳು:
- ತೊಂಡೆಬಳ್ಳಿಯ ಎಲೆ - 5 ಅಥವಾ 6
- ತೆಂಗಿನತುರಿ - 3/4 ಕಪ್
- ಮಜ್ಜಿಗೆ - 1 ಕಪ್
- ಎಣ್ಣೆ - 2 1/2 ಟೀ ಚಮಚ (ಟಿಪ್ಸ್ ನೋಡಿ)
- ಕಾಳುಮೆಣಸು - 4
- ಜೀರಿಗೆ - 2 ಟೀ ಚಮಚ
- ಸಾಸಿವೆ - 1ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ - 1/4 ಟೀ ಚಮಚ
- ನಿಂಬೆರಸ - 2 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
- ತೊಂಡೆ ಎಲೆಗಳನ್ನು ನೀರಿನಲ್ಲಿ ಸ್ವಚ್ಛವಾಗುವಂತೆ ತೊಳೆದು, ದೊಡ್ಡ ಚೂರುಗಳಾಗಿ ಕತ್ತರಿಸಿಕೊಳ್ಳಿ.
- ಒಗ್ಗರಣೆ ಸೌಟು ಅಥವಾ ಒಂದು ಚಿಕ್ಕ ಬಾಣಲೆಯಲ್ಲಿ 1 ಟೀ ಚಮಚದಷ್ಟು ಎಣ್ಣೆ ಬಿಸಿಮಾಡಿ ಕಾಳುಮೆಣಸು ಸೇರಿಸಿ ಚಟಪಟ ಎನ್ನುವಂತೆ 2-3 ನಿಮಿಷ ಹುರಿಯಿರಿ.
- ನಂತರ 1 ಟೀ ಚಮಚದಷ್ಟು ಜೀರಿಗೆ ಸೇರಿಸಿ ಪರಿಮಳ ಬರುವಂತೆ ಒಂದು ನಿಮಿಷ ಹುರಿದು, ಚೂರುಮಾಡಿದ ತೊಂಡೆ ಎಲೆ ಸೇರಿಸಿ ಎರಡು ನಿಮಿಷ ಅಥವಾ ಎಲೆ ಸ್ವಲ್ಪ ಬಾಡುವತನಕ ಹುರಿದು ಉರಿ ಆಫ್ ಮಾಡಿ.
- ಹುರಿದ ಮಿಶ್ರಣವನ್ನು ತೆಂಗಿನತುರಿಯೊಡನೆ ಸೇರಿಸಿ ರುಬ್ಬಿ ನುಣ್ಣಗಿನ ಪೇಸ್ಟ್ ಮಾಡಿಕೊಳ್ಳಿ. ರುಬ್ಬುವಾಗ ಅಗತ್ಯವಿರುವಷ್ಟು ನೀರು ಬಳಸಿ.
- ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, 1/4 ಟೀ ಚಮಚದಷ್ಟು ಸಕ್ಕರೆ, ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ ತುಂಬ ದಪ್ಪವೆನ್ನಿಸಿದರೆ ಸ್ವಲ್ಪ ನೀರು ಸೇರಿಸಿ ಹದಮಾಡಿಕೊಳ್ಳಿ.
- ಒಗ್ಗರಣೆ ಸೌಟು ಅಥವಾ ಒಂದು ಚಿಕ್ಕ ಬಾಣಲೆಯಲ್ಲಿ 1 1/2 ಟೀ ಚಮಚದಷ್ಟು ಎಣ್ಣೆ ಬಿಸಿಮಾಡಿ ಸಾಸಿವೆ, ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ ತಂಬ್ಳಿಗೆ ಸೇರಿಸಿ.
- ಆರೋಗ್ಯಕರ ಹಾಗೂ ರುಚಿಕರವಾದ ತೊಂಡೆ ಎಲೆ ತಂಬ್ಳಿಯನ್ನು ಅನ್ನದೊಡನೆ ಸವಿಯಿರಿ.
ಟಿಪ್ಸ್:
- ಒಗ್ಗರಣೆಗೆ ಸನ್ ಫ್ಲವರ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆ ಬಳಸಿದರೆ ಉತ್ತಮ
- ಮಜ್ಜಿಗೆ ಹುಳಿಯಾಗಿದ್ದರೆ ನಿಂಬೆರಸ ಸೇರಿಸುವ ಅಗತ್ಯವಿಲ್ಲ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)