ಓಟ್ಸ್ ಸಮೋಸ / Oats Samosa

Click here for English version. 

ಹೈದರಾಬಾದ್ ನ ಪ್ರಸಿದ್ಧ ತಿಂಡಿಗಳಲ್ಲಿ ಈರುಳ್ಳಿ ಸಮೋಸವೂ ಒಂದು. ಹೊರಗಡೆಯಿಂದ ಗರಿಯಾಗಿ ಕಂಡರೂ, ಒಳಗಡೆ ಮೆತ್ತಗಿನ ಸ್ಟಫಿಂಗ್ ಹೊಂದಿರುವ ಈ ಸಮೋಸ ತಿನ್ನಲು ತುಂಬಾ ರುಚಿ. ವಾಹ್ ಚೆಫ್ ರವರ ವಿಡಿಯೋ ನೋಡಿ ನಾನು ಈ ಸಮೋಸ ತಯಾರಿಸುವುದನ್ನು ಕಲಿತದ್ದು. ನಂತರ ಮೂಲ ರೆಸಿಪಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಓಟ್ಸ್ ಬಳಸಿ ಸಮೋಸ ತಯಾರಿಸಿದೆ. ತಿನ್ನುವುದಕ್ಕಂತೂ ತುಂಬಾ ತುಂಬಾ ಚೆನ್ನಾಗಿತ್ತು! ಈ ಸಮೋಸವನ್ನು ತಯಾರಿಸಿ ಒಂದೆರಡು ದಿನ ಇಟ್ಟುಕೊಳ್ಳಬಹುದು. ಯಾರಾದರೂ ಅತಿಥಿಗಳು ಬರುವರೆಂದರೆ ಮೊದಲೇ ತಯಾರಿಸಿಟ್ಟು, ಬೇಕಾದಾಗ ಬಿಸಿಮಾಡಿಕೊಡಬಹುದು. ಟೀ ಟೈಮ್ ಗೆ ಇದು ಒಳ್ಳೆಯ ಸ್ನ್ಯಾಕ್ಸ್.
 
ತಯಾರಿಸಲು ಬೇಕಾಗುವ ಸಮಯ: 1 ಘಂಟೆ
ಸರ್ವಿಂಗ್ಸ್: 3
 
ಬೇಕಾಗುವ ಸಾಮಗ್ರಿಗಳು:
1 ) ಕಣಕಕ್ಕೆ: 
     ಗೋಧಿಹಿಟ್ಟು - 1 ಕಪ್
     ಮೈದಾಹಿಟ್ಟು - 1 ಕಪ್
     2 ಟೇಬಲ್ ಸ್ಪೂನ್ ಎಣ್ಣೆ
     ರುಚಿಗೆ ತಕ್ಕಷ್ಟು ಉಪ್ಪು     
     ಸ್ವಲ್ಪ ನೀರು 

2 ) ಸ್ಟಫಿಂಗ್ ಗೆ:
     ಹೆಚ್ಚಿದ ಈರುಳ್ಳಿ - 1 ಕಪ್ 
     ಇನ್ ಸ್ಟಂಟ್ ಓಟ್ಸ್ - 1 ಕಪ್  
     ಚಾಟ್ ಮಸಾಲಾ - 1 ಟೀ ಚಮಚ 
     ಮೆಣಸಿನಪುಡಿ - 1 ಟೀ ಚಮಚ 
     ಜೀರಿಗೆ ಪುಡಿ - 1/2 ಟೀ ಚಮಚ   
     ಹಸಿಮೆಣಸು (ಹೆಚ್ಚಿದ್ದು) - 2 
     ಹೆಚ್ಚಿದ ಕೊತ್ತಂಬರಿ ಸೊಪ್ಪು - 1 / 2 ಕಪ್ 
     ರುಚಿಗೆ ತಕ್ಕಷ್ಟು ಉಪ್ಪು 

3 ) ಇತರ ಸಾಮಗ್ರಿಗಳು:
     ಕರಿಯಲು ಎಣ್ಣೆ 
     ಮೈದಾಹಿಟ್ಟು - 3 ಟೇಬಲ್ ಚಮಚ 
     ನೀರು - ಸ್ವಲ್ಪ  

ಮಾಡುವ ವಿಧಾನ:
ಮೈದಾಹಿಟ್ಟು, ಗೋಧಿಹಿಟ್ಟು ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ 2 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ.
ನಂತರ ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಮೆತ್ತಗೆ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟನ್ನು ಮುಚ್ಚಿ, 15 - 20 ನಿಮಿಷ ನೆನೆಯಲು ಬಿಡಿ.
ಸ್ಟಫಿಂಗ್ ಗೆ ಮೇಲೆ ಹೇಳಿರುವ ಸಾಮಗ್ರಿಗಳನ್ನೂ ಸೇರಿಸಿ ಕಲಸಿ ಇಡಿ.

ಕಲಸಿಟ್ಟ ಹಿಟ್ಟಿನಿಂದ ತೆಳ್ಳಗಿನ ರೊಟ್ಟಿಗಳನ್ನು ಲಟ್ಟಿಸಿಕೊಂಡು, ಸುಮಾರು 15 cm ಉದ್ದ, 7 cm ಅಗಲದ ಆಯತಗಳಾಗಿ ಕತ್ತರಿಸಿಕೊಳ್ಳಿ.
ಇವನ್ನು ಕಾದ ಕಾವಲಿಯ ಮೇಲೆ ಅರ್ಧ ನಿಮಿಷ ಇಟ್ಟು, ಎರಡೂ ಬದಿಗಳನ್ನು ಬಿಸಿಮಾಡಿ ತೆಗೆಯಿರಿ.
3 ಚಮಚ ಮೈದಾಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ, ದಪ್ಪಗಿನ ಪೇಸ್ಟ್ ತಯಾರಿಸಿಕೊಳ್ಳಿ.
ಬೇಯಿಸಿಕೊಂಡ ಶೀಟ್ ನ ಒಂದು ಅಂಚಿಗೆ ಮೈದಾ ಪೇಸ್ಟ್ ಸವರಿಕೊಂಡು, ಶೀಟ್ ನ್ನು ಮಡಿಚಿ ಕೋನ್ ತಯಾರಿಸಿಕೊಳ್ಳಿ.
ಇದರೊಳಗೆ 2 ಟೇಬಲ್ ಸ್ಪೂನ್ ನಷ್ಟು ಸ್ಟಫಿಂಗ್ ತುಂಬಿ. ಮೈದಾ ಪೇಸ್ಟ್ ನ್ನು ಸವರಿಕೊಂಡು, ಸ್ಟಫಿಂಗ್ ಹೊರಬರದಂತೆ ಅಂಚುಗಳನ್ನು ಸರಿಯಾಗಿ ಅಂಟಿಸಿ.   
ಹೀಗೆ ಎಲ್ಲ ಸಮೋಸಗಳನ್ನೂ ತಯಾರಿಸಿಕೊಂಡು, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿಯಿರಿ.
ಈ ಸಮೋಸಗಳನ್ನು ಹಾಗೇ ತಿನ್ನಬಹುದು ಇಲ್ಲವೇ ಸಾಸ್ ಅಥವಾ ಕೆಚಪ್ ನೊಡನೆಯೂ ಹಾಕಿಕೊಡಬಹುದು.

ಟಿಪ್ಸ್:
  • ಸಮೋಸದ ಬಣ್ಣ ಚೆನ್ನಾಗಿ ಬರಲು ಮತ್ತು ಹೆಚ್ಚು ಗರಿಗರಿಯಾಗಲು ಅದನ್ನು ಎರಡು ಬಾರಿ ಕರಿಯಿರಿ. ಆದರೆ ಎರಡು ಬಾರಿ ಕರಿಯುವುದರಿಂದ ಸಮೋಸ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)