Click here for English version.
ಇತ್ತೀಚೆಗೆ ಅಡಿಗೆಗಳನ್ನು ನಿಯಮಿತವಾಗಿ ಹಾಕಲು ಸಾಧ್ಯವಾಗದಿದ್ದರಿಂದ ಕ್ಲಿಕ್ಕಿಸಿದ ಅನೇಕ ಅಡಿಗೆಗಳ ಫೊಟೋಗಳು ಹಾಗೇ ಉಳಿದಿದ್ದವು. ಅವನ್ನೆಲ್ಲ ನೋಡುತ್ತಿದ್ದಂತೆ ಒಂದಾದರೂ ರೆಸಿಪಿ ಬರೆದು ಹಾಕೋಣವೆನ್ನಿಸಿ ಈ ಪೋಸ್ಟಿಂಗ್ ಶುರು ಮಾಡುತ್ತಿದ್ದೇನೆ :)
ಹವ್ಯಕರ ಸಾಂಪ್ರದಾಯಿಕ ಅಡಿಗೆಗಳಲ್ಲಿ ಮರಿಗೆ ಗೊಜ್ಜು ಕೂಡ ಒಂದು. ಈ ಗೊಜ್ಜನ್ನು ತಯಾರಿಸಲು ಹಿಂದಿನವರು 'ಮರಿಗೆ' ಎನ್ನುವ ಒಂದು ವಿಶೇಷ ಬಗೆಯ ಪಾತ್ರೆಯನ್ನು ಬಳಸುತ್ತಿದ್ದರಂತೆ. ಇದು ಮರದ ಪಾತ್ರೆಯಾಗಿದ್ದು ಗೊಜ್ಜನ್ನು ನುಣ್ಣಗೆ ಅರೆಯಲು ಚೆನ್ನಾಗಿರುತ್ತದೆ. ಹಳೆಯ ಕಾಲದ ಮನೆಗಳಲ್ಲಿ ಇಂಥ ಪಾತ್ರೆ ಸಾಮಾನ್ಯವಾಗಿ ಕಂಡುಬರುತ್ತದೆ. ಇಂದಿನ ದಿನಗಳಲ್ಲಿ ಈ ಪಾತ್ರೆಯ ಬಳಕೆ ಬಹಳ ಕಡಿಮೆ. ಹಾಗೇ ಇಂಥ ಹಳೆಯ ಅಡಿಗೆಗಳೂ ನಿಧಾನವಾಗಿ ಮರೆಯಾಗುತ್ತಿವೆ.
ಅಮ್ಮನಿಂದ ಕಲಿತ ಮರಿಗೆ ಗೊಜ್ಜಿನ ರೆಸಿಪಿ ಇಲ್ಲಿದೆ.. ಊಟಕ್ಕೆ ಒಳ್ಳೆಯ ರುಚಿ ಕೊಡುವ ಈ ಗೊಜ್ಜನ್ನು ನೀವೂ ತಯಾರಿಸಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಎಣ್ಣೆ - 2 1/2 ಚಮಚ
ಉದ್ದಿನಬೇಳೆ - 1/4 ಚಮಚ
5 - 6 ಒಣಮೆಣಸು
ಎಳ್ಳು - 1/2 ಚಮಚ
ಚಿಟಿಕೆ ಇಂಗು
ಸಾಸಿವೆ - 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಗಟ್ಟಿ ಮೊಸರು - 1 ರಿಂದ 1 1/4 ಕಪ್
ಮಾಡುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದ ನಂತರ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಎಳ್ಳು, ಇಂಗು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
ಒಗ್ಗರಣೆ ಮಿಶ್ರಣವನ್ನು ಉರಿಯಿಂದ ಇಳಿಸುವ ಮೊದಲು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಮಿಶ್ರಣ ತಣ್ಣಗಾದ ನಂತರ ಒಂದು ಸೌಟನ್ನು ತೆಗೆದುಕೊಂಡು ಮಿಶ್ರಣವನ್ನು ಚೆನ್ನಾಗಿ ಅರೆಯಿರಿ. ಮಿಶ್ರಣ ನುಣ್ಣಗೆ ಪುಡಿಮಾಡಿದಷ್ಟೂ ಒಳ್ಳೆಯದು. ಮಿಶ್ರಣವನ್ನು ನುಣ್ಣಗೆ ಪುಡಿಮಾಡಲು ಚಿಕ್ಕ ರುಬ್ಬುವ ಕಲ್ಲನ್ನು ಬಳಸಿದರೂ ಆಗುತ್ತದೆ.
ಪುಡಿಮಾಡಿದ ಮಿಶ್ರಣಕ್ಕೆ 3 - 4 ಸೌಟು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಮರಿಗೆ ಗೊಜ್ಜು ಅನ್ನದೊಡನೆ ಸವಿಯಲು ಸಿದ್ಧ.
ನಾನು ಮರಿಗೆ ಗೊಜ್ಜಿನ ಪಾಕ ವಿಧಾನವನ್ನು ಇಲ್ಲಿ ಬರೆಯುತ್ತಿರುವ ವಿಷಯವನ್ನು ನನ್ನ ಅಜ್ಜಿಗೆ ಹೇಳಿದಾಗ ಅವರು ಮರಿಗೆ ಗೊಜ್ಜಿಗೆ ಏನೇನು ಸಾಮಗ್ರಿಗಳನ್ನು ಬಳಸಿರುವೆಯೆಂದು ನನ್ನನ್ನು ಕೇಳಿದರು. ನಾನು ಇಲ್ಲಿ ಬಳಸಿರುವ ಸಾಮಗ್ರಿಗಳನ್ನು ಹೇಳಿದಾಗ ಅವರು ಈ ಗೊಜ್ಜಿನ ರುಚಿ ಹೆಚ್ಚಿಸಲು ಇನ್ನೊಂದು ಟಿಪ್ಸ್ ಕೊಟ್ಟರು! ಅದೇನೆಂದರೆ, 1/2 ಚಮಚದಷ್ಟು ಜಜ್ಜಿದ ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಸೇರಿಸಿದರೆ ಈ ಗೊಜ್ಜಿನ ರುಚಿ ಇನ್ನೂ ಚೆನ್ನಾಗಿರುತ್ತದೆ. ನಿಮಗೆ ಬೆಳ್ಳುಳ್ಳಿ ಇಷ್ಟವಾದರೆ ಖಂಡಿತವಾಗಿಯೂ ಇದನ್ನು ಟ್ರೈ ಮಾಡಿ.
ಟಿಪ್ಸ್:
- ಮರಿಗೆ ಗೊಜ್ಜನ್ನು ತಯಾರಿಸಲು ಸಾಮಗ್ರಿಗಳನ್ನು ಚೆನ್ನಾಗಿ ಅರೆಯುವುದರಿಂದ ಒಳ್ಳೆಯ ರುಚಿ ಬರುತ್ತದೆ. ಹೀಗಾಗಿ ಮಿಕ್ಸಿಯಲ್ಲಿ ಪುಡಿಮಾಡುವುದು ಸುಲಭದ ಕೆಲಸವಾದರೂ ಈ ಗೊಜ್ಜಿಗೆ ಅದು ಚೆನ್ನಾಗಿರುವುದಿಲ್ಲ.
Thanks. I will try today.
ಪ್ರತ್ಯುತ್ತರಅಳಿಸಿ