Click here for English version.
ಗಣೇಶ ಚತುರ್ಥಿಯ ಸ್ಪೆಷಲ್ ತಿಂಡಿಗಳಲ್ಲಿ ಮೋದಕವೂ ಒಂದು. ಮೋದಕ ಹಾಗೂ ಪಂಚಕಜ್ಜಾಯ ಇವೆರಡೂ ಗಣಪತಿಗೆ ಅತ್ಯಂತ ಪ್ರಿಯವಾದ ತಿನಿಸುಗಳೆಂದು ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಆದರೆ ಹಬ್ಬದಲ್ಲಿ ತಯಾರಿಸುವ ಎಲ್ಲ ತಿಂಡಿಗಳೂ ನಮ್ಮ ನಾಲಿಗೆಗೆ ರುಚಿಕರವಂತೂ ಹೌದು!
ಚೌತಿ ಹಬ್ಬದ ತಯಾರಿ ನಮ್ಮ ಮನೆಯಲ್ಲಿ ಈಗಾಗಲೇ ಶುರುವಾಗಿದೆ. ನಾನು ಯಾವಾಗಲೂ ಮೋದಕ ತಯಾರಿಸುವಾಗ ಹೊದಿಕೆಗೆ ಅಕ್ಕಿಹಿಟ್ಟನ್ನು ಬಳಸುತ್ತಿದ್ದೆ. ಈ ಬಾರಿ ನನ್ನ ಅಕ್ಕ ಹೇಳಿದಂತೆ ಅಕ್ಕಿ ಹಿಟ್ಟಿನ ಬದಲು ಮೈದಾ ಹಿಟ್ಟನ್ನು ಬಳಸಿದೆ. ಗರಿಗರಿಯಾದ ಮೇಲು ಹೊದಿಕೆಯ ಸಿಹಿಯಾದ ಮೋದಕ ನಮಗೆಲ್ಲ ತುಂಬ ಇಷ್ಟವಾಯಿತು. ರುಚಿಕರವಾದ ಈ ಮೋದಕವನ್ನು ಹಬ್ಬಕ್ಕೆ ನೀವೂ ತಯಾರಿಸಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 1 1/2 ಘಂಟೆ
ಡಿಫಿಕಲ್ಟಿ ಲೆವೆಲ್: ಕಷ್ಟಕರ
ಈ ಅಳತೆಯಿಂದ 30 ಮೋದಕಗಳನ್ನು ತಯಾರಿಸಬಹುದು
ಬೇಕಾಗುವ ಸಾಮಗ್ರಿಗಳು:
- ಕರಿಯಲು ಎಣ್ಣೆ
- ಸ್ಟಫಿಂಗ್ ಗೆ:
- ಸಕ್ಕರೆ - 1 1/2 ಕಪ್ (ಅಥವಾ ಸಿಹಿಯಾಗುವಷ್ಟು)
- ಬೆಲ್ಲ (ಬೇಕಿದ್ದರೆ) - 1 ಟೇಬಲ್ ಚಮಚ
- ಕೊಬ್ಬರಿತುರಿ / ತೆಂಗಿನತುರಿ - 3 ಕಪ್
- ನೀರು - 1 ಕಪ್
- ಎಳ್ಳು - 2 ಟೇಬಲ್ ಚಮಚ
- ಏಲಕ್ಕಿ ಪುಡಿ - 3/4 ಟೀ ಚಮಚ
- ಮೇಲು ಹೊದಿಕೆಗೆ:
- ಮೈದಾಹಿಟ್ಟು - 3 ಕಪ್
- ಉಪ್ಪು - ಒಂದು ದೊಡ್ಡ ಚಿಟಿಕೆ
- ತುಪ್ಪ - 1 1/2 ಟೀ ಚಮಚ
- ನೀರು - 1 ಕಪ್ (ಅಂದಾಜು)
ತಯಾರಿಸುವ ವಿಧಾನ:
- ಮೈದಾ ಹಿಟ್ಟಿಗೆ ಉಪ್ಪು, ತುಪ್ಪ ಸೇರಿಸಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. 3 - 4 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಮೆತ್ತಗಿದ್ದು, ಕೈಗಳಿಗೆ ಅಂಟದಂತಿರಲಿ. ಈ ಹಿಟ್ಟನ್ನು ದೊಡ್ಡ ಉಂಡೆ ಮಾಡಿ ಒಂದು ಪಾತ್ರೆಯಲ್ಲಿಟ್ಟು ಮುಚ್ಚಳ ಮುಚ್ಚಿ 15 - 20 ನಿಮಿಷ ಇಡಿ.
- ಒಂದು ದಪ್ಪ ತಳದ ಪಾತ್ರೆಯಲ್ಲಿ ತೆಂಗಿನತುರಿ / ಕೊಬ್ಬರಿತುರಿ, ಸಕ್ಕರೆ, ಬೆಲ್ಲ (ಬೇಕಿದ್ದರೆ) ಹಾಗೂ ನೀರು ಹಾಕಿ ಕುದಿಯಲು ಬಿಡಿ.
- ಎಳ್ಳನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದು ಇಟ್ಟುಕೊಳ್ಳಿ.
- ತೆಂಗಿನತುರಿ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ, ನೀರಿನಂಶವೆಲ್ಲ ಆರುವವರೆಗೆ ಬಿಡಿ. ನಂತರ ಇದಕ್ಕೆ ಹುರಿದ ಎಳ್ಳು, ಏಲಕ್ಕಿಪುಡಿ ಸೇರಿಸಿ ಉರಿಯನ್ನು ಆಫ್ ಮಾಡಿ.
- ಕಲಸಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು ಒಂದೇ ಅಳತೆಯ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಒಣ ಹಿಟ್ಟಿನಲ್ಲಿ ಹೊರಳಿಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ವೃತ್ತಾಕಾರಕ್ಕೆ ಲಟ್ಟಿಸಿ.
- ಲಟ್ಟಿಸಿದ ಪುಟ್ಟ ರೊಟ್ಟಿಯೊಳಗೆ ಒಂದು ಟೇಬಲ್ ಚಮಚದಷ್ಟು ತೆಂಗಿನತುರಿ ಮಿಶ್ರಣವನ್ನು ಹಾಕಿ. ರೊಟ್ಟಿಯ ಅಂಚುಗಳನ್ನು ಒಟ್ಟಿಗೆ ಸೇರಿಸಿ ನಾಜೂಕಾಗಿ ಬೆಸೆದು ಮೋದಕದ ಆಕಾರ ಕೊಡಿ.
- ತಯಾರಿಸಿದ ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದು ತೆಗೆಯಿರಿ.
ಟಿಪ್ಸ್:
- ಮೋದಕ ತಯಾರಿಸಲು ತಾಜಾ ತೆಂಗಿನತುರಿಯನ್ನು ಬಳಸಬಹುದು ಅಥವಾ ಒಣಕೊಬ್ಬರಿ ತುರಿಯನ್ನೂ ಬಳಸಬಹುದು.
- ಮೋದಕ ತಯಾರಿಸಲು ಸಕ್ಕರೆಯ ಬದಲು ಬೆಲ್ಲವನ್ನೂ ಬಳಸಬಹುದು. ಬೆಲ್ಲ ಬಳಸಿ ತಯಾರಿಸಿದರೆ ಮೋದಕ ಇನ್ನೂ ರುಚಿ!
- ಎಲ್ಲ ಕಡೆ ಒಂದೇ ಬಣ್ಣ ಬರಲು ಮೋದಕಗಳನ್ನು ಕರಿಯುವಾಗ ಪದೇ ಪದೇ ಅವನ್ನು ಸೌಟಿನಿಂದ ಕೈಯಾಡಿಸುತ್ತಿರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)