ಬೀಟ್ ರೂಟ್ - ಇದು ನೈಸರ್ಗಿಕವಾಗಿ ಸಿಹಿ ಅಂಶವನ್ನು ಹೊಂದಿರುವ ತರಕಾರಿ. ವಿವಿಧ ಪೋಷಕಾಂಶಗಳನ್ನು ಹೊಂದಿರುವ ಈ ತರಕಾರಿ ಸಾಂಬಾರ್, ಪಲ್ಯ, ಸಲಾಡ್, ಸ್ವೀಟ್ಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಬೀಟ್ರೂಟ್ ನ ಪಲ್ಯ ಹಾಗೂ ಸಾಂಬಾರ್ ನಮ್ಮ ಫೇವರಿಟ್ ಅಡುಗೆಗಳು. ಅದರಲ್ಲೂ ಬೀಟ್ರೂಟ್ ಪಲ್ಯವಂತೂ ಅನ್ನ, ಚಪಾತಿ, ಪೂರಿ ಎಲ್ಲದರೊಡನೆಯೂ ಚೆನ್ನಾಗಿರುತ್ತದೆ. ಬೀಟ್ ರೂಟ್ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು
ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
- ಬೀಟ್ ರೂಟ್ -1 1/2 ಗಡ್ಡೆ
- ಒಣಮೆಣಸು - 1
- ಉದ್ದಿನಬೇಳೆ - 1 ಟೀ ಸ್ಪೂನ್
- ಸಾಸಿವೆ - 1 ಟೀ ಸ್ಪೂನ್
- ಇಂಗು - ದೊಡ್ಡ ಚಿಟಿಕೆ
- ಅರಿಶಿನ - 1/4 ಟೀ ಸ್ಪೂನ್
- ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
- ಕರಿಬೇವು - 4 ಎಲೆಗಳು
- ಎಣ್ಣೆ - 3 ಟೇಬಲ್ ಸ್ಪೂನ್
- ತೆಂಗಿನತುರಿ - 1/2 ಕಪ್
- ಇರುಳ್ಳಿ - ಮೀಡಿಯಂ ಸೈಜಿನ ಈರುಳ್ಳಿಯ ಅರ್ಧಭಾಗ
- ಉಪ್ಪು - ರುಚಿಗೆ ತಕ್ಕಷ್ಟು
- ಆಮ್ ಚೂರ್ ಪೌಡರ್ - ರುಚಿಗೆ ತಕ್ಕಷ್ಟು
- ಸಕ್ಕರೆ - 1 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ನೀರು - 1 1/4 ಕಪ್ (ಬೇಯಲು ಬೇಕಾಗುವಷ್ಟು)
ತಯಾರಿಸುವ ವಿಧಾನ:
- ಬೀಟ್ ರೂಟ್ ನ್ನು ತೊಳೆದು, ಸಿಪ್ಪೆ ತೆಗೆಯಿರಿ. ನಂತರ ಇದನ್ನು ಸಣ್ಣಗೆ ಹೆಚ್ಚಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಇದಕ್ಕೆ ಒಣಮೆಣಸಿನ ಚೂರುಗಳು, ಉದ್ದಿನಬೇಳೆ, ಇಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಸಾಸಿವೆ ಚಟಪಟ ಎಂದ ನಂತರ ಅರಿಶಿನ, ಹೆಚ್ಚಿದ ಹಸಿಮೆಣಸು, ಕರಿಬೇವಿನ ಎಲೆಗಳನ್ನು ಸೇರಿಸಿ ಕೈಯಾಡಿಸಿ.
- ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಬೀಟ್ರೂಟ್ ಚೂರುಗಳನ್ನು ಸೇರಿಸಿ ಕೈಯಾಡಿಸಿ.
- ಪಲ್ಯದ ಮಿಶ್ರಣಕ್ಕೆ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 18 - 20 ನಿಮಿಷ ಬೇಯಿಸಿ. ಪಲ್ಯವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಮಿಶ್ರಣ ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ನೀರು ಸೇರಿಸಿ.
- ಪಲ್ಯದ ಮಿಶ್ರಣ ಮುಕ್ಕಾಲುಭಾಗ ಬೆಂದು ನೀರಿನಂಶ ಖಾಲಿಯಾಗುತ್ತ ಬಂದಾಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಸಕ್ಕರೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಈ ಮಿಶ್ರಣ 8 - 10 ನಿಮಿಷ ಬೆಂದ ನಂತರ ಉರಿಯನ್ನು ಆಫ್ ಮಾಡಿ.
- ರುಚಿಕಟ್ಟಾದ ಪಲ್ಯವನ್ನು ಅನ್ನ, ಚಪಾತಿ ರೊಟ್ಟಿ ಅಥವಾ ಪೂರಿಯೊಡನೆ ಹಾಕಿಕೊಂಡು ತಿನ್ನಿ.
ಟಿಪ್ಸ್:
- ಬೀಟ್ ರೂಟ್ ಗಡ್ಡೆಗಳು ತುಂಬಾ ಗಟ್ಟಿ ಇರುವುದರಿಂದ ಸಣ್ಣಗೆ ಹೆಚ್ಚಲು ಕಷ್ಟವೆನಿಸಿದರೆ ಇಲ್ಲೊಂದು ಸಲಹೆ: ಬೀಟ್ ರೂಟ್ ಗಡ್ಡೆಯನ್ನು 2 ಭಾಗಗಳಾಗಿ ಸೀಳಿಕೊಂಡು ಅವು ಮುಳುಗುವಷ್ಟು ನೀರು ಸೇರಿಸಿ ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿಕೊಂಡು, ತಣ್ಣಗಾದ ನಂತರ ಸಣ್ಣಗೆ ಹೆಚ್ಚಿಕೊಂಡು ಮೇಲೆ ಹೇಳಿದಂತೆ ಒಗ್ಗರಣೆ ಹಾಕಿ. ಗಡ್ಡೆಗಳನ್ನು ಬೇಯಿಸಿಕೊಂಡು ಹೆಚ್ಚುವುದಾದರೆ ಪಲ್ಯಕ್ಕೆ ನೀರು ಸೇರಿಸಿ ಬೇಯಿಸುವ ಅಗತ್ಯವಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)