ಒಣಗಿಸಿಟ್ಟ ಹಲಸಿನ ಸೊಳೆ ಬಜ್ಜಿ | ಒಣ ಹಲಸಿನ ತೊಳೆಯ ರಾಯಿತ

ಹಲಸಿನ ಸೀಜನ್ ಬಂತೆಂದರೆ ಸಾಕು, ನಮ್ಮೂರ ಕಡೆ ಬಗೆ ಬಗೆ ಖಾದ್ಯ ತಯಾರಿಸುವ ಸಂಭ್ರಮ! ಹಲಸಿನ ಗುಜ್ಜು ಬಿಟ್ಟಾಗ ಶುರುವಾಗುವ ಖಾದ್ಯ ತಯಾರಿ ಹಲಸು ಹಣ್ಣಾಗಿ ಖಾಲಿಯಾಗುವವರೆಗೂ ನಡೆಯುತ್ತದೆ. ನನ್ನ ತವರುಮನೆಯಲ್ಲಿ ಹಲಸಿನ ಚಿಪ್ಸ್, ಒಣಗಿಸಿದ ಹಲಸಿನ ಕಾಯಿ ತೊಳೆ, ಇತ್ಯಾದಿಗಳನ್ನು ಸೀಜನ್ ನಲ್ಲಿ ತಯಾರಿಸಿಟ್ಟು ವರ್ಷವಿಡೀ ಬಳಸುತ್ತಾರೆ. ನಾವು ಕಳೆದ ವರ್ಷ ಊರಿಗೆ ಹೋದಾಗ ತಂದಿದ್ದ ಒಣಗಿಸಿಟ್ಟ ಹಲಸಿನ ತೊಳೆ ಚೂರುಗಳು ನನ್ನ ಬಳಿ ಇನ್ನೂ ಇವೆ. ಅಪರೂಪಕ್ಕೊಮ್ಮೆ ಊರು ಕಡೆಯ ಅಡುಗೆ ಮಾಡಲು ಇವು ಬಹಳ ಚೆನ್ನ.
ಒಣಗಿಸಿದ ಹಲಸಿನ ಸೊಳೆ ಚೂರು ತಯಾರಿಸುವುದು ಹೇಗೆಂದು ನೋಡಲು ಇಲ್ಲಿ ಕ್ಲಿಕ್ ಮಾಡಿ.


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ತೊಳೆ ನೆನೆಸಿಡುವ ಸಮಯ: 20 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
  • ಒಣಗಿಸಿದ ಹಲಸಿನ ಸೊಳೆ ಚೂರುಗಳು - 1/2 ಕಪ್ 
  • ನೀರು - 3/4 ಕಪ್ 
  • ಉಪ್ಪು - ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
  • ನಿಂಬೆರಸ - 1 ಟೇಬಲ್ ಚಮಚ ಅಥವಾ ರುಚಿಗೆ ತಕ್ಕಷ್ಟು 
  • ಮೊಸರು - 1 ಕಪ್ 
 - ಒಗ್ಗರಣೆಗೆ: 
  • ಎಣ್ಣೆ - 1 1/2 ಟೇಬಲ್ ಚಮಚ  
  • ಒಣಮೆಣಸು - ಒಂದು ಮೆಣಸಿನ ಅರ್ಧಭಾಗ 
  • ಉದ್ದಿನಬೇಳೆ - 1 ಟೀ ಚಮಚ
  • ಸಾಸಿವೆ - 3/4 ಟೀ ಚಮಚ
  • ಹೆಚ್ಚಿದ ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
  • ಜಜ್ಜಿದ ಬೆಳ್ಳುಳ್ಳಿ - 1 ಟೀ ಚಮಚದಷ್ಟು 

ತಯಾರಿಸುವ ವಿಧಾನ:
  • ಒಣ ಹಲಸಿನ ತೊಳೆಯ ಚೂರುಗಳನ್ನು ಮುಕ್ಕಾಲು ಕಪ್ ನಷ್ಟು ನೀರಿನಲ್ಲಿ 20 ನಿಮಿಷ ನೆನೆಸಿಡಿ. 
  • ನೆನೆಸಿಟ್ಟ ಹಲಸಿನ ಚೂರುಗಳನ್ನು ನೆನೆಸಲು ಬಳಸಿದ ನೀರಿನೊಂದಿಗೆ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿ. 
  • ಸ್ವಲ್ಪ ತಣ್ಣಗಾದ ನಂತರ ಬೆಂದ ಹಲಸಿನ ಚೂರುಗಳನ್ನು ಹೊರತೆಗೆದು ಅದಲ್ಲಿರುವ ಹೆಚ್ಚಿನ ನೀರನ್ನು ತೆಗೆದುಬಿಡಿ. 
  • ಬೆಂದ ಹಲಸಿನ ತೊಳೆ ಚೂರುಗಳನ್ನು ಸೌಟಿನಿಂದ ಸ್ವಲ್ಪ ಮ್ಯಾಶ್ ಮಾಡಿಕೊಳ್ಳಿ. 
  • ಮ್ಯಾಶ್ ಮಾಡಿದ ಹಲಸಿನ ತೊಳೆಗೆ ಒಂದು ಕಪ್ ನಷ್ಟು ಮೊಸರು ಸೇರಿಸಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ ಸೇರಿಸಿ. 
  • ಒಗ್ಗರಣೆ ಸೌಟು ಅಥವಾ ಒಂದು ದಪ್ಪ ತಳದ ಪಾತ್ರೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದ ನಂತರ ಒಣಮೆಣಸು, ಉದ್ದಿನಬೇಳೆ, ಸಾಸಿವೆ ಹಾಕಿ. 
  • ಸಾಸಿವೆ ಸಿಡಿಯತೊಡಗಿದಾಗ ಹಸಿಮೆಣಸಿನ ಚೂರುಗಳು, ಜಜ್ಜಿದ ಬೆಳ್ಳುಳ್ಳಿ ಸೇರಿಸಿ 1- 2 ನಿಮಿಷ ಕೈಯಾಡಿಸಿ. 
  • ಈ ಒಗ್ಗರಣೆಯನ್ನು ಮ್ಯಾಶ್ ಮಾಡಿದ ಹಲಸಿನ ತೊಳೆಗೆ ಸೇರಿಸಿ. ಮೆಣಸನ್ನು ಸೌಟಿನಲ್ಲಿ ಅಥವಾ ಕೈಯಲ್ಲಿ ಮ್ಯಾಶ್ ಮಾಡಿ ಮಿಕ್ಸ್ ಮಾಡಿ. 
  • ಬಿಸಿ ಬಿಸಿ ಅನ್ನದೊಡನೆ ಹಾಕಿಕೊಳ್ಳಲು ಹಲಸಿನ ತೊಳೆಯ ಬಜ್ಜಿ ಬಹಳ ರುಚಿ. 

ಟಿಪ್ಸ್:
  • ಹಲಸಿನ ತೊಳೆಯನ್ನು ಉಪ್ಪು ಸೇರಿಸಿ ಒಣಗಿಸಿರುವುದರಿಂದ ಮೇಲೋಗರದ ರುಚಿ ನೋಡಿಕೊಂಡು ಉಪ್ಪು ಸೇರಿಸಿ. ಉಪ್ಪು ಜಾಸ್ತಿ ಆಗಿಬಿಟ್ಟರೆ ಅಂಗೈ ಅಗಲದ ಬಾಳೆ ಎಲೆ ಚೂರನ್ನು 15 - 20 ನಿಮಿಷ ಮೇಲೋಗರದಲ್ಲಿ ಹಾಕಿಟ್ಟು ತೆಗೆದರೆ ಉಪ್ಪಿನಂಶವನ್ನು ಬಾಳೆ ಎಲೆ ಹೀರಿಕೊಳ್ಳುತ್ತದೆ. 

Click here for English version.

ಕಾಮೆಂಟ್‌ಗಳು