ಮೆಕ್ಕೆಹಣ್ಣಿನ ಪಾಯಸ ।ಇಬ್ಬುಡ್ಲ ಹಣ್ಣಿನ ಪಾಯಸ

Click here for English version 

ನಮ್ಮ ಹಿತ್ತಿಲಲ್ಲಿ ಪ್ರತಿವರ್ಷ ಬೇಸಗೆಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತೇವೆ. ಈ ವರ್ಷ ಆನ್ಲೈನ್ ನಲ್ಲಿ ಬೀಜಗಳನ್ನು ಆರ್ಡರ್ ಮಾಡುವಾಗ ಮೆಕ್ಕೆ ಹಣ್ಣಿನ ಬೀಜವೂ ಸಿಕ್ಕಿತ್ತು. ಹೀಗಾಗಿ ತುಂಬಾ ವರ್ಷಗಳ ನಂತರ ಮೆಕ್ಕೆಹಣ್ಣಿನ ಪಾಯಸ ತಿನ್ನುವ ಭಾಗ್ಯ ನಮ್ಮದಾಯಿತು! ಮಕ್ಕಳಿಗಂತೂ ಈ ಹಣ್ಣು ಬಲಿತು ತನ್ನಿಂತಾನೇ ಬಿರುಕು ಬಿಟ್ಟು ಒಡೆಯುವುದನ್ನು ನೋಡಿ ಬಹಳ ಮೋಜೆನಿಸಿತು. 

ಇಬ್ಬುಡ್ಲ ಅಥವಾ ಕ್ಯಾಕರಿಕೆ ಹಣ್ಣು ಎಂತಲೂ ಕರೆಯಲಾಗುವ ಈ ಹಣ್ಣು ಪಾಯಸಕ್ಕೆ ಒಳ್ಳೆಯ ರುಚಿ. ಕಾಯಿ ಇರುವಾಗ ತಿನ್ನಲು ಹೋದರೆ ಭಯಂಕರ ಕಹಿ ಎನಿಸಿದರೂ ಹಣ್ಣಾಗಿ ಒಡೆಯುವಷ್ಟರಲ್ಲಿ ಇದು ಚಪ್ಪೆಯಾಗಿ ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗಿರುತ್ತದೆ. 
ಕೆಲವೇ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಪಾಯಸದ ರೆಸಿಪಿ ಹೀಗಿದೆ:

  • ತಯಾರಿಸಲು ಬೇಕಾಗುವ ಸಮಯ: 5 - 10 ನಿಮಿಷಗಳು 
  • ಡಿಫಿಕಲ್ಟಿ ಲೆವೆಲ್: ಸುಲಭ 
  • ಸರ್ವಿಂಗ್ಸ್: 3 

ಬೇಕಾಗುವ ಸಾಮಗ್ರಿಗಳು:

  • ಮೆಕ್ಕೆಹಣ್ಣು - ಸಿಪ್ಪೆ ಹಾಗೂ ಬೀಜ ತೆಗೆದು ಹೆಚ್ಚಿದ್ದು - 2 ಕಪ್ 
  • ಸಕ್ಕರೆ -  ಟೇಬಲ್ ಸ್ಪೂನ್ ಅಥವಾ ಸಿಹಿಗೆ ತಕ್ಕಷ್ಟು 
  • ಏಲಕ್ಕಿ ಪುಡಿ - 1/2 ಟೀ ಸ್ಪೂನ್ 
  • ತಣ್ಣನೆಯ ಹಾಲು - 1 1/2 ಕಪ್ 
  • ಕಾಮಕಸ್ತೂರಿ ಬೀಜ / Sabja seeds (ಬೇಕಿದ್ದರೆ) - 2 ಟೀ ಸ್ಪೂನ್ (ನೀರಿನಲ್ಲಿ 20 ನಿಮಿಷ ನೆನೆಸಿಕೊಳ್ಳಿ)  

ತಯಾರಿಸುವ ವಿಧಾನ:

  • ಮೆಕ್ಕೆ ಹಣ್ಣಿನ ಸಿಪ್ಪೆ ಹಾಗೂ ಬೀಜ ತೆಗೆದು ಹೆಚ್ಚಿಕೊಳ್ಳಿ. 
  • ಒಂದು ಪಾತ್ರೆಗೆ ತಣ್ಣಗಿನ ಹಾಲು ಹಾಕಿಕೊಂಡು ಅದಕ್ಕೆ ಸಕ್ಕರೆ, ಏಲಕ್ಕಿಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. 
  • ಹಾಲಿನ ಮಿಶ್ರಣಕ್ಕೆ ಹೆಚ್ಚಿದ ಮೆಕ್ಕೆಹಣ್ಣಿನ ಹೋಳುಗಳನ್ನು ಸೇರಿಸಿ ಮಿಕ್ಸ್ ಮಾಡಿ. 
  • ಸಬ್ಜ ಸೀಡ್ಸ್ ಸೇರಿಸುವುದಾದರೆ, ನೀರಿನಲ್ಲಿ ನೆನೆಸಿದ ಬೀಜಗಳನ್ನು ಸೋಸಿಕೊಂಡು ಹಾಕಿ; ನೀರಿನೊಟ್ಟಿಗೆ ಪಾಯಸಕ್ಕೆ ಸೇರಿಸಿದರೆ ಪಾಯಸ ನೀರಾಗಿ, ರುಚಿ ಚೆನ್ನಾಗಿರುವುದಿಲ್ಲ. 
  • ರುಚಿ ನೋಡಿಕೊಂಡು ಸಕ್ಕರೆ ಬೇಕಿದ್ದರೆ ಸೇರಿಸಿ. 
  • ಈ ಪಾಯಸವನ್ನು ಮಾಡಿದ ತಕ್ಷವೇ ತಿನ್ನಬಹುದು. 5 - 10 ನಿಮಿಷ ಸೆಟ್ ಆಗಲು ಬಿಟ್ಟರೆ ಮೆಕ್ಕೆಹಣ್ಣಿನ ಹೋಳುಗಳು ಹಾಲಿನೊಂದಿಗೆ ಹೊಂದಿಕೊಂಡು ಇನ್ನೂ ಚೆನ್ನಾಗಿರುತ್ತದೆ. 
  • ಮೆಕ್ಕೆಹಣ್ಣಿನ ಪಾಯಸವನ್ನು ತುಂಬಾ ಹೊತ್ತು ಇಟ್ಟು ತಿಂದರೆ ಕಹಿಯಾಗಿಬಿಡುತ್ತದೆ. ಹೀಗಾಗಿ ತಯಾರಿಸಿದ ಸ್ವಲ್ಪ ಹೊತ್ತಿನೊಳಗೆ ಇದನ್ನು ಖಾಲಿ ಮಾಡಿದರೆ ಉತ್ತಮ. 

ಟಿಪ್ಸ್: 

  • ಆದಷ್ಟೂ ಗಟ್ಟಿ ಹಾಲನ್ನೇ ಪಾಯಸಕ್ಕೆ ಬಳಸಿದರೆ ರುಚಿ ಹೆಚ್ಚು. 
  • ಸಬ್ಜ ಸೀಡ್ಸ್ ನ್ನು ಬಳಸದೆಯೂ ಈ ಪಾಯಸ ಮಾಡಬಹುದು 
  • ಬೇಕಾದಷ್ಟೇ ಹಣ್ಣನ್ನು ಕಟ್ ಮಾಡಿ ಪಾಯಸ ಮಾಡಿ; ಹಣ್ಣಿನ ಉಳಿದ ಭಾಗವನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ ಫ್ರಿಜ್ ನಲ್ಲಿಟ್ಟರೆ ಒಂದು ವಾರದವರೆಗೂ ಚೆನ್ನಾಗಿರುತ್ತದೆ. 

ಕಾಮೆಂಟ್‌ಗಳು