ವಡೆ / Vade - ಗಣೇಶ ಚತುರ್ಥಿ ಸ್ಪೆಷಲ್

Click here for English version.

ಹವ್ಯಕರ ಸಾಂಪ್ರದಾಯಿಕ ತಿನಿಸುಗಳಲ್ಲಿ ಈ ವಡೆಯೂ ಒಂದು. ನಮ್ಮೂರ ಕಡೆ ಹವ್ಯಕರ ಮನೆಗಳಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಚಕ್ಕುಲಿ ಹಾಗೂ ವಡೆಯನ್ನು ಯಥೇಚ್ಚವಾಗಿ ತಯಾರಿಸಿಕೊಂಡು, ತಿಂಗಳಾನುಗಟ್ಟಲೆ ಇಟ್ಟುಕೊಂಡು ತಿನ್ನುತ್ತಾರೆ. ವಡೆ ತಯಾರಿಸಲು ಹೆಚ್ಚು ಸಾಮಗ್ರಿಗಳೇನೂ ಬೇಕಿಲ್ಲ; ಆದರೆ ತಯಾರಿಸಲು ಸ್ವಲ್ಪ ಮಟ್ಟಿಗಿನ ಶ್ರಮ ಹಾಗೂ ಸಮಯ ಎರಡೂ ಅವಶ್ಯವಾಗಿ ಬೇಕೇ ಬೇಕು. ಜೊತೆಗೆ ಸಹಾಯಕ್ಕೆ ಯಾರಾದರೂ ಇದ್ದರಂತೂ ಇನ್ನೂ ಒಳ್ಳೆಯದು! 


ತಯಾರಿಸಲು ಬೇಕಾಗುವ ಸಮಯ: 1 ಘಂಟೆ 
ಸಾಮಗ್ರಿಗಳನ್ನು ನೆನೆಸಲು ಬೇಕಾಗುವ ಸಮಯ: 5 ಘಂಟೆಗಳು
ಈ ಅಳತೆಯಿಂದ ಸುಮಾರು 24 ವಡೆಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಅಕ್ಕಿ - 3 ಕಪ್
ಉದ್ದಿನಬೇಳೆ - 1 / 4 ಕಪ್
ಮೆಂತ್ಯ 8 - 10 ಕಾಳುಗಳು 
ಓಮ - 1 / 4 ಚಮಚ
ಜೀರಿಗೆ - 1 ಚಮಚ
ಎಳ್ಳು - 1 ಚಮಚ
ಹಸಿಮೆಣಸು - ಚಿಕ್ಕ ಚೂರು
ಕರಿಯಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು 

ಮಾಡುವ ವಿಧಾನ:
ಮೆಂತ್ಯ ಮತ್ತು ಉದ್ದಿನಬೇಳೆಯನ್ನು 2 - 3 ಘಂಟೆಕಾಲ ನೀರಿನಲ್ಲಿ ನೆನೆಸಿಕೊಳ್ಳಿ.
ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಒಂದು ಕಾಟನ್ ಬಟ್ಟೆಯಮೇಲೆ 5 ನಿಮಿಷ ಹರವಿ. ಅಕ್ಕಿ ಸ್ವಲ್ಪ ಹಸಿ ಇರುವಾಗಲೇ ಅದನ್ನು ಮಿಕ್ಸಿಯಲ್ಲಿ ತರಿಯಾಗಿ, ಸೂಜಿ ರವೆಯ ಹದಕ್ಕೆ ಪುಡಿಮಾಡಿಕೊಳ್ಳಿ.
ಉದ್ದಿನಬೇಳೆ ಮತ್ತು ಮೆಂತ್ಯವನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.


ಓಮ, ಜೀರಿಗೆ, ಎಳ್ಳು, ಹಸಿಮೆಣಸನ್ನು ಪುಡಿಮಾಡಿ ಸೇರಿಸಿ. ಇಲ್ಲವೇ ಉದ್ದಿನಬೇಳೆಯೊಡನೆ ಸೇರಿಸಿ ರುಬ್ಬಿ.
ರುಬ್ಬಿದ ಮಿಶ್ರಣದ ಕಾಲುಭಾಗದಷ್ಟನ್ನು ಎತ್ತಿಟ್ಟಿರಿ; ನಂತರದಲ್ಲಿ ಬೇಕಿದ್ದರೆ ಉಪಯೋಗಿಸಬಹುದು.
ರುಬ್ಬಿದ ಉದ್ದಿನಬೇಳೆಯ ಮಿಶ್ರಣಕ್ಕೆ ಉಪ್ಪು, ಅಕ್ಕಿಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಹಿಟ್ಟಿನ ಮುದ್ದೆಯನ್ನು 8 - 10 ನಿಮಿಷ ಚೆನ್ನಾಗಿ ನಾದಿ, ಮೆತ್ತಗೆ ಮಾಡಿ. 
ಕಲಸಿದ ಹಿಟ್ಟನ್ನು 2 ಘಂಟೆಕಾಲ ನೆನೆಯಲು ಬಿಡಿ.
ನೆನೆದ ಹಿಟ್ಟನ್ನು ಪುನಃ ಕೈಗಳಿಂದ ಚೆನ್ನಾಗಿ ನಾದಿ. ಹಿಟ್ಟು ಗಟ್ಟಿ ಎನಿಸಿದರೆ ರುಬ್ಬಿದ ಉದ್ದಿನ ಹಿಟ್ಟನ್ನು ಸ್ವಲ್ಪ ಸೇರಿಸಿ ಕಲಸಿ.
ಹಿಟ್ಟಿನ ಪಾತ್ರೆಗೆ ಒಂದು ಪ್ಲೇಟ್ ಮುಚ್ಚಿಡಿ, ಇಲ್ಲದಿದ್ದರೆ ಹಿಟ್ಟು ಒಣಗಿಹೋಗುತ್ತದೆ.
ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿಕೊಳ್ಳಿ. ವಡೆ ಕರಿಯಲು ಎಣ್ಣೆ ತುಂಬ, ಅಂದರೆ ಕುದಿಯುವಷ್ಟು ಬಿಸಿ ಇರಬೇಕು. ಇಲ್ಲದಿದ್ದರೆ ವಡೆ ಚೆನ್ನಾಗಿ ಉಬ್ಬುವುದಿಲ್ಲ.


ಚಿಕ್ಕ ನಿಂಬೆಗಾತ್ರದ ತೆಗೆದುಕೊಂಡು ಕೈಯಲ್ಲಿ ಚೆನ್ನಾಗಿ ತಿಕ್ಕಿ ಮೆತ್ತಗಿನ ಉಂಡೆ ಮಾಡಿಕೊಳ್ಳಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್ ಶೀಟ್ ಮೇಲೆ ಚಿಕ್ಕದಾಗಿ ಪೂರಿಯಂತೆ ಲಟ್ಟಿಸಿ. ಮಧ್ಯದಲ್ಲೊಂದು ತೂತು ಮಾಡಿ.
ಲಟ್ಟಿಸಿದ ವಡೆಯನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. 
ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಗರಿಯಾದ ವಡೆಗಳು ಒಂದು ತಿಂಗಳವರೆಗೂ ಚೆನ್ನಾಗಿರುತ್ತವೆ.


ಟಿಪ್ಸ್:
  • ವಡೆ ತಯಾರಿಸುವಾಗ ಉಂಡೆಗಳನ್ನು ಮೊದಲೇ ತಯಾರಿಸಿಟ್ಟರೆ ಅವು ಒಣಗಿದಂತಾಗುತ್ತವೆ. ಹೀಗಾಗಿ ಆಗಿಂದಾಗ್ಗೆ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿ ಕರಿಯಿರಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)