ಕಾಯಿ ಉಂಡೆ । ಕಾಯುಂಡೆ

Click here for English version


ನಾವು ಚಿಕ್ಕವರಿದ್ದಾಗ ಮನೆಯಲ್ಲಿ ತಯಾರಿಸುತ್ತಿದ್ದ ಸಿಹಿತಿನಿಸುಗಳಲ್ಲಿ ಕಾಯುಂಡೆಯೂ ಒಂದು. ಬೆಲ್ಲ, ತೆಂಗಿನಕಾಯಿ ಹಾಕಿ ತಯಾರಿಸುವ ಈ ಸಿಹಿ ತಿನಿಸು ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಈ ಉಂಡೆ ತಯಾರಿಸಲು ಹುರಿದ ನೆಲಗಡಲೆ, ಗೋಡಂಬಿ ಇತ್ಯಾದಿ ನಿಮ್ಮಿಷ್ಟದ ಯಾವುದೇ ನಟ್ಸ್ ಸೇರಿಸಬಹುದು. ನಾನು ಇಲ್ಲಿ ಹುರಿದ ನೆಲಗಡಲೆ / ಶೇಂಗಾ ಬಳಸಿದ್ದೇನೆ.  ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಕಾಯುಂಡೆ ರೆಸಿಪಿ ಈ ಕೆಳಗಿನಂತಿದೆ:

 • ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
 • ಡಿಫಿಕಲ್ಟಿ ಲೆವೆಲ್: ಮೀಡಿಯಮ್ 
 • ಸರ್ವಿಂಗ್ಸ್: ಈ ಅಳತೆಯಿಂದ 28 ಉಂಡೆಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:

 • ತೆಂಗಿನತುರಿ (ಫ್ರೆಶ್ ಅಥವಾ ಫ್ರೋಜನ್) - 3 ಕಪ್ 
 • ಬೆಲ್ಲ - 1 ಕಪ್ (ಪುಡಿ ಅಥವಾ ಜೋನಿಬೆಲ್ಲ)
 • ನೆಲಗಡಲೆ ಹುರಿದದ್ದು - 1 ಕಪ್ 
 • ಏಲಕ್ಕಿ ಪುಡಿ - 1 ಟೀ ಸ್ಪೂನ್ 

ತಯಾರಿಸುವ ವಿಧಾನ: 

 • ಹುರಿದ ನೆಲಗಡಲೆಯ ಸಿಪ್ಪೆ ತೆಗೆದು, ನೆಲಗಡಲೆಯನ್ನು ಮಿಕ್ಸಿಯಲ್ಲಿ ಹಾಕಿ ಪಲ್ಸ್ ಮೋಡ್ ನಲ್ಲಿ ಒಂದೆರಡು ಸೆಕೆಂಡ್ ತಿರುವಿ ತರಿಯಾಗಿ ಪುಡಿಮಾಡಿಕೊಳ್ಳಿ. 
 • ಒಂದು ದಪ್ಪ ತಳದ ಬಾಣಲೆಯಲ್ಲಿ ತೆಂಗಿನತುರಿ ಹಾಗೂ ಬೆಲ್ಲವನ್ನು ಸೇರಿಸಿ ಮೀಡಿಯಮ್ ಉರಿಯಲ್ಲಿ ಕೈಯಾಡಿಸುತ್ತಿರಿ. 
 • ಕೆಲ ನಿಮಿಷಗಳ ನಂತರ ತೆಂಗಿನತುರಿಯಲ್ಲಿನ ನೀರಿನಂಶ ಸೇರಿಕೊಂಡು ಬೆಲ್ಲ ಕರಗತೊಡಗುತ್ತದೆ. ಮಿಶ್ರಣ ತುಂಬ ಡ್ರೈ ಎನ್ನಿಸಿದರೆ ಒಂದೆರಡು ಸ್ಪೂನ್ ನಷ್ಟು ನೀರು ಸೇರಿಸಿಕೊಳ್ಳಿ. 
 • ಮಿಶ್ರಣವನ್ನು ಬಿಡದೆ ಕೈಯಾಡಿಸುತ್ತಿರಿ. ಸುಮಾರು 20 ನಿಮಿಷ ಆಗುವಷ್ಟರಲ್ಲಿ ಮಿಶ್ರಣದಲ್ಲಿನ ನೀರಿನಂಶ ಕಡಿಮೆಯಾಗಿ, ಮಿಶ್ರಣ ಗಟ್ಟಿಯಾಗಿ ಮುದ್ದೆಯಂತಾಗತೊಡಗುತ್ತದೆ. ಸ್ವಲ್ಪವೇ ಮಿಶ್ರಣವನ್ನು ಹೊರತೆಗೆದು ತಣಿಸಿ ಉಂಡೆ ಕಟ್ಟುವ ಹದ ಬಂದಿದೆಯೇ ಎಂದು ಚೆಕ್ ಮಾಡಿಕೊಳ್ಳಿ. 
 • ಮಿಶ್ರಣ ಉಂಡೆ ಕಟ್ಟುವ ಹದಕ್ಕೆ ಬಂದಾಗ ಉರಿ ಆಫ್ ಮಾಡಿ. ಇದಕ್ಕೆ ನೆಲಗಡಲೆ ಹಾಗೂ ಏಲಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
 • ಕೈಗಳಿಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಂಡು, ಮಿಶ್ರಣ ಉಗುರುಬೆಚ್ಚಗಿರುವಾಗಲೇ ಸ್ವಲ್ಪವೇ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಚಿಕ್ಕ ಉಂಡೆಗಳನ್ನು ಮಾಡಿ. 
 • ಸಿಹಿಯಾದ ಈ ಕಾಯುಂಡೆ ಸ್ವಲ್ಪ ಜಿಗುಟಾಗಿದ್ದು ತಿನ್ನಲು ಬಹಳ ರುಚಿ!

ಟಿಪ್ಸ್:

 • ನೆಲಗಡಲೆಯ ಬದಲು ಗೇರುಬೀಜ ಬಳಸಬಹುದು  

ಕಾಮೆಂಟ್‌ಗಳು