ಕುಂಬಳಕಾಯಿ ಸಾಂಬಾರ್ । ಸಿಹಿಗುಂಬಳಕಾಯಿ (ಗೋವೆಕಾಯಿ) ಸಾರು

 Click here for English version.


ಈ ವರ್ಷ ಬೇಸಿಗೆಯಲ್ಲಿ ನಮ್ಮ ಹಿತ್ತಿಲಲ್ಲಿ ಸಿಹಿಗುಂಬಳದ ಬೀಜಗಳನ್ನು ಬಿತ್ತಿದ್ದೆವು. ಸಿಹಿಗುಂಬಳದ ಕಾಯಿಗಳನ್ನು ಚೆನ್ನಾಗಿ ಬಲಿತ ನಂತರ ಕಿತ್ತರೆ ಅವನ್ನು 5 - 6 ತಿಂಗಳವರೆಗೂ ಸಂಗ್ರಹಿಸಿ ಇಡಬಹುದು. ಬೇಸಿಗೆ ಮುಗಿದು ಚಳಿಗಾಲ ಬಂತೆಂದರೆ ನಮಗಂತೂ ಸಂಜೆಗೆ ಊಟದ ಜೊತೆಗೆ ಬಿಸಿಬಿಸಿ ಸೂಪ್ ಇದ್ದರೆ ಹಿತವೆನ್ನಿಸುತ್ತದೆ. ಪಂಪ್ಕಿನ್ ಸೂಪ್, ತರಕಾರಿ ಸೂಪ್, ಟೊಮ್ಯಾಟೋ ಸೂಪ್, ಇವೆಲ್ಲವೂ ಮಕ್ಕಳಿಗೂ ಬಹಳ ಇಷ್ಟ. 

ಕುಂಬಳಕಾಯಿ (ಚೀನಿಕಾಯಿ) ಯಿಂದ ತಯಾರಿಸುವ ಇನ್ನೊಂದು ರುಚಿಕರ ಅಡುಗೆ ಎಂದರೆ ಸಾಂಬಾರ್. ಈರುಳ್ಳಿ, ಬೆಳ್ಳುಳ್ಳಿ ಬಳಸದೇ ತಯಾರಿಸುವ ಈ ಮೇಲೋಗರ ದೇವಸ್ಥಾನಗಳಲ್ಲಿ ತಯಾರಿಸುವ ಸಾಂಬಾರ್ ನ ರುಚಿಯನ್ನೇ ಹೋಲುತ್ತದೆ. 

ಸಿಹಿಗುಂಬಳಕಾಯಿ ಸಾಂಬಾರ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:  

 • ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು 
 • ಬೇಳೆ ನೆನೆಸುವ ಸಮಯ: 20 ನಿಮಿಷಗಳು 
 • ಸರ್ವಿಂಗ್ಸ್: 6 ಜನರಿಗೆ ಆಗುತ್ತದೆ 
 • ಡಿಫಿಕಲ್ಟಿ ಲೆವೆಲ್: ಕಷ್ಟಕರ 

ಬೇಕಾಗುವ ಸಾಮಗ್ರಿಗಳು:

 • ಸಿಹಿಗುಂಬಳಕಾಯಿ (ಬೀಜ ತೆಗೆದದ್ದು) - 600 ಗ್ರಾಂ 
 • ತೊಗರಿಬೇಳೆ - 3/4 ಕಪ್ 
 • ಮೆಂತ್ಯ - 1 ಟೀ ಚಮಚ 
 • ಉಪ್ಪು - ರುಚಿಗೆ ತಕ್ಕಷ್ಟು 
 • ಬೆಲ್ಲ 1/4 ಟೀ ಚಮಚದಷ್ಟು  
 • ನೀರು  

- ಮಸಾಲಾ ಪೇಸ್ಟ್ ಗೆ:

 • ಎಣ್ಣೆ - 2 ಟೀ ಚಮಚ 
 • ಒಣಮೆಣಸು - 5 (ಖಾರಕ್ಕೆ ತಕ್ಕಂತೆ)
 • ಮೆಂತ್ಯ - 3/4 ಟೀ ಚಮಚ 
 • ಕೊತ್ತಂಬರಿ ಬೀಜ - 2 1/2 ಟೀ ಚಮಚ 
 • ಜೀರಿಗೆ - 1 ಟೀ ಚಮಚ
 • ಎಳ್ಳು - 1 ಟೀ ಚಮಚ
 • ಸಾಸಿವೆ - 3/4 ಟೀ ಚಮಚ
 • ಇಂಗು - ದೊಡ್ಡ ಚಿಟಿಕೆಯಷ್ಟು 
 • ಅರಿಶಿನ - 1/4 ಟೀ ಚಮಚ
 • ಕರಿಬೇವು - 2 ಎಲೆ 
 • ಹುಣಸೆಹಣ್ಣು - 1 1/2 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
 • ತೆಂಗಿನತುರಿ - 3/4 ಕಪ್ 

- ಒಗ್ಗರಣೆಗೆ: 

 • ಎಣ್ಣೆ - 2 ಟೀ ಚಮಚ
 • ಸಾಸಿವೆ - 1 ಟೀ ಚಮಚ
 • ಇಂಗು - ದೊಡ್ಡ ಚಿಟಿಕೆ
 • ಕರಿಬೇವು - 1 ಎಸಳು 


ತಯಾರಿಸುವ ವಿಧಾನ: 

 • ತೊಗರಿಬೇಳೆಯನ್ನು ನೀರಿನಲ್ಲಿ ತೊಳೆದುಕೊಂಡು 20 ನಿಮಿಷ ನೀರಿನಲ್ಲಿ ನೆನೆಸಿಡಿ. ನಂತರ ಬೇಳೆ ಮುಳುಗುವಷ್ಟು ನೀರು ಸೇರಿಸಿ, ಒಂದೆರಡು ಹನಿ ಎಣ್ಣೆ, ಕಾಲು ಟೀ ಚಮಚ ಅರಿಶಿನ ಹಾಗೂ 1 ಟೀ ಚಮಚ ಮೆಂತ್ಯ ಸೇರಿಸಿ ಪ್ರೆಷರ್ ಕುಕ್ಕರ್ ನಲ್ಲಿ ಒಂದು ಅಥವಾ ಎರಡು ವಿಸಿಲ್ ಕೂಗಿಸಿ. ಬೇಳೆ ಬೆಂದಿರಲಿ, ಆದರೆ ಕರಗಿ ಮುದ್ದೆಯಂತಾಗಬಾರದು. ನನ್ನ ಹತ್ತಿರ ಇರುವ ಪ್ರೆಷರ್ ಕುಕ್ಕರ್ ನಲ್ಲಿ ಒಂದು ವಿಸಿಲ್ ಕೂಗಿಸುವಷ್ಟರಲ್ಲಿ ಬೇಳೆ ಹದವಾಗಿ ಬೆಂದಿರುತ್ತದೆ. 
 • ಬೀಜ ಬೇರ್ಪಡಿಸಿದ ಸಿಹಿಗುಂಬಳಕಾಯಿಯನ್ನು ಮೀಡಿಯಂ ಅಥವಾ ದೊಡ್ಡ ಸೈಜಿನ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಸಿಪ್ಪೆ ತೆಗೆಯಬೇಡಿ, ಸಿಪ್ಪೆ ಇದ್ದರೆ ಹೋಳು ತೀರಾ ಮೆತ್ತಗಾಗುವುದನ್ನು ತಡೆಯುತ್ತದೆ. 
 • ಒಂದು ಅಗಲವಾದ ಬಾಣಲೆಯಲ್ಲಿ 2 ಟೀ ಚಮಚದಷ್ಟು ಎಣ್ಣೆ ಹಾಕಿ ಬಿಸಿಗಿಡಿ. ಇದಕ್ಕೆ ಕಟ್ ಮಾಡಿದ ಸಿಹಿಗುಂಬಳಕಾಯಿ ಹಾಗೂ ಒಂದೂವರೆ ಚಮಚದಷ್ಟು ಉಪ್ಪು ಸೇರಿಸಿ ಮೀಡಿಯಂ ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ, ತಣ್ಣಗಾಗಲು ಬಿಡಿ. 
 • ಮಸಾಲಾ ಪೇಸ್ಟ್ ತಯಾರಿಸಲು ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ಎರಡು ಚಮಚ ಎಣ್ಣೆ ಬಿಸಿಮಾಡಿ ಇದಕ್ಕೆ ಒಣಮೆಣಸಿನ ಚೂರುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಿ. ನಂತರ ಮುಕ್ಕಾಲು ಚಮಚದಷ್ಟು ಮೆಂತ್ಯ ಬೀಜ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ಇದಕ್ಕೆ ಎರಡೂವರೆ ಚಮಚದಷ್ಟು ಕೊತ್ತಂಬರಿ, ಒಂದು ಟೀ ಚಮಚ ಜೀರಿಗೆ, ಒಂದು ಟೀ ಚಮಚ ಎಳ್ಳು ಹಾಗೂ ಮುಕ್ಕಾಲು ಟೀ ಚಮಚದಷ್ಟು ಸಾಸಿವೆ ಸೇರಿಸಿ ಹುರಿಯಿರಿ. 
 • ಸಾಸಿವೆ ಚಟಪಟ ಎಂದಮೇಲೆ ಉರಿ ಆಫ್ ಮಾಡಿ ಕಾಲು ಟೀ ಚಮಚ ಅರಿಶಿನ ಹಾಗೂ ದೊಡ್ಡ ಚಿಟಿಕೆಯಷ್ಟು ಇಂಗು ಸೇರಿಸಿ ಮಿಕ್ಸ್ ಮಾಡಿ. ಜೊತೆಗೆ ಹುಣಸೆಹಣ್ಣು ಹಾಗೂ ತೆಂಗಿನತುರಿಯನ್ನು ಸೇರಿಸಿ ಮಿಕ್ಸ್ ಮಾಡಿ 5 ನಿಮಿಷ ಬಿಡಿ. 
 • ಹುರಿದ ಮಸಾಲಾ ಸಾಮಗ್ರಿಗಳಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲಾ ಪೇಸ್ಟ್ ತಯಾರಿಸಿಕೊಳ್ಳಿ. ಮಿಶ್ರಣ ತೀರಾ ನುಣ್ಣಗೆ ರುಬ್ಬುವ ಬದಲು ಸ್ವಲ್ಪವೇ ಸ್ವಲ್ಪ ತರಿಯಾಗಿದ್ದರೆ ಚೆನ್ನಾಗಿರುತ್ತದೆ. 
 • ಬೇಯಿಸಿದ ತೊಗರಿಬೇಳೆಯನ್ನು ಒಂದು ಪಾತ್ರೆಯಲ್ಲಿ ಹಾಕಿ, ನೀರು ಬೇಕಿದ್ದರೆ ಸ್ವಲ್ಪ ಸೇರಿಸಿ ಬಿಸಿಗಿಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 1/4 ಟೀ ಚಮಚದಷ್ಟು ಬೆಲ್ಲ ಸೇರಿಸಿ.  
 • ಬೇಳೆ ಮಿಶ್ರಣ ಬಿಸಿಯಾದ ನಂತರ ರುಬ್ಬಿದ ಮಸಾಲೆ ಸೇರಿಸಿ 5 ನಿಮಿಷ ಕುದಿಸಿ. 
 • ನಂತರ ಇದಕ್ಕೆ ರೋಸ್ಟ್ ಮಾಡಿಟ್ಟ ಸಿಹಿಗುಂಬಳಕಾಯಿ ಹೋಳುಗಳನ್ನು ಸೇರಿಸಿ. ಮಿಶ್ರಣ ತುಂಬಾ ಗಟ್ಟಿ ಎನ್ನಿಸಿದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ. ರುಚಿ ನೋಡಿಕೊಂಡು ಉಪ್ಪು, ಖಾರ ಏನಾದರೂ ಬೇಕಿದ್ದರೆ ಸೇರಿಸಿ. 
 • ಸಾಂಬಾರ್ ಮಿಶ್ರಣವನ್ನು 5 - 6 ನಿಮಿಷ ಕುದಿಸಿ. ಸಿಹಿಗುಂಬಳಕಾಯಿ ಹೋಳು ಹದವಾಗಿ ಬೇಯುವವರೆಗೆ ಕುದಿಸಿ, ಆದರೆ ತೀರಾ ಮೆತ್ತಗಾದರೆ ಚೆನ್ನಾಗಿರುವುದಿಲ್ಲ. ಮಿಶ್ರಣ ಚೆನ್ನಾಗಿ ಕುದಿದಾಗ ಸಾಂಬಾರ್ ನಲ್ಲಿರುವ ಎಣ್ಣೆಯಂಶ ಮೇಲೆ ತೇಲುವುದು ಕಾಣುತ್ತದೆ. 
 • ಉರಿ ಆಫ್ ಮಾಡಿದ ನಂತರ ಅರ್ಧ ಎಸಳಿನಷ್ಟು ಕರಿಬೇವಿನ ಎಲೆಗಳನ್ನು ಸೇರಿಸಿ ಮುಚ್ಚಳ ಮುಚ್ಚಿಡಿ. 
 • ಒಗ್ಗರಣೆ ಸೌಟಿನಲ್ಲಿ 2 ಟೀ ಚಮಚ ಎಣ್ಣೆ, 1 ಟೀ ಚಮಚ ಸಾಸಿವೆ, ದೊಡ್ಡ ಚಿಟಿಕೆಯಷ್ಟು ಇಂಗು ಹಾಕಿ ಸಾಸಿವೆ ಚಟಪಟ ಎಂದನಂತರ ಅರ್ಧ ಎಸಳಿನಷ್ಟು ಕರಿಬೇವಿನ ಎಲೆಗಳನ್ನು ಹಾಕಿ, ಸಾಂಬಾರ್ ಗೆ ಸೇರಿಸಿ ಮಿಕ್ಸ್ ಮಾಡಿ. 
 • ರುಚಿಕರವಾದ ಸಾಂಬಾರ್ ನ್ನು ಅನ್ನದ ಜೊತೆಗೆ ಸವಿಯಿರಿ. 

ಟಿಪ್ಸ್:

 • ಸಿಹಿ ಇಷ್ಟಪಡದವರು ಬೆಲ್ಲ ಬಳಸಿದಿದ್ದರೂ ಆಗುತ್ತದೆ. 
 • ಪಾರಂಪರಿಕ ರುಚಿಗೆ ತೆಂಗಿನೆಣ್ಣೆ ಬಳಸಿದರೆ ಉತ್ತಮ.  
 • ಹುಣಸೆ ರಸಕ್ಕಿಂತ ಹುಣಸೆಹಣ್ಣು ಬಳಸಿದರೆ ಸಾಂಬಾರ್ ರುಚಿ ಚೆನ್ನಾಗಿರುತ್ತದೆ. ಹುಣಸೆರಸ ಬಳಸುವುದಾದರೆ ಇಲ್ಲಿ ಹೇಳಿದ ಅಳತೆಗಿಂತ ಕಡಿಮೆ ಬಳಸಿ. 

ಕಾಮೆಂಟ್‌ಗಳು