ಶುಂಠಿ - ಜೇನುತುಪ್ಪದ ಪಾನಕ

Recipe photo 

ನಾವು ಈ ವರ್ಷ ನ್ಯೂಜಿಲೆಂಡ್ ಗೆ ಹೋಗಿದ್ದಾಗ ಅಲ್ಲಿ ಇಸ್ಕಾನ್ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದೆವು. ಇಸ್ಕಾನ್ ಊಟವೆಂದರೆ ನಿಮಗೆಲ್ಲ ಗೊತ್ತಿರುವಂತೆ ಈರುಳ್ಳಿ ಬೆಳ್ಳುಳ್ಳಿ ಬಳಸದೆಯೇ ಸ್ವಾದಿಷ್ಟಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಈ ರೆಸ್ಟೋರೆಂಟ್ ನ ವಿಶೇಷತೆ ಏನೆಂದರೆ ವೀಗನ್ ಖಾದ್ಯಗಳು ಮಾತ್ರ ಇವರಲ್ಲಿ ಲಭ್ಯವಿದ್ದವು. ಹೋದಲ್ಲೆಲ್ಲ ವೆಜ್ ಊಟ ಹುಡುಕುವ ನಮಗೆ ಇವರಲ್ಲಿನ ಊಟ ಬಹಳವೇ ಇಷ್ಟವಾಯಿತು! ಅಷ್ಟೇ ಅಲ್ಲದೆ, ಊಟದ ಜೊತೆ ನಾವು ತೆಗೆದುಕೊಂಡ  ಶುಂಠಿ - ಜೇನುತುಪ್ಪದ ಪಾನಕವಂತೂ ತುಂಬಾ ಚೆನ್ನಾಗಿತ್ತು. 

ನಾವು ಮನೆಗೆ ಬಂದ ನಂತರವೂ ಹಲವು ಬಾರಿ ಈ ಪಾನೀಯವನ್ನು ಮಾಡಿ ಸವಿದಿದ್ದೇವೆ. ಶೀತ, ನೆಗಡಿ ಆದಾಗ ಈ ಪಾನಕವನ್ನು ಗುಟುಕು ಗುಟುಕಾಗಿ ಕುಡಿದರಂತೂ ಗಂಟಲಿಗೆ ಬಹಳ ಹಿತವೆನ್ನಿಸುತ್ತದೆ. 

ಸ್ವಾದಿಷ್ಟಕರವಾದ ಹಾಗೂ ಆರೋಗ್ಯಕ್ಕೆ ಹಿತವಾದ ಈ ಪಾನಕವನ್ನು ನೀವೂ ಒಮ್ಮೆ ತಯಾರಿಸಿ ನೋಡಿ:

  • ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
  • ಡಿಫಿಕಲ್ಟಿ ಲೆವೆಲ್: ಸುಲಭ 
  • ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:

  • ತಣ್ಣನೆಯ ನೀರು - 1 ಲೀಟರ್ ನಷ್ಟು 
  • ಜೇನುತುಪ್ಪ - 10 ಟೇಬಲ್ ಚಮಚ ಅಥವಾ ಸಿಹಿಯಾಗುವಷ್ಟು 
  • ನಿಂಬೆಹಣ್ಣು - 1 ಅಥವಾ 2 (ರಸಕ್ಕನುಗುಣವಾಗಿ)
  • ಶುಂಠಿ - 5 ಇಂಚು 

ತಯಾರಿಸುವ ವಿಧಾನ:

  • ಒಂದು ಪಾತ್ರೆಯಲ್ಲಿ ತಣ್ಣನೆಯ ನೀರನ್ನು ತೆಗೆದುಕೊಂಡು, ಇದಕ್ಕೆ 10 ಟೇಬಲ್ ಚಮಚ ಅಥವಾ ಸಿಹಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ. 
  • ಶುಂಠಿಯನ್ನು ಕ್ಲೀನ್ ಮಾಡಿಕೊಂಡು ಗ್ರೇಟರ್ ನಲ್ಲಿ ಸಣ್ಣಗೆ ತುರಿದುಕೊಳ್ಳಿ. ನಂತರ ಇದನ್ನು ಚೆನ್ನಾಗಿ ಜಜ್ಜಿಕೊಳ್ಳಿ.
  • ಜಜ್ಜಿದ ಶುಂಠಿಗೆ 1-2 ಚಮಚದಷ್ಟು ನೀರು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಸೋಸಿ, ಶುಂಠಿ ರಸವನ್ನು ನೀರಿನ ಪಾತ್ರೆಗೆ ಸೇರಿಸಿ. 
  • ಇದಕ್ಕೆ ಹುಳಿಯಾಗುವಷ್ಟು ನಿಂಬೆರಸ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
  • ತಣ್ಣನೆಯ ಪಾನಕವನ್ನು ಗ್ಲಾಸ್ ಗೆ ಹಾಕಿ ಸವಿಯಿರಿ.

ಟಿಪ್ಸ್: 

  • ಈ ಪಾನಕ ಫ್ರೆಶ್ ಇರುವಾಗಲೇ ಕುಡಿದರೆ ಹೆಚ್ಚು ರುಚಿ. 

Recipe photo

ಕಾಮೆಂಟ್‌ಗಳು