ಮಾಡಹಾಗಲ (ಮೂಡಹಾಗಲ)ಕಾಯಿ ಹಶಿ | Madahagala (Moodahagala)kayi Hashi

Click here for English version.

ಹಾಗಲಕಾಯಿ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ ತರಕಾರಿ. ಆದರೆ ಮಾಡಹಾಗಲ (ಮೂಡಹಾಗಲ)ಕಾಯಿ ಎಂದರೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಇದು ಹಾಗಲಕಾಯಿ ವರ್ಗಕ್ಕೆ ಸೇರಿದ, ಆದರೆ ಕಹಿ ಇರದ ತರಕಾರಿ. ಡೇರೆ ಹೂವಿನ ಗಿಡದಂತೆಯೇ ಇದು ಗಡ್ಡೆಯಿಂದ ಬೆಳೆಯುವ ಬಳ್ಳಿಯಾಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರು ಸಿಕ್ಕಿದಾಗ ಬೆಳೆಯುತ್ತದೆ. ಈಗಲೂ ನನ್ನ ಅಮ್ಮನ ತೌರುಮನೆಯ ಬಳಿ ಮಳೆಗಾಲದಲ್ಲಿ ಕಾಡಿಗೆ ಹೋದರೆ ಅಲ್ಲಿ ನಿಸರ್ಗದತ್ತವಾಗಿ ಬೆಳೆದ ಮಾಡ ಹಾಗಲಕಾಯಿ ಹೇರಳವಾಗಿ ಸಿಗುತ್ತದೆ! ಹಳ್ಳಿಗಳಲ್ಲಿ ಕಾಡಿನಿಂದ ಇದರ ಗಡ್ಡೆಗಳನ್ನು ಕಿತ್ತು ತಂದು ಮನೆಯ ಹಿತ್ತಿಲಲ್ಲಿ ಬಳ್ಳಿಯನ್ನು ಬೆಳೆಸಿ, ಈ ತರಕಾರಿಯನ್ನು ಅಡಿಗೆಗೆ ಬಳಸುತ್ತಾರೆ.
ನಾವು ಈ ಅಪರೂಪದ ತರಕಾರಿಯನ್ನು ನೋಡದೆ 4 - 5 ವರ್ಷಗಳಾದರೂ ಆಗಿಬಿಟ್ಟಿತ್ತೇನೊ? ಕಳೆದ ವಾರ ಜಯನಗರಕ್ಕೆ ಶಾಪಿಂಗ್ ಗೆ ಹೋದಾಗ ಅಲ್ಲಿಯ ಅಂಗಡಿಯೊಂದರಲ್ಲಿ ಮಾಡಹಾಗಲಕಾಯಿ ಮಾರಾಟಕ್ಕಿತ್ತು. ಎಷ್ಟೋ ವರ್ಷಗಳ ನಂತರ ಈ ತರಕಾರಿಯನ್ನು ನೋಡಿ ಬಹಳ ಖುಷಿಯಾಯಿತು! ಅಲ್ಲಿಂದ ತಂದ ಮಾಡಹಾಗಲಕಾಯಿಯಿಂದ ನಾನು ತಯಾರಿಸಿದ 'ಹಶಿ' ಯ ರೆಸಿಪಿ ಇಲ್ಲಿದೆ:  


ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಮಾಡಹಾಗಲಕಾಯಿ - 1 1/2  ಅಥವಾ 2 
ತೆಂಗಿನತುರಿ - 3/4 ಕಪ್
ಗಟ್ಟಿ ಮೊಸರು - 3/4 ರಿಂದ 1 ಕಪ್ 
ಒಗ್ಗರಣೆಗೆ: ಎಣ್ಣೆ - 2 ಚಮಚ, ಒಣಮೆಣಸು - 1, ಉದ್ದಿನಬೇಳೆ - 1 ಚಮಚ, ಸಾಸಿವೆ - 1 ಚಮಚ, ಹಸಿಮೆಣಸು - 1 
ರುಚಿಗೆ ಉಪ್ಪು 


ಮಾಡುವ ವಿಧಾನ:
ಮಾಡಹಾಗಲಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಹಸಿಮೆಣಸಿನ ಚೂರುಗಳನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಸಣ್ಣಗೆ ಹೆಚ್ಚಿದ ಮಾಡಹಾಗಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ 20 ನಿಮಿಷ ಹುರಿಯಿರಿ.
ತೆಂಗಿನತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸಿ ರುಬ್ಬಿ.
ಹುರಿದ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ರುಬ್ಬಿದ ತೆಂಗಿನತುರಿ, ಮೊಸರು ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ.
ತಯಾರಾದ ಹಶಿಯನ್ನು ಅನ್ನದೊಡನೆ ಹಾಕಿಕೊಂಡು ಸವಿಯಿರಿ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)