ಗೋಲ್ ಗಪ್ಪಾ / Gol Gappa

Click here for English version.

ಗೋಲ್ ಗಪ್ಪಾ, ಚಾಟ್ ತಿಂಡಿಗಳನ್ನು ತಯಾರಿಸುವಾಗ ಬಳಸುವ ಚಿಕ್ಕ ಪೂರಿ. ಗೋಲ್ ಗಪ್ಪಾ ಮನೆಯಲ್ಲಿ ಇದೆ ಎಂದಾದರೆ ಯಾವಾಗ ಬೇಕಾದರೂ ವಿವಿಧ ಚಾಟ್  ತಿಂಡಿಗಳನ್ನು ತಯಾರಿಸಿಕೊಳ್ಳಬಹುದು. ಸಾಮಾನ್ಯವಾಗಿ ಅಂಗಡಿಯಿಂದ ಕೊಂಡುತರುವ ಈ ಪೂರಿಗಳನ್ನು ಮನೆಯಲ್ಲೇ ಬಹಳ ಸುಲಭವಾಗಿ ಮಾಡಿಕೊಳ್ಳಲು ಇಲ್ಲಿದೆ ವಿಧಾನ..

ಬೇಕಾಗುವ ಸಾಮಗ್ರಿ:
ಸೂಜಿ ರವಾ - ಒಂದೂವರೆ ಕಪ್
ಮೈದಾಹಿಟ್ಟು - 3 ರಿಂದ 4 ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಅಡಿಗೆ ಸೋಡಾ - ಕಾಲು ಚಮಚ
ನೀರು - ಹಿಟ್ಟನ್ನು ಕಲಸಲು
ಕರಿಯಲು ಎಣ್ಣೆ 
     
ಮಾಡುವ ವಿಧಾನ:
ರವಾ, ಮೈದಾಹಿಟ್ಟು, ಉಪ್ಪು, ಸೋಡಾ ಇಷ್ಟನ್ನೂ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತಾ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗೇ ಇರಲಿ. ಇದನ್ನು ನಾದಿ ಉಂಡೆಯಂತೆ ಮಾಡಿ, ಒದ್ದೆ ಬಟ್ಟೆಯನ್ನು ಮುಚ್ಚಿ ಅರ್ಧ ಘಂಟೆ ನೆನೆಯಲು ಬಿಡಿ. 
ನಂತರ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಂಡು, ಚಪಾತಿಯಂತೆ ಲಟ್ಟಿಸಿಕೊಳ್ಳಿ. ಬೇಕಿದ್ದರೆ ಸ್ವಲ್ಪ ಮೈದಾಹಿಟ್ಟನ್ನು ಸವರಿಕೊಳ್ಳುತ್ತ ಲಟ್ಟಿಸಿ.


ಒಂದು ಪುಟ್ಟ ಮುಚ್ಚಳ ಅಥವಾ ಯಾವುದಾದರೂ ಗೋಲಾಕಾರಕ್ಕೆ ಪುಟ್ಟದಾಗಿ ಕತ್ತರಿಸಲು ಬರುವಂಥ ಸಾಮಗ್ರಿಯಿಂದ ಚಪಾತಿಯಿಂದ ಪುಟ್ಟ ಪುಟ್ಟ ಪೂರಿಗಳನ್ನು ಕತ್ತರಿಸಿ ತೆಗೆಯಿರಿ. ಉಳಿದ ಹಿಟ್ಟನ್ನು ಪುನಃ ಚಪಾತಿಯಂತೆ ಲಟ್ಟಿಸಿ, ಪೂರಿಯಾಕಾರಕ್ಕೆ ಕತ್ತರಿಸಿಕೊಳ್ಳಿ. ಎಲ್ಲ ಪೂರಿಗಳನ್ನು ಒಮ್ಮೆಗೇ ಲಟ್ಟಿಸಿಕೊಳ್ಳುವುದಾದರೆ, ಲಟ್ಟಿಸಿದ ಪೂರಿಗಳು ಒಣಗಿಹೋಗದಂತೆ ಒಂದು ಪ್ಲೇಟ್ ಮುಚ್ಚಿಡಿ.

ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಪೂರಿಗಳನ್ನು ಹಾಕಿ ಕರಿಯಿರಿ. ಸ್ವಲ್ಪ ಹೊಂಬಣ್ಣ ಬರತೊಡಗಿದಾಗ ಪೂರಿಗಳನ್ನು ಎಣ್ಣೆಯಿಂದ ತೆಗೆದು, ಟಿಷ್ಯೂ ಪೇಪರ್ ಮೇಲೆ ಹರವಿ, ಎಣ್ಣೆ ಆರಲು ಬಿಡಿ. ಪೂರಿಗಳು ತಣ್ಣಗಾದನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.

ಸೂಚನೆ: ಉಬ್ಬದ ಪೂರಿಗಳನ್ನೂ ಎತ್ತಿಟ್ಟುಕೊಂಡಿರಿ. ಈ ಪೂರಿಗಳಿಂದ ಟಿಕ್ಕಿ ಪೂರಿ ಇತ್ಯಾದಿ ಚಾಟ್ ಗಳನ್ನು ತಯಾರಿಸಬಹುದು.  

ಕಾಮೆಂಟ್‌ಗಳು