Click here for English version
ಮಜ್ಜಿಗೆ ಹುಳಿ / ಪಳದ್ಯ - ಇದು ನಮ್ಮೂರ ಹವ್ಯಕರ ಮನೆಗಳಲ್ಲಿ ಸಾಮಾನ್ಯವಾಗಿ ಊಟಕ್ಕೆ ತಯಾರಿಸುವ ಮೇಲೋಗರ. ದಿನವೂ ಅನ್ನದ ಜೊತೆ ಸಾಂಬಾರ್ ಊಟ ಮಾಡಿ ಬೇಜಾರಾದಾಗ ಮಜ್ಜಿಗೆ ಹುಳಿ / ಪಳದ್ಯ ಊಟಕ್ಕೆ ಚೆನ್ನಾಗಿರುತ್ತದೆ. ಈ ಮೇಲೋಗರಕ್ಕೆ ಬೇರೆ ಬೇರೆ ತರಕಾರಿಗಳನ್ನು ಬಳಸಿದಂತೆ ರುಚಿಯೂ ಬದಲಾಗುತ್ತದೆ. ಅಷ್ಟೇ ಅಲ್ಲದೆ, ತರಕಾರಿಗೆ ಹೊಂದುವಂತೆ ಸಿಹಿ ಅಥವಾ ಖಾರ ಹೀಗೆ ಎರಡು ಬಗೆಯಲ್ಲಿ ಮಜ್ಜಿಹುಳಿ ತಯಾರಿಸಬಹುದು.
ಇತ್ತೀಚೆಗೆ ಸಿಡ್ನಿ ಗೆ ಹೋದಾಗ ಆತ್ಮೀಯರೊಬ್ಬರು ಅವರ ಮನೆಯಲ್ಲಿ ಬೆಳೆದ ತೊಂಡೆಕಾಯಿಗಳನ್ನು ನಮಗೆ ಕೊಟ್ಟಿದ್ದರು. ಅದನ್ನು ಬಳಸಿ ನಾನು ತಯಾರಿಸಿದ್ದ ತೊಂಡೆಕಾಯಿ ಸಿಹಿ ಪಳದ್ಯ / ಮಜ್ಜಿಗೆಹುಳಿ ರೆಸಿಪಿ ಈ ಕೆಳಗಿನಂತಿದೆ:
- ತಯಾರಿಸಲು ಬೇಕಾಗುವ ಸಮಯ: 25 ನಿಮಿಷಗಳು
- ಡಿಫಿಕಲ್ಟಿ ಲೆವೆಲ್: ಮೀಡಿಯಮ್
- ಸರ್ವಿಂಗ್ಸ್: 6 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ತೊಂಡೆಕಾಯಿ - 15
- ದಪ್ಪಗಿನ ಮಜ್ಜಿಗೆ - 1 1/4 ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ಬೆಲ್ಲ / ಸಕ್ಕರೆ - 4 ರಿಂದ 5 ಚಮಚ (ರುಚಿಗೆ ತಕ್ಕಷ್ಟು)
- ರುಬ್ಬುವುದಕ್ಕೆ:
- ಕೊತ್ತಂಬರಿ ಬೀಜ - 1 1/4 ಟೀ ಚಮಚ
- ಸಾಸಿವೆ - 1 ಟೀ ಚಮಚ
- ಎಳ್ಳು - 1 ಟೀ ಚಮಚ
- ಅರಿಶಿನ - 1/2 ಟೀ ಚಮಚ
- ಹಸಿಮೆಣಸು ಅಥವಾ ಒಣಮೆಣಸು - ಚಿಕ್ಕ ಚೂರು
- ಕರಿಬೇವು - 2 ರಿಂದ 3 ಎಲೆಗಳು
- ಫ್ರೆಶ್ / ಫ್ರೋಜನ್ ತೆಂಗಿನತುರಿ - 1 ಕಪ್
- ನೀರು - ಸ್ವಲ್ಪ
- ಒಗ್ಗರಣೆಗೆ:
- ಎಣ್ಣೆ - 1 1/2 ಟೀ ಚಮಚ
- ಉದ್ದಿನಬೇಳೆ - 1 ಟೀ ಚಮಚ
- ಸಾಸಿವೆ - 1 ಟೀ ಚಮಚ
- ಕರಿಬೇವು - 7 ರಿಂದ 8 ಎಲೆಗಳು
ತಯಾರಿಸುವ ವಿಧಾನ:
- ತೊಂಡೆಕಾಯಿಯನ್ನು ತೊಳೆದು, ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ.
- ತೊಂಡೆಕಾಯಿ ಚೂರುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಅದಕ್ಕೆ ಹೋಳು ಮುಳುಗುವಷ್ಟು (ಅಂದಾಜು 2.5 ಕಪ್) ನೀರು, ಒಂದು ಚಮಚ ಉಪ್ಪು ಸೇರಿಸಿ ಬೇಯಲಿಡಿ.
- ತರಕಾರಿ ಬೇಯುವಷ್ಟರಲ್ಲಿ ರುಬ್ಬುವುದಕ್ಕೆ ಮೇಲೆ ಹೇಳಿರುವ ಸಾಮಗ್ರಿಗಳನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗಿನ ಪೇಸ್ಟ್ ರೆಡಿ ಮಾಡಿಕೊಳ್ಳಿ.
- ಸುಮಾರು 15 ನಿಮಿಷ ಬೇಯಿಸಿದ ನಂತರ ತೊಂಡೆಕಾಯಿ ಹೋಳುಗಳು ಮುಕ್ಕಾಲುಭಾಗ ಬೆಂದಿರುತ್ತವೆ ಹಾಗೂ ಹೋಳಿನ ಬಣ್ಣ ಬದಲಾಗಿರುತ್ತದೆ. ಈಗ ಈ ಮಿಶ್ರಣಕ್ಕೆ ಬೆಲ್ಲ ಸೇರಿಸಿ 3-4 ನಿಮಿಷ ಕುದಿಸಿ.
- ನಂತರ ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ 5 ನಿಮಿಷ ಕುದಿಸಿ. ಮಿಶ್ರಣ ತುಂಬಾ ದಪ್ಪ ಎನ್ನಿಸಿದರೆ ಸ್ವಲ್ಪ ನೀರು ಸೇರಿಸಿ.
- ಕೊನೆಯಲ್ಲಿ ಮಜ್ಜಿಗೆ ಸೇರಿಸಿ, ರುಚಿ ನೋಡಿಕೊಂಡು ಉಪ್ಪು ಅಥವಾ ಬೆಲ್ಲ ಬೇಕಿದ್ದರೆ ಸೇರಿಸಿ. ಮಿಶ್ರಣವನ್ನು ಒಂದು ನಿಮಿಷ ಕುದಿಸಿ ಉರಿ ಆಫ್ ಮಾಡಿ.
- ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿಮಾಡಿಕೊಂಡು ಉದ್ದಿನಬೇಳೆ, ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ತಯಾರಾದ ಪಳದ್ಯ / ಮಜ್ಜಿಗೆಹುಳಿಗೆ ಸೇರಿಸಿ.
- ಬಿಸಿಬಿಸಿ ಅನ್ನದೊಡನೆ ಈ ಮೇಲೋಗರ ಚೆನ್ನಾಗಿರುತ್ತದೆ. ಮಜ್ಜಿಗೆ ಸೇರಿಸಿ ಬಿಸಿ ಮಾಡಿರುವುದರಿಂದ 5 - 6 ತಾಸಿನವರೆಗೂ ಚೆನ್ನಾಗಿರುತ್ತದೆ. ಮಧ್ಯಾಹ್ನದ ಊಟಕ್ಕೆ ತಯಾರಿಸಿದರೆ ಸಂಜೆಯ ಊಟಕ್ಕೂ ಬಳಸಬಹುದು.
ಟಿಪ್ಸ್:
- ಅಥೆಂಟಿಕ್ ರುಚಿಗೆ ಒಗ್ಗರಣೆಗೆ ಕೊಬ್ಬರಿ ಎಣ್ಣೆ ಬಳಸಿದರೆ ಉತ್ತಮ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)