ಕಡಲೆಬೇಳೆ ಹೋಳಿಗೆ(ಒಬ್ಬಟ್ಟು) / Kadlebele holige

Click here for English version.

ಇದು ಹಬ್ಬ - ಹರಿದಿನಗಳಲ್ಲಿ ಸಾಮಾನ್ಯವಾಗಿ ತಯಾರಿಸುವ, ಜೊತೆಗೆ ಎಲ್ಲರಿಗೂ ಇಷ್ಟವಾಗುವ ಸಿಹಿ ಕಜ್ಜಾಯ. ತಯಾರಿಸುವುದು ಸ್ವಲ್ಪ ಕಷ್ಟವಾದರೂ ಇದನ್ನು ತಿನ್ನುವಾಗಿನ ಖುಷಿಯೇ ಬೇರೆ!


ಬೇಕಾಗುವ ಸಾಮಗ್ರಿ
ಕಡಲೆಬೇಳೆ - 1 ಲೋಟ ( 2 - 3 ಘಂಟೆ ನೆನೆಸಿಕೊಳ್ಳಿ)
ಬೆಲ್ಲ ಅಥವಾ ಸಕ್ಕರೆ - ಅಂದಾಜು 1 ಲೋಟ
ಉಪ್ಪು - ಸ್ವಲ್ಪ
ಅರಿಶಿನ - 1 / 4 ಚಮಚ
ಮೈದಾಹಿಟ್ಟು - 1 ಕಪ್
ಏಲಕ್ಕಿ ಪುಡಿ - 1 ಚಮಚ 
ಎಣ್ಣೆ 4 - 5 ಟೇಬಲ್ ಚಮಚ
ನೀರು - ಸ್ವಲ್ಪ

ವಿಧಾನ
ಕಣಕಕ್ಕೆ: ಮೊದಲು 1 ಕಪ್ ಮೈದಾಹಿಟ್ಟಿಗೆ ಕಾಲು ಚಮಚ ಅರಿಶಿನ, ಚಿಟಿಕೆ ಉಪ್ಪು ಹಾಕಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ಸುಮಾರು ಕಾಲು ಕಪ್ ನೀರು ಹಾಕಿ ಜಿಗುಟಾಗುವಂತೆ ಕಲಸಿ, ನಾಲ್ಕೈದು ಚಮಚ ಎಣ್ಣೆ ಸೇರಿಸಿ ಹತ್ತು ನಿಮಿಷ ಹಿಟ್ಟನ್ನು ಚೆನ್ನಾಗಿ ನಾದಿ. ಬೇಕಿದ್ದರೆ ಇನ್ನೂ ಸ್ವಲ್ಪ ಎಣ್ಣೆ ಸೇರಿಸಿ. ಹಿಟ್ಟು ಮೆತ್ತಗಿದ್ದು, ಕೈಗೆ ಅಂಟದಂತಿರಲಿ. ಇದನ್ನು ಒಂದು ಪಾತ್ರೆಯಲ್ಲಿಟ್ಟು ಒದ್ದೆ ಬಟ್ಟೆ ಮುಚ್ಚಿ, 2 - 3 ಘಂಟೆಗಳ ಕಾಲ ನೆನೆಯಲು ಬಿಡಿ.
ಹೂರಣಕ್ಕೆ: ಕಡ್ಲೆಬೇಳೆಗೆ ನೆನೆಯುವಷ್ಟು ನೀರು ಸೇರಿಸಿ, ಸುಮಾರು ಕಾಲು ಚಮಚ ಉಪ್ಪು ಹಾಕಿ ಕುಕ್ಕರ್ ಪಾತ್ರೆಯಲ್ಲಿಟ್ಟು ಕುಕ್ಕರ್ ನಲ್ಲಿ 1 ವಿಷಲ್ ಆಗುವವರೆಗೆ ಬೇಯಿಸಿ. ಇದು ಸ್ವಲ್ಪ ತಣ್ಣಗಾದ ನಂತರ ನೀರನ್ನು ಹೊರಚೆಲ್ಲಿ, ಬೇಳೆಯೊಡನೆ ಬೆಲ್ಲ ಅಥವಾ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಸ್ವಲ್ಪ ಬೆಲ್ಲ ಹಾಗೂ ಸ್ವಲ್ಪ ಸಕ್ಕರೆ ಎರಡನ್ನೂ ಹಾಕಿದರೆ ಚೆನ್ನಾಗಿರುತ್ತದೆ. ರುಬ್ಬಿದ ನಂತರ ರುಚಿ ನೋಡಿಕೊಂಡು, ಸಿಹಿ ಬೇಕಿದ್ದರೆ ಸೇರಿಸಿಕೊಳ್ಳಿ. ನಂತರ ಇದಕ್ಕೆ ಏಲಕ್ಕಿಪುಡಿ ಸೇರಿಸಿ ಕಲಸಿ, ಮೈಕ್ರೋವೇವ್ ಓವನ್ ನಲ್ಲಿ 2 - 3 ನಿಮಿಷ ಬಿಸಿಮಾಡಿ ಹೊರತೆಗೆಯಿರಿ. ನಂತರ ಒಮ್ಮೆ ಕೈಯಾಡಿಸಿ ಪುನಃ ಓವನ್ ನಲ್ಲಿ ಬಿಸಿಮಾಡಿ. ಇದೇ ರೀತಿ ನಾಲ್ಕೈದು ಬಾರಿ ಮಾಡಿ, ಹಿಟ್ಟು ಉಂಡೆ ಕಟ್ಟುವ ಹದಕ್ಕೆ ಬಂದಾಗ ಹೊರತೆಗೆದು ತಣ್ಣಗಾಗಲು ಬಿಡಿ. 
ಓವನ್ ಇಲ್ಲದಿದ್ದರೆ ದಪ್ಪ ತಳದ ಪಾತ್ರೆಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿಕೊಂಡು ಹದವಾದ ಉರಿಯಲ್ಲಿ ಕೈಯಾಡಿಸುತ್ತ, ಉಂಡೆ ಕಟ್ಟುವ ಹದಕ್ಕೆ ಬಂದಾಗ ಉರಿಯಿಂದ ಇಳಿಸಿ. ತಯಾರಿಸಿದ ಹೂರಣದಿಂದ ಚಿಕ್ಕ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಕಣಕವನ್ನೂ ಪಾಲುಮಾಡಿ, ಹೂರಣದ ಉಂಡೆಯಷ್ಟೇ ಸಂಖ್ಯೆಯ, ಸ್ವಲ್ಪ ಚಿಕ್ಕದಾದ ಉಂಡೆಗಳನ್ನು ಮಾಡಿಕೊಳ್ಳಿ. ಕಣಕದೊಳಗೆ ಹೂರಣದ ಉಂಡೆಯನ್ನಿರಿಸಿ, ಹೂರಣ ಹೊರಬರದಂತೆ ಉಂಡೆ ಮಾಡಿ, ಚಪ್ಪಟೆ ಮಾಡಿಕೊಂಡು ಮೈದಾ / ಗೋಧಿ ಹಿಟ್ಟಿನಲ್ಲಿ ಹೊರಳಿಸಿಕೊಂಡು ತೆಳ್ಳಗೆ ನಾಜೂಕಾಗಿ ರೊಟ್ಟಿಯಂತೆ ಲಟ್ಟಿಸಿ. ಇದನ್ನು ಕಾವಲಿಯಮೇಲೆ ಹದವಾದ ಉರಿಯಲ್ಲಿ ಎರಡೂ ಕಡೆ ಕೆಂಪಗೆ ಬೇಯಿಸಿ ತೆಗೆಯಿರಿ.

ತೆಳ್ಳಗಿನ ತುಪ್ಪ ಮತ್ತು ಸಕ್ಕರೆ ಪಾಕ ಈ ಹೋಳಿಗೆಗೆ ಒಳ್ಳೆಯ ಕಾಂಬಿನೇಶನ್!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)