ಖಾರದ ಪುಡಿ / Kharada Pudi

Click here for English version.

ಖಾರದ ಪುಡಿ, ದೋಸೆ ಅಥವಾ ರೊಟ್ಟಿಯಂಥ ತಿಂಡಿಗಳನ್ನು ತಿನ್ನುವಾಗ ಬಳಸುವ ಒಂದು ಬಗೆಯ ಪುಡಿ. ಇದನ್ನು ಹಾಗೇ ಉಪಯೋಗಿಸಬಹುದು, ಅಥವಾ ಸ್ವಲ್ಪ ಎಣ್ಣೆಯೊಡನೆ ಮಿಕ್ಸ್ ಮಾಡಿಯೂ ಬಳಸಬಹುದು. ಮಲೆನಾಡಿನ ಕಡೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇಂಥದ್ದೊಂದು ಪುಡಿ ಇದ್ದೇ ಇರುತ್ತದೆ. ನಾನು ಇದನ್ನು ಕಲಿತದ್ದು ಅಮ್ಮನಿಂದ. 


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
 

ಬೇಕಾಗುವ ಸಾಮಗ್ರಿಗಳು:
ಒಣಮೆಣಸು -  10 ರಿಂದ 12 (ಇದರ ಬದಲು ಮೆಣಸಿನ ಪುಡಿಯನ್ನೂ ಬಳಸಬಹುದು)
ಕಡ್ಲೆಬೇಳೆ - 1 ಚಿಕ್ಕ ಲೋಟದಷ್ಟು 
ಉದ್ದಿನಬೇಳೆ - ಕಡ್ಲೆಬೇಳೆಯ ಅರ್ಧದಷ್ಟು 
ಲವಂಗ - 5
ಕೊತ್ತಂಬರಿ ಬೀಜ - ಚಿಕ್ಕ ಲೋಟದಲ್ಲಿ ಅರ್ಧದಷ್ಟು 
ಜೀರಿಗೆ - 1 ಚಮಚ 
ಸಾಸಿವೆ - ಕಾಲು ಚಮಚ 
ಅರಿಶಿನ - 1 ದೊಡ್ಡ ಚಿಟಿಕೆ 
ಕರಿಬೇವಿನ ದಳಗಳು - 15 ರಿಂದ 20 
ಆಮ್ ಚೂರ್ ಪೌಡರ್ ಅಥವಾ ಹುಳಿಪುಡಿ - 1 / 2 ಚಮಚ 
ರುಚಿಗೆ ತಕ್ಕಷ್ಟು ಉಪ್ಪು 

ಮಾಡುವ ವಿಧಾನ:

ಉಪ್ಪು ಮತ್ತು ಆಮ್ ಚೂರ್ ಪೌಡರ್ ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನೂ ಎಣ್ಣೆ ಹಾಕದೆ ಹುರಿದು, ಉಪ್ಪು ಮತ್ತು ಆಮ್ ಚೂರ್ ಪೌಡರ್ ನೊಡನೆ ಮಿಕ್ಸಿಯಲ್ಲಿ ಪುಡಿಮಾಡಿಕೊಂಡು, ಗಾಳಿಯಾಡದಂತೆ ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಿ.
ದೋಸೆ, ರೊಟ್ಟಿಗಳೊಡನೆ ಹಾಕಿಕೊಳ್ಳುವಾಗ ಕೆಲವು ಹನಿ ಎಣ್ಣೆಯೊಡನೆ ಒಂದು ಚಮಚದಷ್ಟು ಖಾರದ ಪುಡಿಯನ್ನು ಕಲಸಿಕೊಂಡು ಬಳಸಿ.
ಯಾವಾಗಲೂ ಒಂದೇ ರೀತಿಯಲ್ಲಿ ಖಾರದ ಪುಡಿ ತಯಾರಿಸಲು ಬೇಸರವಾದರೆ ಇದರಲ್ಲಿ ಬಳಸಿರುವ ಸಾಮಗ್ರಿಗಳ ಪ್ರಮಾಣವನ್ನು ಸ್ವಲ್ಪ ಹೆಚ್ಚು-ಕಡಿಮೆ ಮಾಡಿಯೂ ನೋಡಬಹುದು.

ಕಾಮೆಂಟ್‌ಗಳು