ಸ್ವೀಟ್ ಕಾರ್ನ್ ಚಿತ್ರಾನ್ನ / Lemon Rice with Sweetcorn

Click here for English version.

ಯಾವಾಗಲೂ ಮನೆಯಲ್ಲಿ ಮಾಡುವ ಚಿತ್ರಾನ್ನಕ್ಕಿಂತ ಇದು ಸ್ವಲ್ಪ ಡಿಫರೆಂಟ್. ಸ್ವೀಟ್ ಕಾರ್ನ್ ಹಾಕಿರುವುದರಿಂದ ಕಲರ್ ಫುಲ್ ಆಗಿ ಕಾಣುವ ಈ ಚಿತ್ರಾನ್ನ ಮಕ್ಕಳಿಗಂತೂ ತುಂಬಾ ಇಷ್ಟವಾಗುತ್ತದೆ. ನಾವು ಒಮ್ಮೆ ನನ್ನ ಅತ್ತಿಗೆ ವಿನುತಾರ ಮನೆಗೆ ಹೋಗಿದ್ದಾಗ ಅವರು ಇಂಥ ಚಿತ್ರಾನ್ನವನ್ನು ಮಾಡಿದ್ದರು. ಅವರಿಂದ ಕಲಿತ ಈ ಚಿತ್ರಾನ್ನವನ್ನು ನಾನು ಸಾಮಾನ್ಯವಾಗಿ ನಮ್ಮವರ ಮದ್ಯಾಹ್ನದ ಲಂಚ್ ಬಾಕ್ಸ್ ಗೆ ಕಳಿಸಲು ತಯಾರಿಸುತ್ತಿರುತ್ತೇನೆ.


ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು 
ಸರ್ವಿಂಗ್ಸ್: 2 
 

ಬೇಕಾಗುವ ಸಾಮಗ್ರಿಗಳು: 
ಅಕ್ಕಿ - ಒಂದೂವರೆ ಕಪ್
ಸ್ವೀಟ್ ಕಾರ್ನ್ - ಮುಕ್ಕಾಲು ಕಪ್
ಲಿಂಬೆ ಹಣ್ಣು - 1 
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 / 4 ಚಮಚ
ಒಗ್ಗರಣೆಗೆ: ಎಣ್ಣೆ - 3 ಚಮಚ, ಉದ್ದಿನ ಬೇಳೆ - 1 ಚಮಚ, ಸಾಸಿವೆ - 1 / 2 ಚಮಚ, ಚಿಟಿಕೆ ಇಂಗು, ಅರಿಶಿನ - 1 / 4 ಚಮಚ, ಹಸಿಮೆಣಸು (ಹೆಚ್ಚಿದ್ದು) - 3 , ಕರಿಬೇವು - ಸ್ವಲ್ಪ 

ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು, ಉದುರಾಗಿ ಅನ್ನ ಮಾಡಿಕೊಳ್ಳಿ. 
ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ, ತಣ್ಣಗಾಗಲು ಬಿಡಿ. 
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉದ್ದಿನ ಬೇಳೆ, ಸಾಸಿವೆ, ಇಂಗು ಹಾಕಿ ಸಾಸಿವೆ ಚಟಗುಟ್ಟಿದ ನಂತರ ಅರಿಶಿನ, ಹಸಿಮೆಣಸು, ಕರಿಬೇವು ಹಾಕಿ ಕೈಯಾಡಿಸಿ. 
ಇದಕ್ಕೆ ಸ್ವೀಟ್ ಕಾರ್ನ್ ಸೇರಿಸಿ 2 - 3 ನಿಮಿಷ ಬೇಯಲು ಬಿಡಿ. 
ನಂತರ ಅನ್ನ ಸೇರಿಸಿ ಸ್ವಲ್ಪ ಕೈಯಾಡಿಸಿ, ಅದಕ್ಕೆ ಉಪ್ಪು, ಸಕ್ಕರೆ ಮತ್ತು ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಕಲಸಿ. 
ರುಚಿ ನೋಡಿಕೊಂಡು ಉಪ್ಪು ಅಥವಾ ನಿಂಬೆರಸ ಜಾಸ್ತಿ ಬೇಕಿದ್ದರೆ ಸೇರಿಸಿಕೊಳ್ಳಿ.  

ಕಾಮೆಂಟ್‌ಗಳು