ಮಂಡಕ್ಕಿ ಚುಡುವಾ (ಚುರುಮುರಿ) / Puffed Rice Churumuri

Click here for English version.

ಇದು ಮಂಡಕ್ಕಿ ಅಥವಾ ಕಡ್ಲೆಪುರಿಯಿಂದ ತಯಾರಿಸುವ ಸ್ನ್ಯಾಕ್ಸ್. ಟೀ ಅಥವಾ ಕಾಫಿಯೊಡನೆ ತಿನ್ನಲು ಬಹಳ ಚೆನ್ನಾಗಿರುತ್ತದೆ. ನಮ್ಮೂರಿನ ಕಡೆಯ ಹಳ್ಳಿಗಳಲ್ಲಿ ಅಂಗಡಿಯಿಂದ ತಿಂಡಿಗಳನ್ನು ಕೊಂಡು ತರುವ ಪರಿಪಾಠ ಬಹಳ ಕಡಿಮೆ. ಆಯಾ ಕಾಲದಲ್ಲಿ ಸಿಗುವ ಹಲಸಿನಕಾಯಿ (Jackfruit), ಬಾಳೆಕಾಯಿ (Raw banana), ಗೆಣಸು (Sweet potato) ಬೇರುಹಲಸಿನಕಾಯಿ (Breadfruit) ಮುಂತಾದವುಗಳಿಂದ ತಯಾರಿಸುವ ಚಿಪ್ಸ್, ಅಥವಾ ಅವ್ಯಾವುದೂ ಸಿಗದಿದ್ದಾಗ ಕಡಲೆಪುರಿ ಅಥವಾ ಅವಲಕ್ಕಿಯಿಂದ ತಯಾರಿಸುವ ಚುಡುವಾ ಎಲ್ಲರ ಮನೆಯ ಸ್ನ್ಯಾಕ್ಸ್ ಟೈಮ್ ಟ್ರೀಟ್. ನಮ್ಮ ಮನೆಯಲ್ಲಿ ಮಾಡುವ ಚುಡುವಾದಲ್ಲಿ ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ನಾನು ಮಾಡಿದ ಕಡ್ಲೆಪುರಿ ಚುಡುವಾ ತಯಾರಿಕಾ ವಿಧಾನ ಇಲ್ಲಿದೆ..



ತಯಾರಿಸಲು ಬೇಕಾಗುವ ಸಮಯ: 25 ನಿಮಿಷಗಳು 

ಬೇಕಾಗುವ  ಸಾಮಗ್ರಿ:
ಮಂಡಕ್ಕಿ(ಕಡ್ಲೆಪುರಿ) - 1 ದೊಡ್ಡ ಬಟ್ಟಲು 
ಶೇಂಗಾ (ಹುರಿಗಡಲೆ) - 1/ 2 ಕಪ್
ಪುಟಾಣಿ - 1/ 2 ಕಪ್  
ಸಾಸಿವೆ - 1 / 2 ಚಮಚ 
ಜಜ್ಜಿದ ಬೆಳ್ಳುಳ್ಳಿ - 1 ಚಮಚ (ಬೆಳ್ಳುಳ್ಳಿ ಇಷ್ಟವಾಗದಿದ್ದರೆ ಅದರ ಬದಲು ಇಂಗು ಬಳಸಬಹುದು)
ಸಣ್ಣಗೆ ಹೆಚ್ಚಿದ ಹಸಿಮೆಣಸು - 1 
ಅರಿಶಿನ - 1 / 4 ಚಮಚ    
ಮೆಣಸಿನಪುಡಿ - 1 / 2 ಚಮಚ (ಖಾರಕ್ಕೆ ತಕ್ಕಂತೆ)
ಕರಿಬೇವು ಹೆಚ್ಚಿದ್ದು - ಸ್ವಲ್ಪ 
ಎಣ್ಣೆ - 4 ರಿಂದ 5 ಚಮಚ
ಪುಡಿ ಉಪ್ಪು - ರುಚಿಗೆ ತಕ್ಕಷ್ಟು 
ಆಮ್ ಚೂರ್ ಪುಡಿ - ಒಂದು ದೊಡ್ಡ ಚಿಟಿಕೆ 
ಸಕ್ಕರೆ ಪುಡಿ - 1 / 2 ಚಮಚ

ಮಾಡುವ ವಿಧಾನ:
ಮೊದಲು ಮಂಡಕ್ಕಿಯನ್ನು ಕಾದ ಬಾಣಲೆಯಲ್ಲಿ ಹಾಕಿ 5 ನಿಮಿಷ ಸಣ್ಣ ಬೆಂಕಿಯಲ್ಲಿ ಹುರಿದು ಗರಿಗರಿಯಾಗಿ ಮಾಡಿ ತೆಗೆದಿಟ್ಟುಕೊಳ್ಳಿ. 
ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಶೇಂಗಾ, ಪುಟಾಣಿ, ಸಾಸಿವೆ, ಹಸಿಮೆಣಸು ಹಾಕಿ ಎಲ್ಲವನ್ನೂ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಮೆಣಸಿನಪುಡಿ, ಅರಿಶಿನ, ಕರಿಬೇವು ಹಾಕಿ, ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ಸೇರಿಸಿ. ಬೆಳ್ಳುಳ್ಳಿ ಚೆನ್ನಾಗಿ ಹುರಿದನಂತರ ಉರಿಯಿಂದ ಇಳಿಸಿ. 
ಈ ಮಿಶ್ರಣಕ್ಕೆ ಉಪ್ಪು, ಸಕ್ಕರೆ, ಆಮ್ ಚೂರ್ ಪುಡಿ ಸೇರಿಸಿ ಕಲಸಿಕೊಂಡು, ಕೊನೆಯಲ್ಲಿ ಹುರಿದಿಟ್ಟ ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ. 
ಸೌಟಿಗಿಂತ ಕೈಗಳ ಸಹಾಯದಿಂದ ಕಲಸಿದರೆ ಮಿಶ್ರಣ ಚೆನ್ನಾಗಿ ಕೂಡಿ ಬರುತ್ತದೆ. 
ಕಲಸಿದ ನಂತರ ರುಚಿ ನೋಡಿಕೊಂಡು ಉಪ್ಪು ಅಥವಾ ಸಕ್ಕರೆ ಬೇಕಿದ್ದರೆ ಸೇರಿಸಿ. 
ಬಿಸಿ ಬಿಸಿ ಟೀಯೊಡನೆ ಇದನ್ನು ತಿಂದುನೋಡಿ. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)