ಪುದೀನಾ ರೈಸ್ / Pudina (Mint leaves) Rice

Click here for English version.

ನಾವು ಬೆಂಗಳೂರಿನಲ್ಲಿದ್ದಾಗ ಮನೆಯ ಬಾಲ್ಕನಿಯಲ್ಲಿ ಪಾಟ್ ನಲ್ಲಿ ಒಂದಿಷ್ಟು ಗಿಡಗಳನ್ನು ಬೆಳೆಸಿದ್ದೆವು. ನನಗೆ ಯಾರೋ ಹೇಳಿದ್ದರು, ಪುದೀನಾ ಗಿಡ ಪಾಟ್ ನಲ್ಲಿ ಹಾಕಿದರೂ ಚೆನ್ನಾಗಿ ಆಗುತ್ತದೆಂದು. ನಾನು ಬೆಳೆಸಿದ ಪುದೀನಾ ಗಿಡಗಳು ಇನ್ನೂ ಚಿಕ್ಕವಿರುವಾಗಲೇ ಅವನ್ನೆಲ್ಲ ಬಿಟ್ಟು ದೂರದ ಆಸ್ಟ್ರೇಲಿಯಾಗೆ ಬಂದದ್ದಾಯಿತು.. 
ಪುದೀನಾ ಎಲೆಗಳು ಫ್ರಿಜ್ ನಲ್ಲಿ ಇಟ್ಟರೂ ಹೇಗೋ ಬಹಳ ಬೇಗ ಕೊಳೆತುಹೋಗುತ್ತವೆ. ನಾನು ಪುದೀನಾ ಎಲೆಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಮಿಕ್ಸಿಯಲ್ಲಿ ಕಡಿಮೆ ನೀರು ಸೇರಿಸಿ ನುಣ್ಣಗೆ ರುಬ್ಬಿ, ಒಂದು ಗ್ಲಾಸ್ ಬಾಟಲಿಯಲ್ಲಿ ತುಂಬಿಸಿ ಫ್ರಿಜ್ ನಲ್ಲಿ ಇಟ್ಟುಕೊಂಡು ಚಟ್ನಿ, ಚಾಟ್ಸ್, ಪುದೀನಾ ರೈಸ್ - ಎಲ್ಲಕ್ಕೂ ಅದನ್ನೇ ಬಳಸುತ್ತೇನೆ. ಒಮ್ಮೆ ಈ ಪೇಸ್ಟ್ ತಯಾರಿಸಿಕೊಂಡರೆ ಸುಮಾರು ಒಂದೂವರೆ ತಿಂಗಳವರೆಗೂ ಇಟ್ಟುಕೊಳ್ಳಬಹುದು. ಹಿಂದಿನ ಸಲ ಪುದೀನಾ ಸೊಪ್ಪನ್ನು ತಂದಾಗ ಮತ್ತೆ ನೆನಪಾಯಿತು; ಇಲ್ಲೂ ಪಾಟ್ ನಲ್ಲಿ ಹಾಕಬಹುದೆಂದು. ಆದರೆ ನೆಟ್ಟ ಪುದೀನಾ ಗಿಡಗಳನ್ನೆಲ್ಲ ದಿನವೂ ಬರುವ ಪಾರಿವಾಳಗಳು ಹಾಳುಮಾಡಿಬಿಟ್ಟವು:(  ಈ ಸಲ ಸೊಪ್ಪನ್ನು ತಂದಾಗ ಇನ್ನೊಮ್ಮೆ ನೆಟ್ಟು, ಹೇಗಾದರೂ ಅವರಿಂದ ಕಾಯ್ದುಕೊಳ್ಳಬೇಕೆಂದಿದೆ, ಏನಾಗುವುದೋ ನೋಡಬೇಕು.. ಆ ಪಾರಿವಾಳಗಳಿಗೆ ನಮ್ಮೊಡನೆ ಎಷ್ಟು ಅಡ್ಜಸ್ಟ್ ಆಗಿಬಿಟ್ಟಿದೆಯೆಂದರೆ, ಒಂದು ದಿನ ಬೆಳಿಗ್ಗೆ ಏಳಲು ತಡವಾದರೆ ಸಾಕು, ಅಕ್ಕಿ ಹಾಕಿಲ್ಲವೆಂದು ಬಾಲ್ಕನಿಯಲ್ಲೆಲ್ಲ ಜೋರು ಗಲಾಟೆ! ಒಮ್ಮೊಮ್ಮೆ ಅವು ಬಾಲ್ಕನಿಯ ಬಾಗಿಲನ್ನು ಕುಟ್ಟಿ ನಮ್ಮನ್ನು ಕರೆಯಲು ನೋಡುತ್ತವೆ. ಅಕ್ಕಿ ಹಾಕಿಬಿಟ್ಟರೆ ಆಯಿತು, ಒಂದು ನಿಮಿಷದೊಳಗೆ ತಿಂದು ಮುಗಿಸಿ ಎಲ್ಲರೂ ಮಾಯ!


ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ
 
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಒಂದೂವರೆ ಕಪ್
ಪುದೀನಾ ಸೊಪ್ಪು - 1 / 2 ಕಟ್ಟು 
ಹಸಿಮೆಣಸು - 3 
ಶುಂಠಿ - 1 ಇಂಚು 
ಬೆಳ್ಳುಳ್ಳಿ 3 - 4 ಎಸಳು 
ತೆಂಗಿನತುರಿ - 1 / 4 ಕಪ್
ಏಲಕ್ಕಿ - 2 
ಲವಂಗ - 4 
ಚಕ್ಕೆ ನಾಲ್ಕೈದು ಚಿಕ್ಕ ಚೂರುಗಳು 
ಈರುಳ್ಳಿ - ದೊಡ್ಡದಾದರೆ ಅರ್ಧ ಸಾಕು 
ಆಲೂಗಡ್ಡೆ - ಅರ್ಧ 
ನೀರು (ಅನ್ನ ಬೇಯಿಸಲು) - 3 ಲೋಟ
ಎಣ್ಣೆ - 3 ಟೇಬಲ್ ಚಮಚ 
ಅರ್ಧ ನಿಂಬೆಹಣ್ಣು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚಿಕ್ಕ ಹೋಳುಗಳಾಗಿ ಹೆಚ್ಚಿಕೊಂಡು, ಕಪ್ಪಾಗದಂತೆ ನೀರಿನಲ್ಲಿ ಮುಳುಗಿಸಿಟ್ಟಿರಿ.
ಈರುಳ್ಳಿಯನ್ನು ತೆಳ್ಳಗೆ ಹೆಚ್ಚಿಕೊಳ್ಳಿ. ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಪುದೀನಾ, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.


ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಸೇರಿಸಿ ಸ್ವಲ್ಪ ಹುರಿದುಕೊಂಡು, ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವತನಕ ಹುರಿಯಿರಿ. 
ನಂತರ ಇದಕ್ಕೆ ರುಬ್ಬಿಕೊಂಡ ಪೇಸ್ಟ್ ಮತ್ತು ಹೆಚ್ಚಿದ ಆಲೂಗಡ್ಡೆ ಸೇರಿಸಿ ಹಸಿ ವಾಸನೆ ಹೋಗುವಂತೆ 3 - 4 ನಿಮಿಷ ಹುರಿಯಿರಿ. ಇದಕ್ಕೆ ತೊಳೆದ ಅಕ್ಕಿ ಸೇರಿಸಿ ಒಂದೆರಡು ನಿಮಿಷ ಹುರಿದು, ಬೇಯಿಸಲು ಬೇಕಾದಷ್ಟು ನೀರು ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ ಸೇರಿಸಿ, ಕುಕ್ಕರ್ ನಲ್ಲಿ ಹಾಕಿ ಬೇಯಿಸಿ. 
ಪುದೀನಾ ರೈಸ್ ನ್ನು ನಿಮ್ಮಿಷ್ಟದ ರಾಯಿತಾ ಅಥವಾ ಬರೀ ಮೊಸರಿನೊಡನೆಯೂ ತಿನ್ನಬಹುದು.

ಟಿಪ್ಸ್:
  • ಪುದೀನಾ ಸೊಪ್ಪನ್ನು ರುಬ್ಬುವಾಗ ಹೆಚ್ಚು ನೀರನ್ನು ಸೇರಿಸಿದ್ದರೆ, ಅನ್ನ ಬೇಯಿಸುವಾಗ ಸ್ವಲ್ಪ ಕಡಿಮೆ ನೀರು ಸೇರಿಸಿ. ನೀರು ಹೆಚ್ಚಾದರೆ ಅನ್ನ ಮುದ್ದೆಯಾಗಿಬಿಡುತ್ತದೆ. 
  • ಅಲಂಕಾರಕ್ಕೆ ಬೇಕಿದ್ದರೆ ಗೇರುಬೀಜದ ಚೂರುಗಳನ್ನು ಎಣ್ಣೆಯಲ್ಲಿ ಹುರಿದು ಪುದೀನಾ ರೈಸ್ ಗೆ ಸೇರಿಸಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)