ಆಲೂ ಕ್ಯಾಪ್ಸಿಕಂ ಡ್ರೈ ಕರ್ರಿ / Aloo Capsicum dry curry

Click here for English version.

ನನ್ನ ಇಷ್ಟದ ತರಕಾರಿಗಳಲ್ಲಿ ಕ್ಯಾಪ್ಸಿಕಂ ಕೂಡ ಒಂದು. ಸಾಮಾನ್ಯವಾಗಿ ಮನೆಯಲ್ಲಿ ಅದರ ಸ್ಟಾಕ್ ಇದ್ದೇ ಇರುತ್ತದೆ. ಯಾವುದೇ ಅಡುಗೆಗೆ ಕ್ಯಾಪ್ಸಿಕಂ ಬಳಸಿದರೂ ಅದರ ವಿಶಿಷ್ಟ ಪರಿಮಳ ಅಡಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಕ್ಯಾಪ್ಸಿಕಂ ನ್ನು ಇತರ ತರಕಾರಿಗಳಂತೆ ಹೆಚ್ಚು ಬೇಯಿಸಬಾರದು. ಅಡಿಗೆಯ ಕೊನೆಯಲ್ಲಿ ಕ್ಯಾಪ್ಸಿಕಂ ಚೂರುಗಳನ್ನು ಸೇರಿಸಿ 5 - 6 ನಿಮಿಷ ಬೇಯಿಸಿಬಿಟ್ಟರೆ ಸಾಕು; ಕ್ಯಾಪ್ಸಿಕಂ ಹದವಾಗಿ ಬೆಂದು, ಅದರ ಪರಿಮಳ ಅಡಿಗೆಯಲ್ಲಿ ಸೇರಿಕೊಂಡಿರುತ್ತದೆ.
ಈ ಕರ್ರಿಯನ್ನು ನಾನು ಅಕ್ಕನಿಂದ ಕಲಿತದ್ದು. ಕ್ಯಾಪ್ಸಿಕಂ ಜೊತೆಗೆ ಮೆಂತೆಯ ಪರಿಮಳವೂ ಸೇರಿ ಒಂದು ವಿಶಿಷ್ಟ ರುಚಿ ಇದರದು. ರೊಟ್ಟಿ ಹಾಗೂ ಅನ್ನದೊಡನೆ ಒಳ್ಳೆಯ ಕಾಂಬಿನೇಶನ್.


ತಯಾರಿಸಲು ಬೇಕಾಗುವ ಸಮಯ: 1 / 2 ಘಂಟೆ
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
1 ಮಧ್ಯಮಗಾತ್ರದ ಕ್ಯಾಪ್ಸಿಕಂ
1 ಮಧ್ಯಮಗಾತ್ರದ ಆಲೂಗಡ್ಡೆ 
ಮೆಂತ್ಯ - 1 ಟೀ ಸ್ಪೂನ್
ಹಸಿಮೆಣಸು - 1 
ಶುಂಠಿ - 1 ಇಂಚು 
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ - 2 ಚಮಚ

ಮಾಡುವ ವಿಧಾನ:
ಆಲೂಗಡ್ಡೆ ಸಿಪ್ಪೆ ತೆಗೆದು, ಆಲೂಗಡ್ಡೆ ಮತ್ತು ಕ್ಯಾಪ್ಸಿಕಂ ಎರಡನ್ನೂ ಸ್ವಲ್ಪ ತೆಳ್ಳಗೆ ಚಿಕ್ಕ ಚೂರುಗಳಾಗಿ ಹೆಚ್ಚಿಕೊಳ್ಳಿ. ಹಸಿಮೆಣಸನ್ನೂ ಹೆಚ್ಚಿಟ್ಟುಕೊಳ್ಳಿ.


ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದನಂತರ ಮೆಂತ್ಯ ಸೇರಿಸಿ ಸ್ವಲ್ಪ ಹುರಿದುಕೊಂಡು ನಂತರ ಹೆಚ್ಚಿದ ಹಸಿಮೆಣಸು, ಆಲೂಗಡ್ಡೆ ಸೇರಿಸಿ ಮಿಕ್ಸ್ ಮಾಡಿ. ಬಾಣಲೆಗೆ ಮುಚ್ಚಳ ಮುಚ್ಚಿ ಆಲೂಗಡ್ಡೆ ಬೇಯಲು ಬಿಡಿ. ತಳ ಹಿಡಿಯದಂತೆ ಆಗಾಗ್ಗೆ ಕೈಯಾಡಿಸುತ್ತಿರಿ. 
ಆಲೂಗಡ್ಡೆ ಮುಕ್ಕಾಲುಭಾಗ ಬೆಂದ ನಂತರ ಇದಕ್ಕೆ ಹೆಚ್ಚಿದ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪುಮತ್ತು ಜಜ್ಜಿದ ಶುಂಠಿಯನ್ನು  ಸೇರಿಸಿ, ಮುಚ್ಚಳ ಮುಚ್ಚಿ ನಾಲ್ಕೈದು ನಿಮಿಷ ಬೇಯಿಸಿ ಇಳಿಸಿ.
ಇದು ಅನ್ನ, ರೊಟ್ಟಿ, ಚಪಾತಿಯೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ.


ಟಿಪ್ಸ್:
  • ಕ್ಯಾಪ್ಸಿಕಂ ನ್ನು ಜಾಸ್ತಿ ಹೊತ್ತು ಬೇಯಿಸಬೇಡಿ. ಅದರ ಕುರ್ರುಂ ಕುರ್ರುಂ ಕ್ರಂಚಿನೆಸ್ ಉಳಿದಿದ್ದರೆ ತಿನ್ನಲು ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು