ರವಾ ದೋಸೆ / Semolina Dosa

Click here for English version.

ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಹಬ್ಬ - ಹರಿದಿನಗಳಂದು ಬೆಳಗಿನ ತಿಂಡಿಗೆ ಈ ದೋಸೆಯನ್ನು ಮಾಡುತ್ತಾರೆ. ದೋಸೆ ಎಂದ ತಕ್ಷಣ ಅದಕ್ಕೆ ಹಿಟ್ಟನ್ನು ತಯಾರಿಸಲು ಅಕ್ಕಿ ಬೇಕೇ ಬೇಕು. ಆದರೆ ಈ ರವಾ ದೋಸೆಯನ್ನು ಅಕ್ಕಿಯನ್ನು ಬಳಸದೆಯೇ ತಯಾರಿಸಲಾಗುತ್ತದೆ. ಈ ದೋಸೆಗೆ ಹಿಟ್ಟನ್ನು ತಯಾರಿಸುವ ವಿಧಾನ ಇಡ್ಲಿ ಹಿಟ್ಟಿನ ತಯಾರಿಕೆಯನ್ನೇ ಹೋಲುತ್ತದೆ. 

 
ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಹಿಟ್ಟು ಹುದುಗುಬರಲು ಬೇಕಾಗುವ ಸಮಯ: 7 - 8 ಘಂಟೆ
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
 
ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ - 1 / 2 ಕಪ್ (2 - 3 ಘಂಟೆ ನೀರಿನಲ್ಲಿ ನೆನೆಸಿಕೊಳ್ಳಿ)
ಸೂಜಿ ರವಾ - 2 ಕಪ್ 
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ:
ನೀರಿನಲ್ಲಿ ನೆನೆಸಿದ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರವೆಯನ್ನು ಸ್ವಲ್ಪ ನೀರು ಸೇರಿಸಿ ತೊಳೆದು, ನೀರನ್ನೆಲ್ಲ ಚೆಲ್ಲಿಬಿಡಿ. 
ರುಬ್ಬಿದ ಹಿಟ್ಟಿಗೆ ತೊಳೆದ ರವೆಯನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಹಿಟ್ಟು ತೆಳ್ಳಗೆನಿಸಿದರೆ ಇನ್ನೂ ಸ್ವಲ್ಪ ರವೆ ಸೇರಿಸಿಕೊಳ್ಳಬಹುದು.
ದೋಸೆ ಹಿಟ್ಟನ್ನು ಬೆಚ್ಚಗಿನ ಸ್ಥಳದಲ್ಲಿ 7 - 8 ಘಂಟೆಕಾಲ ಅಥವಾ ರಾತ್ರಿಯಿಡೀ ಇಡಿ.

 
ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಕಾದ ಕಾವಲಿಯಮೇಲೆ ದೋಸೆ ಹಾಕಿ.
ದೋಸೆಯನ್ನು ಬೇಯಿಸುವಾಗ ಬೇಕಿದ್ದರೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಬಹುದು.
ಬಿಸಿ ಬಿಸಿ ದೋಸೆಯನ್ನು ಚಟ್ನಿ ಅಥವಾ ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ತಿನ್ನಿ.


ಕಾಮೆಂಟ್‌ಗಳು