ತರಕಾರಿ ಪೊಂಗಲ್ / Veg. Pongal

Click here for English Version.

ಪೊಂಗಲ್ ಎಂದರೆ ಮಕರ ಸಂಕ್ರಾಂತಿಗೆ ತಯಾರಿಸುವ ವಿಶೇಷ ತಿನಿಸು. ಇದರ ಮೂಲ ತಮಿಳುನಾಡು. ನಾನು ಪೊಂಗಲ್ ನ ರುಚಿ ನೋಡಿದ್ದು ನನ್ನ ಕಾಲೇಜ್ ಜೀವನ ಮುಗಿಸಿ ಬೆಂಗಳೂರಿಗೆ ಬಂದ ನಂತರವೇ.. ಅಲ್ಲಿಯವರೆಗೂ ಪೊಂಗಲ್ ಎಂದರೆ ಹೇಗಿರುವುದೆಂದು ಗೊತ್ತೇ ಇರಲಿಲ್ಲ! ಏಕೆಂದರೆ ನಮ್ಮ ಮನೆಯಲ್ಲಿ ಇದನ್ನು ತಯಾರಿಸುವ ಪರಿಪಾಠವಿಲ್ಲ. ಪೊಂಗಲ್ ನಲ್ಲಿ ಎರಡು ಬಗೆ: ಸಿಹಿ ಪೊಂಗಲ್ ಮತ್ತು ಸಪ್ಪೆ (ವೆಣ್) ಪೊಂಗಲ್. ತರಕಾರಿ ಪೊಂಗಲ್ ಎಂದರೆ ಸಪ್ಪೆ ಪೊಂಗಲ್ ಗೆ ಒಂದಿಷ್ಟು ತರಕಾರಿ, ಹಸಿಮೆಣಸು ಇತ್ಯಾದಿಗಳನ್ನು ಸೇರಿಸಿ ತಯಾರಿಸಿದ್ದು. ಊಟಕ್ಕೆ ಅಥವಾ ಲಂಚ್ ಬಾಕ್ಸ್ ಗೆ ಚೆನ್ನಾಗಿರುತ್ತದೆ.


ಸರ್ವಿಂಗ್ಸ್ - 3
ತಯಾರಿಸಲು ಬೇಕಾಗುವ ಸಮಯ: 45- 50 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - 3 / 4 ಕಪ್ 
ಅಕ್ಕಿ - 1 ಕಪ್
ಹೆಚ್ಚಿದ ತರಕಾರಿಗಳು ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ - ಒಂದೂವರೆ ಕಪ್ 
ಹಸಿಮೆಣಸು - 3 
ಒಗ್ಗರಣೆಗೆ: ಎಣ್ಣೆ / ತುಪ್ಪ, ಜೀರಿಗೆ, ಸಾಸಿವೆ, ಇಂಗು
ಅರಿಶಿನ - 1 / 4 ಚಮಚ 
ಹಾಲು - ಒಂದರಿಂದ ಒಂದೂವರೆ ಕಪ್
ಹೆಚ್ಚಿದ ಈರುಳ್ಳಿ - ಸ್ವಲ್ಪ (ಬೇಕಿದ್ದರೆ)
ಕರಿಬೇವು
ಗೋಡಂಬಿ (ಬೇಕಿದ್ದರೆ)
ನಿಂಬೆಹಣ್ಣು - 1 
ಉಪ್ಪು
ಶುಂಠಿ - 1 ಇಂಚು
ತೆಂಗಿನತುರಿ - 1 / 4 ಕಪ್
ತುಪ್ಪ - 2 ಚಮಚ 

ಮಾಡುವ ವಿಧಾನ:
ಹೆಸರುಬೇಳೆಯನ್ನು ಹದವಾದ ಉರಿಯಲ್ಲಿ ಹೊಂಬಣ್ಣಕ್ಕೆ ಬರುವತನಕ ಹುರಿಯಿರಿ.
ಹುರಿದ ಬೇಳೆಗೆ ನೀರು ಸೇರಿಸಿ ಬೇಳೆಯನ್ನು ತೊಳೆದುಕೊಳ್ಳಿ. ಇದಕ್ಕೆ ತೊಳೆದ ಅಕ್ಕಿ, 2 ಚಮಚದಷ್ಟು ತುಪ್ಪ, ಅರಿಶಿನ, ಹೆಚ್ಚಿದ ತರಕಾರಿಗಳು, ಸುಮಾರು 6 ಕಪ್ ನಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಮೂರು ವಿಸಿಲ್ ಆಗುವತನಕ ಬೇಯಿಸಿ.
ನಂತರ ಕುಕ್ಕರ್ ಮುಚ್ಚಳ ತೆರೆದು, ಬೆಂದ ಮಿಶ್ರಣಕ್ಕೆ ಹಾಲು, ಹೆಚ್ಚಿದ ಹಸಿಮೆಣಸು, ಜಜ್ಜಿಕೊಂಡ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಹೆಚ್ಚಿದ ಈರುಳ್ಳಿ, ಕರಿಬೇವು, ತೆಂಗಿನತುರಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಿ. 
ಪೊಂಗಲ್ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ, ಕುದಿ ಬರುವತನಕ ಬಿಸಿಮಾಡಿ ಇಳಿಸಿ.
ಕೊನೆಯಲ್ಲಿ ತುಪ್ಪ ಅಥವಾ ಎಣ್ಣೆಯಲ್ಲಿ ಗೋಡಂಬಿ, ಸಾಸಿವೆ, ಜೀರಿಗೆ, ಇಂಗಿನ ಒಗ್ಗರಣೆ ಮಾಡಿ ಸೇರಿಸಿ. 
ಬಿಸಿ ಇರುವಾಗಲೇ ಕರಿದ ಹಪ್ಪಳದೊಡನೆ ಸರ್ವ್ ಮಾಡಿ.


ಕಾಮೆಂಟ್‌ಗಳು