ಸಾಟೆ / Saate

Click here for English version.

ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರಿಗೆ ಯಾವುದು ಇಷ್ಟವೋ ಆ ಅಡಿಗೆಗಳನ್ನು ತಯಾರಿಸುವರೆಂದು ಒಂದು ಮಾತಿದೆ. ನಮ್ಮ ಮನೆಯಲ್ಲಂತೂ ಸಿಹಿತಿಂಡಿಗಳ ಮಟ್ಟಿಗೆ ಈ ಮಾತು ನಿಜ! ನನಗೆ ಸಿಹಿತಿಂಡಿಗಳೆಂದರೆ ಬಹಳ ಇಷ್ಟ. ಅದಕ್ಕೇ ಮನೆಯಲ್ಲಿ ಒಂದಲ್ಲಾ ಒಂದು ಸಿಹಿತಿಂಡಿ ಇದ್ದೇ ಇರುತ್ತದೆ. ಇಷ್ಟೇ ಅಲ್ಲ, ಯಾರದಾದರೂ ಅಡಿಗೆ ಬ್ಲಾಗ್ / ವೆಬ್ ಸೈಟ್ ಗೆ ಹೋದರೂ ನಾನು ಮೊದಲು ನೋಡುವುದು ಸಿಹಿತಿಂಡಿಗಳನ್ನೇ! ಸಿಹಿತಿಂಡಿಗಳನ್ನು ಚೆನ್ನಾಗಿ ಹಾಕಿದ್ದಾರೆಂದರೆ ಅವರ ಬ್ಲಾಗ್ ಇಷ್ಟವಾಯಿತೆಂದೇ ಅರ್ಥ!!  
'ಸಾಟೆ' ಎಂದರೆ ಉತ್ತರ ಕನ್ನಡದ ಸ್ಪೆಷಲ್ ಸಿಹಿತಿಂಡಿಗಳಲ್ಲಿ ಒಂದು. ನೋಡುವುದಕ್ಕೆ ಬಾದೂಷಾದಂತೆ ತೋರಿದರೂ ಇದರ ರುಚಿಯೇ ಬೇರೆ. ಬಾದೂಷಾ ಮೆತ್ತಗಿರುತ್ತದೆ, ಆದರೆ ಸಾಟೆ ಪದರು ಪದರಾಗಿ ಒಳತನಕವೂ ಗರಿಯಾಗಿರುತ್ತದೆ. ನೀವು ಉತ್ತರ ಕನ್ನಡ ಜಿಲ್ಲೆಗೆ ಹೋದರೆ ಸಾಮಾನ್ಯವಾಗಿ ಹೆಚ್ಚಿನ ಸ್ವೀಟ್ ಸ್ಟಾಲ್ ಗಳಲ್ಲಿ ಸಾಟೆ ಸಿಕ್ಕೇ ಸಿಗುತ್ತದೆ. ನಾನಂತೂ ಇಷ್ಟರೊಳಗೆ ಯಾರ ಬ್ಲಾಗ್ / ವೆಬ್ ಸೈಟ್ ನಲ್ಲೂ ಸಾಟೆ ಮಾಡುವ ವಿಧಾನವನ್ನು ಬರೆದಿದ್ದನ್ನು ನೋಡಿಲ್ಲ. ಹೀಗಾಗಿ ಸಾಟೆ ತಯಾರಿಸುವುದನ್ನು ಬರೆಯುತ್ತಿರುವವರಲ್ಲಿ ನಾನೇ ಮೊದಲಿಗಳೆನಿಸುತ್ತದೆ :) ನಾನು ಇದನ್ನು ನನ್ನ ಕಸಿನ್ ಒಬ್ಬರಿಂದ ಕಲಿತದ್ದು. 


ತಯಾರಿಸಲು ಬೇಕಾಗುವ ಸಮಯ: 2 ಘಂಟೆ 
ಈ ಅಳತೆಯಿಂದ ಸುಮಾರು 13 - 14 ಸಾಟೆಗಳನ್ನು ತಯಾರಿಸಬಹುದು.
  
ಬೇಕಾಗುವ ಸಾಮಗ್ರಿಗಳು:
2 ದೊಡ್ಡ ಲೋಟ ಮೈದಾ
ತುಪ್ಪ / ಡಾಲ್ಡಾ - 1/4 ಲೋಟ 
ಚಿಟಿಕೆ ಉಪ್ಪು 
2 ಲೋಟ ಸಕ್ಕರೆ
ಸ್ವಲ್ಪ ನೀರು
ಕರಿಯಲು ಎಣ್ಣೆ 
ಒಂದು ನೈಲಾನ್ ಬಟ್ಟೆ 

ಮಾಡುವ ವಿಧಾನ:
ಮೈದಾಹಿಟ್ಟಿಗೆ ಚಿಟಿಕೆ ಉಪ್ಪು ಮತ್ತು ತುಪ್ಪ / ಡಾಲ್ಡಾ ಸೇರಿಸಿ ಕಲಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ, ಮಿಶ್ರಣ ಬ್ರೆಡ್ ಕ್ರಂಬ್ಸ್ ನಂತಾದಾಗ ಅದಕ್ಕೆ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ. ಹಿಟ್ಟನ್ನು ತುಂಬ ಮೆತ್ತಗೆ ಕಲಸಬೇಡಿ.
ಕಲಸಿದ ಹಿಟ್ಟಿಗೆ ಒಂದು ಪ್ಲೇಟ್ ಮುಚ್ಚಿ, 10 ನಿಮಿಷ ನೆನೆಯಲು ಬಿಡಿ.
ನಂತರ ಹಿಟ್ಟಿನ ಮುದ್ದೆಯನ್ನು ಎರಡು ಭಾಗ ಮಾಡಿಕೊಳ್ಳಿ (ಬೇಕಿದ್ದರೆ ಎಲ್ಲ ಹಿಟ್ಟನ್ನೂ ಒಮ್ಮೆಲೇ ಬಳಸಬಹುದು).
ಒಂದು ಭಾಗ ಹಿಟ್ಟನ್ನು ತೆಗೆದುಕೊಂಡು ದೊಡ್ಡ ಚಪಾತಿಯಂತೆ ಲಟ್ಟಿಸಿ.


ಚಪಾತಿಯನ್ನು ಎರಡು ಮಡಿಕೆ ಮಡಿಚಿ, ತ್ರಿಕೋನದಂತೆ ಮಾಡಿ. ಅದನ್ನು ಪುನಃ ಚಪಾತಿಯಂತೆ ಲಟ್ಟಿಸಿ.


ಇದೇ ರೀತಿ 15 - 16 ಬಾರಿ ಮಡಿಚಿ ಲಟ್ಟಿಸಬೇಕು. ಹೀಗೆ ಮಾಡುವುದರಿಂದ ಸಾಟೆ ಚೆನ್ನಾಗಿ ಪದರು ಪದರಾಗುತ್ತದೆ.
ಕೊನೆಯಲ್ಲಿ ಇದನ್ನು 1 ಇಂಚು ದಪ್ಪಕ್ಕೆ ಲಟ್ಟಿಸಿಕೊಂಡು, ಚಿಕ್ಕ ವೃತ್ತಗಳಾಗಿ ಕತ್ತರಿಸಿಕೊಳ್ಳಿ.


ಕತ್ತರಿಸಿದ ನಂತರ ಉಳಿದ ಹಿಟ್ಟನ್ನು ಇನ್ನೊಂದು ಹಿಟ್ಟಿನ ಮುದ್ದೆಯೊಡನೆ ಸೇರಿಸಿಕೊಂಡು ಪುನಃ 15 - 16 ಬಾರಿ ಲಟ್ಟಿಸಿ, ವೃತ್ತಗಳಾಗಿ ಕತ್ತರಿಸಿ.
ಕತ್ತರಿಸಿದ ಸಾಟೆಗಳು ಉಬ್ಬದಂತೆ ಒಂದು ಫೋರ್ಕ್ ನಿಂದ ಚುಚ್ಚಿ.  ಹೀಗೆ ಮಾಡುವುದರಿಂದ ಸಾಟೆ ಒಳತನಕ ಬೇಯುವುದಕ್ಕೂ ಅನುಕೂಲವಾಗುತ್ತದೆ.
ಸಕ್ಕರೆಗೆ ಸ್ವಲ್ಪವೇ ನೀರು ಸೇರಿಸಿ ಕುದಿಸಿ, ಗಟ್ಟಿ ಪಾಕ ಮಾಡಿಕೊಳ್ಳಿ. ಇದನ್ನು ಹಾಗೇ ತಣ್ಣಗಾಗಲು ಬಿಟ್ಟರೆ ಅಲ್ಲೇ ಗಟ್ಟಿಯಾಗುವಂತೆ ಇರಲಿ.
ಬಾಣಲೆಯಲ್ಲಿ ಎಣ್ಣೆಯನ್ನು ಹದವಾಗಿ ಕಾಯಿಸಿಕೊಂಡು ಸಾಟೆಯನ್ನು ಕಡಿಮೆ ಉರಿಯಲ್ಲಿ ಸುಮಾರು 20 ನಿಮಿಷ ಅಥವಾ ಗರಿಗರಿಯಾಗುವತನಕ ಕರಿಯಿರಿ.
ಹೊಂಬಣ್ಣಕ್ಕೆ ಕರಿದ ಸಾಟೆಗಳನ್ನು ಒಂದು ಟಿಶ್ಯೂ ಪೇಪರ್ ಮೇಲೆ ಹಾಕಿ ತಣ್ಣಗಾಗಲು ಬಿಡಿ.
ತಣ್ಣಗಾದ ನಂತರ ಸಾಟೆಗಳನ್ನು ಒಂದು ನೈಲಾನ್ ಬಟ್ಟೆಯಮೇಲೆ ಜೋಡಿಸಿಕೊಳ್ಳಿ. 


ಸಕ್ಕರೆ ಪಾಕವನ್ನು ಸ್ವಲ್ಪ ಬಿಸಿಮಾಡಿ ಕರಗಿಸಿಕೊಂಡು, ಒಂದೊಂದು ಸಾಟೆಯಮೇಲೆ 3 ಚಮಚದಷ್ಟು ಸಕ್ಕರೆ ಪಾಕವನ್ನು ಹಾಕಿ.
ಸಕ್ಕರೆ ಪಾಕ ಗಟ್ಟಿಯಾದನಂತರ ಸಾಟೆಗಳನ್ನು ನಿಧಾನವಾಗಿ ಬಟ್ಟೆಯಿಂದ ಎತ್ತಿಕೊಳ್ಳಿ.
ಸಿದ್ಧವಾದ ಸಾಟೆಗಳನ್ನು ಒಂದು ಕಂಟೇನರ್ ಗೆ ಹಾಕಿಡಿ. ಇದನ್ನು ಸುಮಾರು 1 ವಾರದವರೆಗೂ ಇಟ್ಟುಕೊಂಡು ತಿನ್ನಬಹುದು.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)