ಝುಕಿನಿ ಪಾಯಸ / Zucchini Kheer (Payasam)

Click here for English version.

ಪಾಯಸವನ್ನು ಮುಖ್ಯವಾಗಿ ದೇವರ ನೈವೇದ್ಯಕ್ಕೆಂದು ತಯಾರಿಸುತ್ತಾರೆ. ಅಲ್ಲದೆ ಅರ್ಜೆಂಟ್ ಆಗಿ ಏನಾದರೂ ಸಿಹಿತಿಂಡಿ/ ಡೆಸರ್ಟ್ ತಯಾರಿಸಬೇಕೆಂದರೆ ಇದು ಅನುಕೂಲ. ಪಾಯಸ ತಯಾರಿಸಲು ಮುಖ್ಯವಾಗಿ ಹಾಲು ಮತ್ತು ಸಕ್ಕರೆ / ಬೆಲ್ಲ ಬೇಕು. ಇವುಗಳೊಡನೆ ಬೇರೆ ಬೇರೆ ಸಾಮಗ್ರಿಗಳನ್ನು ಸೇರಿಸಿ ಬಗೆಬಗೆಯ ಪಾಯಸಗಳನ್ನು ಮಾಡುತ್ತಾರೆ. ನಾನು ಬೆಂಗಳೂರಿನಲ್ಲಿದ್ದಾಗ 'ರಿಲಾಯನ್ಸ್ ಫ್ರೆಶ್' ಮಳಿಗೆಯಲ್ಲಿ ಯಾವಾಗಲೂ ಸಿಗುವ ಹಾಲುಗುಂಬಳ (ಸೋರೆಕಾಯಿ) ತಂದು ಆಗಾಗ್ಗೆ ಪಾಯಸ ಮಾಡುತ್ತಿದ್ದೆ. ಇಲ್ಲಿ ಆಸ್ಟ್ರೇಲಿಯಾಕ್ಕೆ ಬಂದನಂತರ ಒಮ್ಮೆ ಝುಕಿನಿಯ ಪಾಯಸ ಮಾಡಿನೋಡಿದೆ. ಈ ಪಾಯಸ ನಮಗೆ ಹಾಲುಗುಂಬಳದ ಪಾಯಸದಂತೆಯೇ ಅನಿಸಿತು. ಈಗ ಹಾಲುಗುಂಬಳ ಹುಡುಕುವ ಗೋಜಿಗೇ ಹೋಗದೆ, ಝುಕಿನಿಯ ಪಾಯಸ ಮಾಡುವುದೇ ಅಭ್ಯಾಸವಾಗಿಬಿಟ್ಟಿದೆ! 
ಈ ಪಾಯಸವನ್ನು ಫಟಾಫಟ್ ಎಂದು ತಯಾರಿಸಿಬಿಡಬಹುದು. ಮನೆಗೆ ಯಾರಾದರೂ ಬಂದರೆ ಅವರ ಜೊತೆ ಮಾತಾಡುತ್ತಲೇ ಆರಾಮಾಗಿ 20 - 25 ನಿಮಿಷದೊಳಗೆ ರುಚಿಯಾದ ಪಾಯಸ ರೆಡಿ! ಈ ಪಾಯಸ ತೆಳ್ಳೆವಿನೊಡನೆ ಹಾಕಿಕೊಳ್ಳಲೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಸರ್ವಿಂಗ್ಸ್ : 2 ಜನರಿಗೆ ಆಗುತ್ತದೆ.

ಬೇಕಾಗುವ ಸಾಮಗ್ರಿಗಳು:
ಝುಕಿನಿ - 1
ಹಾಲು - 1 1/2 ಕಪ್
ನೀರು - 1 1/2 ಕಪ್
ಸಕ್ಕರೆ - 1/2 ಕಪ್ 
ಸೂಜಿ ರವಾ - 3 ರಿಂದ 4 ಚಮಚ 
ಚಿಟಿಕೆ ಉಪ್ಪು
ಏಲಕ್ಕಿ - 2
ಲವಂಗ - 2
ಕೇಸರಿ ದಳಗಳು - ಬೇಕಿದ್ದರೆ

ಮಾಡುವ ವಿಧಾನ:
ಝುಕಿನಿಯ ಸಿಪ್ಪೆ ತೆಗೆದು ಮಧ್ಯಮ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.
ಹೆಚ್ಚಿದ ಝುಕಿನಿಗೆ ನೀರು ಸೇರಿಸಿ ಬೇಯಲಿಡಿ.
ಅರ್ಧ ಬೆಂದಾಗ ಇದಕ್ಕೆ ಚಿಟಿಕೆ ಉಪ್ಪು, ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಹಾಲು ಸೇರಿಸಿ.
ರವೆಯನ್ನು ನೀರಿನಲ್ಲಿ ತೊಳೆದುಕೊಂಡು, ಕುದಿಯುತ್ತಿರುವ ಪಾಯಸಕ್ಕೆ ಸೇರಿಸಿ ಗಂಟಾಗದಂತೆ ಕೈಯಾಡಿಸಿ. 
ಪಾಯಸವನ್ನು 6 - 7 ನಿಮಿಷ ಕುದಿಸಿ. ಕುದಿಸುವಾಗ ಬೇಕಿದ್ದರೆ ಕೇಸರಿ ದಳಗಳನ್ನು ಸೇರಿಸಿ.
ಏಲಕ್ಕಿ ಮತ್ತು ಲವಂಗವನ್ನು ಪುಡಿಮಾಡಿಕೊಳ್ಳಿ.
ಪಾಯಸವನ್ನು ಉರಿಯಿಂದ ಇಳಿಸುವ ಮುನ್ನ ಇದಕ್ಕೆ ಪುಡಿಮಾಡಿದ ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ.
ಈ ಪಾಯಸವನ್ನು ಬಿಸಿಯಾಗಿಯೂ ತಿನ್ನಬಹುದು ಇಲ್ಲವೇ ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರವೂ ಸವಿಯಬಹುದು. ಬೇಕಿದ್ದರೆ ಅಲಂಕಾರಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ.


ಟಿಪ್ಸ್:
  • ಇದೇ ರೀತಿ ಹಾಲುಗುಂಬಳ / ಸೋರೆಕಾಯಿಯಿಂದಲೂ ರುಚಿಯಾದ ಪಾಯಸ ತಯಾರಿಸಬಹುದು.
  • ಜಾಸ್ತಿ ರವೆ ಸೇರಿಸಿದಷ್ಟೂ ಪಾಯಸ ದಪ್ಪಗಾಗುತ್ತದೆ.
  • ಸಕ್ಕರೆಯ ಜೊತೆಗೆ ಒಂದೆರಡು ಚಮಚದಷ್ಟು ಬೆಲ್ಲ ಸೇರಿಸಿದರೆ ಪಾಯಸ ಇನ್ನೂ ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು