ಖಾರಾ ಬೂಂದಿ / Khara (Spicy) Boondi

Click here for English Version.

ಸುಮಾರು ದಿನಗಳ ಹಿಂದೆ ಅಂಗಡಿಯಿಂದ ತಂದಿದ್ದ ಬಿಸಿಬೇಳೆ ಭಾತ್ ಪುಡಿ ಉಪಯೋಗಿಸಿ ಬೇಜಾರು ಬಂದು, ಯಾವಾಗ ಖಾಲಿಯಾಗುವುದೋ ಎಂದು ಎದುರುನೋಡುತ್ತಿದ್ದೆ. ಅದು ಮುಗಿದ ನಂತರ ನೆಟ್ ನಲ್ಲಿ ಜಾಲಾಡಿ, ಕೊನೆಗೂ ಒಂದು ಒಳ್ಳೆಯ ಬಿಸಿಬೇಳೆ ಭಾತ್ ಪುಡಿ ರೆಸಿಪಿ ಸಿಕ್ಕಿತು. ಬಿಸಿಬೇಳೆ ಭಾತ್ ಜೊತೆಗೆ ಕಾಂಬಿನೇಶನ್ ಗೆ ಖಾರಾ ಬೂಂದಿ ಇದ್ದರೆ ಚೆನ್ನ; ಕಡಲೆಹಿಟ್ಟು ತಂದಿದ್ದು ಹಾಗೇ ಇದ್ದದ್ದು ನೆನಪಾಗಿ, ಈ ಬಾರಿ ಮನೆಯಲ್ಲೇ ಖಾರಾ ಬೂಂದಿ ತಯಾರಿಸಿದೆ. ಬೂಂದಿ ಬಹಳವೇ ಚೆನ್ನಾಗಿ ಬಂದಿದೆ. ಇನ್ನು ಮನೆಯಲ್ಲೇ ಬೂಂದಿ ತಯಾರಿಸಬಹುದೆಂದು ಅಂದುಕೊಳ್ಳುತ್ತಿದ್ದೇನೆ.
ಬೂಂದಿ ಲಡ್ಡು ತಯಾರಿಸುವ ಬೂಂದಿಗೂ, ಈ ಖಾರಾ ಬೂಂದಿಗೂ ಸ್ವಲ್ಪ ವ್ಯತ್ಯಾಸವಿದೆ. ಬೂಂದಿ ಲಡ್ಡು ಮಾಡಲು ಮೆತ್ತಗಿನ ಬೂಂದಿ ಬೇಕು. ಆದರೆ ಖಾರಾ ಬೂಂದಿ ತಯಾರಿಸಲು ಗರಿಯಾದ ಬೂಂದಿ ಬೇಕು. ಖಾರಾ ಬೂಂದಿ ತಯಾರಿಸಲು ಸುಲಭದ ವಿಧಾನ ಇಲ್ಲಿದೆ, ನೋಡಿ..


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು - 3 ಕಪ್
ಅಕ್ಕಿಹಿಟ್ಟು - 3 ಚಮಚ
ನೀರು - 1 1/2 ಕಪ್
ನೆಲಗಡಲೆ - 3/4 ಕಪ್     
ಕರಿಬೇವು - ಸ್ವಲ್ಪ
ಉಪ್ಪು
ಮೆಣಸಿನ ಪುಡಿ - ಖಾರಕ್ಕೆ ತಕ್ಕಂತೆ  
ಕರಿಯಲು ಎಣ್ಣೆ
ಬೂಂದಿ ಜಾಲರಿ 


ಮಾಡುವ ವಿಧಾನ:
ಕಡಲೆಹಿಟ್ಟು, ಅಕ್ಕಿಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತ, ಗಂಟಾಗದಂತೆ ಕಲಸಿ.
ಹಿಟ್ಟಿನ ಮಿಶ್ರಣಕ್ಕೆ 3 - 4 ಚಮಚ ಎಣ್ಣೆ (ಬಿಸಿ ಮಾಡುವುದು ಬೇಡ) ಸೇರಿಸಿ ಕಲಸಿ. ಇದರಿಂದ ಹಿಟ್ಟು ಸರಾಗವಾಗಿ ಬೀಳಲು ಅನುಕೂಲವಾಗುತ್ತದೆ. ಇದು ವಾಹ್ ಛೆಫ್ ರವರ ಟಿಪ್!
ಹಿಟ್ಟನ್ನು ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಕಲಸಿಕೊಳ್ಳಿ. ಹಿಟ್ಟು ಬೂಂದಿ ಜಾಲರಿಯಿಂದ ಹನಿಗಳಾಗಿ ಕೆಳಗೆ ಬೀಳುವಂತೆ ಇರಬೇಕು.
ಒಂದು ಅಗಲವಾದ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು, ಜಾಲರಿಯ ಮೂಲಕ ಹಿಟ್ಟನ್ನು ಹನಿಹನಿಯಾಗಿ ಬಾಣಲಿಗೆ ಬೀಳುವಂತೆ ಮಾಡಿ.
ಬೂಂದಿ ಹೊಂಬಣ್ಣಕ್ಕೆ ಬರುವತನಕ ಕರಿದು ತೆಗೆಯಿರಿ.
ಎಲ್ಲ ಹಿಟ್ಟನ್ನೂ ಹೀಗೇ ಕರಿದು, ಬೂಂದಿ ತಯಾರಿಸಿಕೊಳ್ಳಿ.
ನಂತರ ಅದೇ ಬಾಣಲೆಯಲ್ಲಿ ಕರಿಬೇವು ಮತ್ತು ನೆಲಗಡಲೆಯನ್ನೂ ಪ್ರತ್ಯೇಕವಾಗಿ ಕರಿದುಕೊಳ್ಳಿ.
ಬೂಂದಿಗೆ ಕರಿಬೇವು, ನೆಲಗಡಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಖಾರಾ ಬೂಂದಿ ಸಿದ್ಧ. 
ಇದನ್ನು ಹಾಗೇ ಸ್ನ್ಯಾಕ್ಸ್ ನಂತೆ ತಿನ್ನಬಹುದು, ಮಿಕ್ಷ್ಚರ್ ತಯಾರಿಸಬಹುದು, ಅಥವಾ ಬಿಸಿಬೇಳೆ ಭಾತ್ ನೊಡನೆ ಹಾಕಿಕೊಳ್ಳಬಹುದು. ಊಟಕ್ಕೆ ಹಾಕಿಕೊಳ್ಳಲೂ ಇದು ಚೆನ್ನಾಗಿರುತ್ತದೆ.


ಟಿಪ್ಸ್:
  • ಬೂಂದಿಯ ಕಾಳುಗಳು ಚಪ್ಪಟೆಯಾಗಿ ಬೀಳುತ್ತಿದ್ದರೆ ಮಿಶ್ರಣಕ್ಕೆ ನೀರು ಹೆಚ್ಚಾಗಿದೆಯೆಂದರ್ಥ. ಆಗ ಒಂದೆರಡು ಚಮಚ ಕಡಲೆಹಿಟ್ಟು ಸೇರಿಸಿ ಕಲಸಿಕೊಂಡರೆ ಸರಿಹೋಗುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)