ಸೆವೆನ್ ಕಪ್ ಬರ್ಫಿ (ಹಲ್ವಾ) / Seven Cup Burfi

Click here for English version. 
 
ಸೆವೆನ್ ಕಪ್ ಬರ್ಫಿ ಮಾಡಲು ಸಾಮಾನ್ಯವಾಗಿ ಕಡಲೆಹಿಟ್ಟನ್ನು ಬಳಸುತ್ತಾರೆ. ಕಡಲೆಹಿಟ್ಟಿನ ಬದಲು ಸೂಜಿ ರವೆಯನ್ನು ಬಳಸಿಯೂ ಇದನ್ನು ತಯಾರಿಸಬಹುದು. ನನ್ನ ಚಿಕ್ಕಮ್ಮ ಈ ಬರ್ಫಿಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಒಟ್ಟೂ 7 ಕಪ್ ನಷ್ಟು ಸಾಮಗ್ರಿಗಳನ್ನು ಬಳಸುವುದರಿಂದ ಈ ಬರ್ಫಿಗೆ ಸೆವೆನ್ ಕಪ್ ಬರ್ಫಿ ಎಂದು ಹೆಸರು. ಆದರೆ ನಾನು ಇಲ್ಲಿ ಸಕ್ಕರೆಯನ್ನು ಅರ್ಧ ಕಪ್ ನಷ್ಟು ಕಡಿಮೆ ಬಳಸಿದ್ದೇನೆ. ಪೂರ್ತಿ ಮೂರು ಕಪ್ ಸಕ್ಕರೆ ಸೇರಿಸಿದರೆ ಸಿಹಿ ತುಂಬ ಹೆಚ್ಚಾದಂತೆ ಅನ್ನಿಸುತ್ತದೆ. ಅದಕ್ಕೇ ಈ ಚಿಕ್ಕ ಬದಲಾವಣೆ.


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು 
ಈ ಅಳತೆಯಿಂದ ಸುಮಾರು 25 ಬರ್ಫಿಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಸೂಜಿ ರವಾ - 1 ಕಪ್ 
ತುಪ್ಪ - 1 ಕಪ್ 
ತೆಂಗಿನತುರಿ - 1 ಕಪ್  
ಹಾಲು - 1 ಕಪ್
ಸಕ್ಕರೆ - 2 1/2 ಕಪ್   

ಮಾಡುವ ವಿಧಾನ:
ಬಾಣಲೆ ಕಾಯಲಿಟ್ಟು ಸೂಜಿ ರವೆ ಮತ್ತು ತುಪ್ಪ ಸೇರಿಸಿ 4 - 5 ನಿಮಿಷ ಹುರಿದುಕೊಳ್ಳಿ.
ನಂತರ ಇದಕ್ಕೆ ಹಾಲು, ಸಕ್ಕರೆ ಮತ್ತು ತೆಂಗಿನತುರಿಯನ್ನು ಸೇರಿಸಿ. ಮಿಶ್ರಣವನ್ನು ಹದವಾದ ಉರಿಯಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತಿರಿ.
ಬರ್ಫಿ ಮಿಶ್ರಣ ಸುರಿಯಲು ಒಂದು ಪ್ಲೇಟ್ ಗೆ ತುಪ್ಪ ಸವರಿ ಇಟ್ಟಿರಿ.
ಸ್ವಲ್ಪ ಸಮಯದ ನಂತರ ನೀರಿನಂಶವೆಲ್ಲ ಕಡಿಮೆಯಾಗಿ, ಬರ್ಫಿಯ ಮಿಶ್ರಣ ತಳ ಬಿಟ್ಟು ಮುದ್ದೆಯಂತಾಗತೊಡಗುತ್ತದೆ. ಈ ಹಂತಕ್ಕೆ ಬಂದರೆ ಬರ್ಫಿ ಮುಕ್ಕಾಲು ಭಾಗ ಆದಂತೆ.
ಕೆಲವೇ ನಿಮಿಷಗಳಲ್ಲಿ ಇದು ಸ್ವಲ್ಪ ಗುಳ್ಳೆಗಳಾಗಿ ಉಬ್ಬಿ ಬರತೊಡಗುತ್ತದೆ. ತಕ್ಷಣವೇ ಮಿಶ್ರಣವನ್ನು ಉರಿಯಿಂದ ಇಳಿಸಿ, ಜಿಡ್ಡು ಸವರಿದ ಬಟ್ಟಲಿಗೆ ಸುರಿಯಿರಿ.
ಇದನ್ನು ಲಟ್ಟಣಿಗೆಯ ಸಹಾಯದಿಂದ ಪ್ಲೇಟ್ ನಲ್ಲಿ ಸಮನಾಗಿ ಹರವಿ.
ಸ್ವಲ್ಪ ಬಿಸಿಯಿರುವಾಗಲೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ತಣ್ಣಗಾದ ನಂತರ ಎತ್ತಿಟ್ಟುಕೊಳ್ಳಿ.
ತುಪ್ಪದ ಪರಿಮಳದೊಂದಿಗೆ ಈ ಹಲ್ವಾ ತಿನ್ನಲು ಬಹಳ ರುಚಿ.


ಟಿಪ್ಸ್:
  • ಬರ್ಫಿ ಮಿಶ್ರಣ ಪಾತ್ರೆಯ ತಳಕ್ಕೆ ಹಿಡಿಯತೊಡಗಿದರೆ ತಕ್ಷಣವೇ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿಕೊಂಡು ಬಿಸಿಗಿಡಿ. 
  • ಬರ್ಫಿ ತಯಾರಿಸಲು ಒಳ್ಳೆಯ ತುಪ್ಪವನ್ನೇ ಬಳಸಿ. 
  • ಕೇಸರಿ ದಳಗಳನ್ನು ಸೇರಿಸಿದರೆ ಈ ಬರ್ಫಿ ಇನ್ನೂ ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು

  1. As far as I know, seven cup is made with kaDale hittu!! It is interesting to see you are making it with sooji.

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ ವಾಣಿ ಅವರೇ
    ನಾನು ಸಹ ಕನ್ನಡದಲ್ಲಿ ಹೊಸದಾಗಿ ಬ್ಲಾಗ್ ಶುರು ಮಾಡಿದ್ಧೇನೆ.http://dailyrecipesofmykitchen.blogspot.in/
    ನನಗು ಸಹ ನಿಮ್ಮಂತೆ ಇಂಗ್ಲಿಷ್ನಲ್ಲಿ ಸಹ ಬ್ಲಾಗ್ ಹಾಕುವ ಯೋಚನೆ ಬಂತು.ಆದರೆ ನನಗೆ ನಿಮ್ಮಂತೆ ಲಿಂಕ್ ಕೊಡುವುದು ಹೇಗೆಂದು ತಿಳಿಯಲಿಲ್ಲ.ದಯವಿಟ್ಟು ನಿಮ್ಮದೇ ಸಮಯ ತೆಗೆದುಕೊಂಡು ನೀವು ಮೇಲೆ ಹಾಕಿದ Home,Recipe index,English version,favorite blogs,about me ಹೇಗೆ ಮಾಡಿದಿರಿ ಎಂದು ಸರಳವಾಗಿ ತಿಳಿಸುತ್ತಿರಾ?
    ಅಬಿನಂದನೆಗಳು ಹಾಗೂ ಮುಂಚಿತವಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ವಾಣಿಯವರೇ,
    ಬಹುಶ ನೀವಿನ್ನೂ ಮೇಲಿನ ಕಾಮೆಂಟ್ ನೋಡಿರಲಿಕ್ಕಿಲ್ಲ.ನನ್ನ ಸಮಸ್ಯೆಯನ್ನು ನನ್ನ ಮಗ ಬಗೆಹರಿಸಿದ.ಹೇಗೂ ಊರಲ್ಲಿ ಸ್ವಲ್ಪ ಸಮಯ ಇರುವವರಿದ್ದಿರಿ ಅಮ್ಮ ಅಜ್ಜಿ ಇತರರಿಂದ ಹಳೆಯ ಮರೆತು ಹೋಗಿರ ಬಹುದಾದ ಖಾದ್ಯ ಗಳನ್ನೂ ನೋಟ್ ಮಾಡಿಕೊಂಡು ಬನ್ನಿ.ನಿಮ್ಮ ರೆಸಿಪಿ ಚೆನ್ನಾಗಿ ಬರುತ್ತಿದೆ.ಅನುಕೂಲವಾದಾಗಲೆಲ್ಲ ಬರೆಯುತ್ತಿರಿ.

    ಪ್ರತ್ಯುತ್ತರಅಳಿಸಿ
  4. ಗೀತಾರವರೆ,

    ತಡವಾಗಿ ರಿಪ್ಲೈ ಮಾಡಿದ್ದಕ್ಕೆ ಕ್ಷಮೆ ಇರಲಿ. ಅಂತೂ ನಿಮ್ಮ ಸಮಸ್ಯೆ ಬಗೆ ಹರಿದದ್ದು ಸಂತೋಷ :)
    ನಿಮ್ಮ ಕನ್ನಡ ಬ್ಲಾಗ್ ನೋಡಿ ತುಂಬ ಖುಷಿಯಾಯಿತು. ಹೀಗೇ ಒಳ್ಳೊಳ್ಳೆಯ ಅಡಿಗೆಗಳನ್ನು ಹಾಕುತ್ತಿರಿ.

    ಪ್ರೀತಿಯಿಂದ,
    ವಾಣಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)