ಸ್ಟಫ್ಡ್ ಕ್ಯಾಪ್ಸಿಕಂ / Stuffed Capsicum

Click here for English version.

ಕ್ಯಾಪ್ಸಿಕಂ ಬಳಸಿ ಯಾವ ಅಡಿಗೆ - ತಿಂಡಿಗಳನ್ನು ತಯಾರಿಸಿದರೂ ಅದು ತುಂಬಾ ರುಚಿಯಾಗಿರುತ್ತದೆ. ಸ್ಟಫ್ಡ್ ಕ್ಯಾಪ್ಸಿಕಂ ಅಂತೂ.. ಹೆಸರು ಕೇಳಿದರೇ ಬಾಯಲ್ಲಿ ನೀರೂರುತ್ತದೆ! ಕ್ಯಾಪ್ಸಿಕಂ ಸ್ಟಫಿಂಗ್ ಗೆ ಬೇಯಿಸಿದ ಆಲೂಗಡ್ಡೆ, ಕಡಲೆಹಿಟ್ಟು, ಬ್ರೆಡ್ ಇತ್ಯಾದಿ ವಿವಿಧ ಸಾಮಗ್ರಿಗಳನ್ನು ಬಳಸುತ್ತಾರೆ. ನಮ್ಮ ಮನೆಯಲ್ಲಿ ಸ್ಟಫಿಂಗ್ ಗೆ ಕಡಲೆಬೇಳೆ ಮತ್ತು ಮಸಾಲೆ ಸಾಮಗ್ರಿಗಳನ್ನು ಹುರಿದು ಪುಡಿಮಾಡಿ ಬಳಸುತ್ತಾರೆ. ಇದು ಊಟಕ್ಕೂ ಚೆನ್ನಾಗಿರುತ್ತದೆ, ಚಪಾತಿಯೊಡನೆ ಹಾಕಿಕೊಳ್ಳಲೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಸರ್ವಿಂಗ್ಸ್: 2

ಬೇಕಾಗುವ ಸಾಮಗ್ರಿಗಳು:
ಮಧ್ಯಮಗಾತ್ರದ ಕ್ಯಾಪ್ಸಿಕಂ - 2
ಕಡಲೆಬೇಳೆ - 4 ಟೇಬಲ್ ಸ್ಪೂನ್
ಒಣಮೆಣಸು - 4 (ಖಾರಕ್ಕೆ ತಕ್ಕಂತೆ)
ಲವಂಗ - 3
1 ಚೂರು ಚಕ್ಕೆ
ಕೊತ್ತಂಬರಿ - 1 1/2 ಟೇಬಲ್ ಸ್ಪೂನ್
ಜೀರಿಗೆ - 1/4 ಟೇಬಲ್ ಸ್ಪೂನ್
ಸಾಸಿವೆ - 1/4 ಟೇಬಲ್ ಸ್ಪೂನ್
ಚಿಟಿಕೆ ಇಂಗು
ಚಿಟಿಕೆ ಅರಿಶಿನ
2 ರಿಂದ 3 ಸೌಟು ಎಣ್ಣೆ
ಉಪ್ಪು
ಆಮ್ ಚೂರ್ ಪೌಡರ್

ಮಾಡುವ ವಿಧಾನ:
ಮೊದಲು ಮಸಾಲೆ ಸಾಮಗ್ರಿಗಳೆಲ್ಲವನ್ನೂ ಎಣ್ಣೆ ಹಾಕದೆ ಹುರಿದು, ತರಿಯಾಗಿ ಪುಡಿಮಾಡಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ.
ಕ್ಯಾಪ್ಸಿಕಂ ನ ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆದು, ಒಳಗೆ ಬೀಜವೇನಾದರೂ ಇದ್ದರೆ ತೆಗೆದುಬಿಡಿ.


ಕ್ಯಾಪ್ಸಿಕಂ ಗೆ ಮಸಾಲಾ ಪುಡಿ ತುಂಬಿಸಿ, ತೊಟ್ಟನ್ನು ಪುನಃ ಮೊದಲಿದ್ದಂತೆಯೇ ಹಾಕಿ.
ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು, ಎಣ್ಣೆ ಸ್ವಲ್ಪ ಕಾದಾಗ ಮಸಾಲಾ ತುಂಬಿದ ಕ್ಯಾಪ್ಸಿಕಂ ಗಳನ್ನು ಎಣ್ಣೆಯಲ್ಲಿ ಬೇಯಲಿಟ್ಟು ಮುಚ್ಚಳ ಮುಚ್ಚಿ.
ಕ್ಯಾಪ್ಸಿಕಂ ನ ತೊಟ್ಟಿನ ಬಳಿಯೂ ಸ್ವಲ್ಪ ಎಣ್ಣೆ ಸುರಿದು, ಎಣ್ಣೆ ಒಳಗೆ ಹೋಗುವಂತೆ ಮಾಡಿ. ಇದರಿಂದ ಒಳಗಿರುವ ಮಸಾಲೆ ಚೆನ್ನಾಗಿ ಬೇಯುತ್ತದೆ.
ಆಗಾಗ್ಗೆ ಮುಚ್ಚಳ ಸರಿಸಿ ಕ್ಯಾಪ್ಸಿಕಂ ನ್ನು ತಿರುವಿ, ಎಲ್ಲ ಕಡೆ ಬೇಯುವಂತೆ ಮಾಡಿ. ಮುಚ್ಚಳ ತೆರೆಯುವಾಗ ತುಂಬಾ ಹುಷಾರಾಗಿರಿ, ಏಕೆಂದರೆ ಕ್ಯಾಪ್ಸಿಕಂ ನಲ್ಲಿರುವ ನೀರಿನಂಶ ಹೊರಬಂದು ಎಣ್ಣೆಯೊಡನೆ ಸೇರಿ ಸಿಡಿಯುತ್ತಿರುತ್ತದೆ.
ಕ್ಯಾಪ್ಸಿಕಂ ಚೆನ್ನಾಗಿ ಬೆಂದ ನಂತರ ಎಣ್ಣೆಯಿಂದ ಎತ್ತಿಬಿಡಿ. ಇದನ್ನು ಚಪಾತಿ ಅಥವಾ ಅನ್ನದೊಡನೆ ಸರ್ವ್ ಮಾಡಿ.


ಟಿಪ್ಸ್:
  • ಸ್ಟಫ್ಡ್ ಕ್ಯಾಪ್ಸಿಕಂ ತಯಾರಿಸಲು ಮಧ್ಯಮಗಾತ್ರದ ಅಥವಾ ಚಿಕ್ಕ ಕ್ಯಾಪ್ಸಿಕಂ ಬಳಸಿದರೆ ಬೇಯಿಸುವುದು ಸುಲಭ.

ಕಾಮೆಂಟ್‌ಗಳು