Here are some recipes which I came across through the net, books, so on and few are my own experiments..

Monday, 24 October 2011

ವೆಜಿಟೆಬಲ್ ಸ್ಪ್ರಿಂಗ್ ರೋಲ್ಸ್ / Vegetable Spring Rolls

Click here for English version.

ಸ್ಪ್ರಿಂಗ್ ರೋಲ್ ಎಂದರೆ ಒಳಗಡೆ ಸ್ಟಫಿಂಗ್ ತುಂಬಿ ಸುರುಳಿ ಮಾಡಿರುವ ತೆಳ್ಳಗಿನ ರೊಟ್ಟಿ. ಸ್ಟಫಿಂಗ್ ಗೆ ಬೇರೆ ಬೇರೆ ವಿಧದ ಸಾಮಗ್ರಿಗಳನ್ನು ಬಳಸುತ್ತಾರೆ. ಸ್ಪ್ರಿಂಗ್ ರೋಲ್ ಗೆ ಬಳಸುವ ತೆಳ್ಳಗಿನ ರೊಟ್ಟಿಯಂತಹ ಶೀಟ್ (ಸ್ಪ್ರಿಂಗ್ ರೋಲ್ ಶೀಟ್)ಗಳು ಸುಪರ್ ಮಾರ್ಕೆಟ್ ಗಳಲ್ಲಿ ಸಾಮಾನ್ಯವಾಗಿ ಸಿಗುತ್ತವೆ. ಈ ಶೀಟ್ ಗಳನ್ನು ಮನೆಯಲ್ಲೇ ಬೇಕಿದ್ದರೂ ತಯಾರಿಸಬಹುದು. ಸ್ಪ್ರಿಂಗ್ ರೋಲ್ ಒಂದು ಚೈನೀಸ್ ಫುಡ್. ವಿಕಿಪೀಡಿಯದಲ್ಲಿ ಹೇಳುವಂತೆ, ಚೀನಾ ದೇಶದಲ್ಲಿ ಸ್ಪ್ರಿಂಗ್ ಹಬ್ಬದ ಸಮಯದಲ್ಲಿ ಈ ತಿಂಡಿಯನ್ನು ತಿನ್ನುತ್ತಾರಂತೆ. ಹೀಗಾಗಿ ಇದಕ್ಕೆ ಸ್ಪ್ರಿಂಗ್ ರೋಲ್ ಎಂದು ಹೆಸರು!


ತಯಾರಿಸಲು ಬೇಕಾಗುವ ಸಮಯ: 1 1/4 ಘಂಟೆ 
ಇಲ್ಲಿ ಹೇಳಿರುವ ಅಳತೆಯಿಂದ 8 ಸ್ಪ್ರಿಂಗ್ ರೋಲ್ ಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
1 ) ಸ್ಪ್ರಿಂಗ್ ರೋಲ್ ಶೀಟ್ ಗೆ : (ಅಂಗಡಿಯಿಂದ ತಂದ ಶೀಟ್ ನ್ನೂ ಬಳಸಬಹುದು)
     ಮೈದಾಹಿಟ್ಟು - 1 ಕಪ್
     ಚಿಟಿಕೆ ಉಪ್ಪು 
     ಸ್ವಲ್ಪ ನೀರು 

2 ) ಸ್ಟಫಿಂಗ್ ಗೆ :
     ತೆಳ್ಳಗೆ ಉದ್ದವಾಗಿ ಹೆಚ್ಚಿದ ಈರುಳ್ಳಿ - 1 ಕಪ್
     ತುರಿದ ಕ್ಯಾರೆಟ್ - 1 ಕಪ್
     ತುರಿದ ಕ್ಯಾಪ್ಸಿಕಂ - 1 ಕಪ್
     ಸಣ್ಣಗೆ, ಉದ್ದಕ್ಕೆ ಹೆಚ್ಚಿದ ಕ್ಯಾಬೇಜ್ - 1 ಕಪ್
     ಸೋಯಾ ಸಾಸ್ - 1 ಚಮಚ
     ಟೊಮೆಟೋ ಸಾಸ್ - 1 ಚಮಚ
     ಮೆಣಸಿನ ಪುಡಿ - ರುಚಿಗೆ ತಕ್ಕಷ್ಟು
     ರುಚಿಗೆ ತಕ್ಕಷ್ಟು ಉಪ್ಪು 

3 ) ಇತರ ಸಾಮಗ್ರಿಗಳು:
     ಕರಿಯಲು ಎಣ್ಣೆ
     1 ಚಮಚ ಮೈದಾಹಿಟ್ಟು 
     ಸ್ವಲ್ಪ ನೀರು 
 
ಮಾಡುವ ವಿಧಾನ:        
1 ) ಸ್ಪ್ರಿಂಗ್ ರೋಲ್ ಶೀಟ್ :
ಮೈದಾಹಿಟ್ಟಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಕಲಸಿಕೊಳ್ಳಿ.    ಕಲಸಿದ ಹಿಟ್ಟಿಗೆ ಒಂದು ಪ್ಲೇಟ್ ಮುಚ್ಚಿ 10 ನಿಮಿಷ ನೆನೆಯಲು ಬಿಡಿ.
ಹಿಟ್ಟಿನಿಂದ ಒಂದೇ ಗಾತ್ರದ 8 ಉಂಡೆಗಳನ್ನು ಮಾಡಿಕೊಂಡು ಪೇಪರ್ ನಷ್ಟು ತೆಳ್ಳಗಿನ ರೊಟ್ಟಿಗಳನ್ನು ಲಟ್ಟಿಸಿ. ಲಟ್ಟಿಸುವಾಗ ಒಣ ಹಿಟ್ಟನ್ನು ಧಾರಾಳವಾಗಿ ಬಳಸಿ.
ಶೀಟ್ ನ ಆಕಾರ ಚೆನ್ನಾಗಿ ಬರದಿದ್ದರೂ ಪರವಾಗಿಲ್ಲ, ಏಕೆಂದರೆ ಸುರುಳಿ ಮಾಡಿದನಂತರ ಅದು ಗೊತ್ತಾಗುವುದಿಲ್ಲ ;) ಬೇಕಿದ್ದರೆ ಅಂಚುಗಳನ್ನು ಕಟ್ ಮಾಡಿ ಒಳ್ಳೆಯ ಆಕಾರ ಕೊಡಬಹುದು.

2 ) ಸ್ಟಫಿಂಗ್: 
ತುರಿದ ತರಕಾರಿಗಳಲ್ಲಿ ಹೆಚ್ಚಿನ ನೀರಿನಂಶವಿದ್ದರೆ ಹಿಂಡಿ ತೆಗೆದುಬಿಡಿ.
ಬಾಣಲೆಯಲ್ಲಿ 2 - 3 ಚಮಚ ಎಣ್ಣೆ ಕಾಯಿಸಿ. ಎಣ್ಣೆ ಚೆನ್ನಾಗಿ ಕಾದನಂತರ ಅದಕ್ಕೆ ಈರುಳ್ಳಿ ಸೇರಿಸಿ ಸ್ವಲ್ಪ ಹುರಿಯಿರಿ.
ನಂತರ ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಉಪ್ಪು ಸೇರಿಸಿ ಕೈಯಾಡಿಸುತ್ತಿರಿ.
ತರಕಾರಿಗಳು ಗರಿಯಾಗಿ ಬೆಂದಂತಾದಾಗ ಹೆಚ್ಚಿದ ಕ್ಯಾಬೇಜ್ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
ನಂತರ ಇದಕ್ಕೆ ಮೆಣಸಿನ ಪುಡಿ, ಟೊಮೆಟೋ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ 2 - 3 ನಿಮಿಷ ಕೈಯಾಡಿಸಿ ಇಳಿಸಿ. ನೀರಿನಂಶ ಕಡಿಮೆ ಇದ್ದಷ್ಟೂ ಒಳ್ಳೆಯದು.ಒಂದು ಚಮಚದಷ್ಟು ಮೈದಾಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ದಪ್ಪಗೆ ಪೇಸ್ಟ್ ನಂತೆ ಮಾಡಿಕೊಳ್ಳಿ.
ವೆಜ್ ರೋಲ್ ಶೀಟ್ ತೆಗೆದುಕೊಂಡು ಅದರ ಒಂದು ಅಂಚಿನಲ್ಲಿ 2 ಟೇಬಲ್ ಸ್ಪೂನ್ ನಷ್ಟು ಸ್ಟಫಿಂಗ್ ಮಿಶ್ರಣ ಹಾಕಿ.
ಸ್ಟಫಿಂಗ್ ಒಳಗೆ ಬರುವಂತೆ ಶೀಟ್ ನ್ನು ಅರ್ಧದವರೆಗೆ ಸುರುಳಿ ಸುತ್ತಿ. ಸುರುಳಿಯ ಪಕ್ಕದ ಎರಡೂ ಅಂಚುಗಳನ್ನು ಒಳಗೆ ಬರುವಂತೆ ಮಡಿಚಿ ಪ್ರೆಸ್ ಮಾಡಿ.
ನಂತರ ಅಂಚುಗಳಿಗೆ ಮೈದಾ ಪೇಸ್ಟ್ ಸವರಿಕೊಂಡು, ಪೂರ್ತಿ ಸುರುಳಿ ಸುತ್ತಿ. ಅಂಚುಗಳನ್ನು ಸರಿಯಾಗಿ ಕೂರಿಸಿ.
ಎಣ್ಣೆಯನ್ನು ಹದವಾಗಿ ಕಾಯಿಸಿಕೊಂಡು ಸ್ಪ್ರಿಂಗ್ ರೋಲ್ ಗಳನ್ನು ಮುಕ್ಕಾಲು ಭಾಗ ಕರಿದು ಎಣ್ಣೆಯಿಂದ ತೆಗೆಯಿರಿ. ತಣ್ಣಗಾದ ನಂತರ ಪುನಃ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿಯಿರಿ. ಹೀಗೆ ಮಾಡುವುದರಿಂದ ಸ್ಪ್ರಿಂಗ್ ರೋಲ್ ಗರಿಯಾಗುವುದಲ್ಲದೆ ಒಳ್ಳೆಯ ಬಣ್ಣವೂ ಬರುತ್ತದೆ.
ಕರಿದ ಸ್ಪ್ರಿಂಗ್ ರೋಲ್ ಗಳನ್ನು ಒಂದು ಟಿಶ್ಯೂ ಪೇಪರ್ ಮೇಲೆ ಹಾಕಿ ಎಣ್ಣೆ ಹೀರುವಂತೆ ಮಾಡಿ.
ಬಿಸಿಯಿರುವಾಗಲೇ ಟೊಮೆಟೋ ಸಾಸ್ ಜೊತೆ ತಿನ್ನಿ.


No comments:

Post a comment

Hi, Thanks for dropping in. I will be happy to hear your feedback :)

Related Posts Plugin for WordPress, Blogger...