ಎಗ್ ಲೆಸ್ ಬರ್ತ್ ಡೇ ಕೇಕ್ / Eggless Birthday Cake

Click here for English version.

ಕಳೆದ ತಿಂಗಳು ನಮ್ಮವರ ಬರ್ತ್ ಡೇಗೆ ತಯಾರಿಸಿದ ಕೇಕ್ ಇದು. ಮೊದಲು ಅನೇಕ ಬಾರಿ ಇಂಥ ಕೇಕ್ ತಯಾರಿಸಿದ್ದರೂ ಡೆಕೋರೇಷನ್ ಮಾಡಿರಲಿಲ್ಲ. ಈ ಕೇಕ್ ತಯಾರಿಸುವ ವಿಧಾನ ಈಗಾಗಲೇ ಅನೇಕ ಬ್ಲಾಗ್ ಗಳಲ್ಲಿದೆ. ನಾನು ಅದೇ ವಿಧಾನದಲ್ಲಿ ಎರಡು ಕೇಕ್ ಗಳನ್ನು ತಯಾರಿಸಿಕೊಂಡು ಮನೆಯಲ್ಲೇ ತಯಾರಿಸಿದ ಐಸಿಂಗ್ ಬಳಸಿ ಎರಡು ಲೇಯರ್ ನ ಕೇಕ್ ಮಾಡಿದೆ. ಈ ಕೇಕ್ ನ ಸ್ಪೆಶಾಲಿಟಿ ಏನೆಂದರೆ ಇದನ್ನು ತಯಾರಿಸಲು ಬೆಣ್ಣೆ ಬೇಕಿಲ್ಲ; ಕುಕಿಂಗ್ ಆಯಿಲ್ ಮತ್ತು ಮೊಸರು ಇದ್ದರೆ ಸಾಕು!
ಕೇಕ್ ಗೆ ಡೆಕೋರೇಷನ್ ಮಾಡಲು ಸಹಕರಿಸಿದ್ದಕ್ಕೆ ಹಾರ್ಟಿ ಥ್ಯಾಂಕ್ಸ್ ಟು ಉಷಾ! :) 


ತಯಾರಿಸಲು ಬೇಕಾಗುವ ಸಮಯ: 2 ಘಂಟೆ

ಬೇಕಾಗುವ ಸಾಮಗ್ರಿಗಳು: (1 ಕೇಕ್ ಗೆ)
ಮೈದಾಹಿಟ್ಟು - 1 1/2 ಕಪ್ 
ಸಕ್ಕರೆ - 3/4 ಕಪ್
ಬೇಕಿಂಗ್ ಪೌಡರ್ - 1 1/4 ಟೇಬಲ್ ಸ್ಪೂನ್ 
ಅಡಿಗೆ ಸೋಡಾ - 1/2 ಟೇಬಲ್ ಸ್ಪೂನ್
ಚಿಟಿಕೆ ಉಪ್ಪು 
ಗಟ್ಟಿ ಮೊಸರು - 1 ಕಪ್
ಕುಕಿಂಗ್ ಆಯಿಲ್ - 1/2 ಕಪ್
ವೆನಿಲ್ಲಾ ಎಸೆನ್ಸ್ - 1 ಟೇಬಲ್ ಸ್ಪೂನ್
ಚಿಕ್ಕ ಪೈಪಿಂಗ್ಸ್ - ಬೇಕಾದರೆ (ಅಂಗಡಿಗಳಲ್ಲಿ ದೊರೆಯುತ್ತದೆ)

ಐಸಿಂಗ್ ಗೆ :
125 ಗ್ರಾಂ ಬೆಣ್ಣೆ (ರೂಂ ಟೆಂಪರೇಚರ್ ನಲ್ಲಿ)
250 ಗ್ರಾಂ ಸಕ್ಕರೆ 
3 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್

ವಿಧಾನ:
ಒಂದು ಬೌಲ್ ನಲ್ಲಿ ಮೊಸರು ಮತ್ತು ಸಕ್ಕರೆಯನ್ನು ಹಾಕಿಕೊಂಡು ಸಕ್ಕರೆ ಕರಗುವವರೆಗೂ ಕದಡಿ. ಸಕ್ಕರೆಯನ್ನು ಪುಡಿಮಾಡಿಕೊಂಡರೆ ಸಕ್ಕರೆ ಸುಲಭವಾಗಿ ಕರಗುತ್ತದೆ.
ನಂತರ ಇದಕ್ಕೆ ಬೇಕಿಂಗ್ ಪೌಡರ್ ಅಡಿಗೆ ಸೋಡಾ ಸೇರಿಸಿ ಕದಡಿ, 2 - 3 ನಿಮಿಷ ಬಿಡಿ. ಅಷ್ಟರಲ್ಲಿ ಮಿಶ್ರಣ ನೊರೆಯಂತಾಗಿ ಪ್ರಮಾಣವೂ ಹೆಚ್ಚಾಗುತ್ತದೆ.
ಓವನ್ ನ್ನು 200°C /400°F ಗೆ ಪ್ರೀಹೀಟ್ ಮಾಡಿಕೊಳ್ಳಿ. ಬೇಕಿಂಗ್ ಪಾತ್ರೆಗೆ ಎಣ್ಣೆ ಸವರಿಕೊಳ್ಳಿ.
ಮೈದಾಹಿಟ್ಟನ್ನು 2 - 3 ಬಾರಿ ಜರಡಿಯಾಡಿ ಇಟ್ಟುಕೊಳ್ಳಿ.
ಮೊಸರಿನ ಮಿಶ್ರಣಕ್ಕೆ ಎಣ್ಣೆ, ಉಪ್ಪು, ವೆನಿಲ್ಲಾ ಎಸೆನ್ಸ್ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.   
ಇದಕ್ಕೆ ಮೈದಾಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ನಿಧಾನವಾಗಿ ದೋಸೆ ಹಿಟ್ಟಿನ ಹದಕ್ಕೆ ಕದಡಿ.
ಮಿಶ್ರಣವನ್ನು ಬೇಕಿಂಗ್ ಪಾತ್ರೆಗೆ ಹಾಕಿ, ಪ್ರೀಹೀಟ್ ಮಾಡಿದ ಓವನ್ ನಲ್ಲಿ 10 ನಿಮಿಷ ಬೇಯಿಸಿ.
ನಂತರ ಟೆಂಪರೇಚರ್ ನ್ನು 180°C /350°F ಗೆ ಸೆಟ್ ಮಾಡಿಕೊಂಡು 35 - 40 ನಿಮಿಷ ಬೇಯಿಸಿ. ಸಾಮಾನ್ಯವಾಗಿ 35 ನಿಮಿಷ ಸಾಕಾಗುತ್ತದೆ.

ಹೀಗೆ ಎರಡು ಕೇಕ್ ಗಳನ್ನು ತಯಾರಿಸಿಕೊಳ್ಳಿ. ಕೇಕ್ ಬೇಯುವಷ್ಟರಲ್ಲಿ ಐಸಿಂಗ್ ತಯಾರಿಸಿಕೊಳ್ಳಿ. 
ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. 
ಬೆಣ್ಣೆಯನ್ನು ಚೆನ್ನಾಗಿ ಬೀಟ್ ಮಾಡಿ ಮೆತ್ತಗೆ ಕ್ರೀಮ್ ನಂತೆ ಮಾಡಿಕೊಳ್ಳಿ. ನಂತರ ಇದಕ್ಕೆ ಪುಡಿಮಾಡಿದ ಸಕ್ಕರೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದು ಚೆನ್ನಾಗಿ ಮಿಕ್ಸ್ ಆದ ನಂತರ ಕಾರ್ನ್ ಫ್ಲೋರ್ ಸೇರಿಸಿ ಮಿಕ್ಸ್ ಮಾಡಿ.

ಐಸಿಂಗ್ ನ್ನು ಹಚ್ಚುವ ಮೊದಲು ಕೇಕ್ ಪೂರ್ತಿ ತಣಿದಿರಬೇಕು. ಇಲ್ಲದಿದ್ದರೆ ಐಸಿಂಗ್ ಕರಗಿಬಿಡುತ್ತದೆ.
ಎರಡನೇ ಕೇಕ್ ಬೇಯುವಷ್ಟರಲ್ಲಿ ಮೊದಲು ತಯಾರಿಸಿದ ಕೇಕ್ ಗೆ ಮೇಲ್ಭಾಗದ ಡೆಕೋರೇಷನ್ ಮುಗಿಸಿಕೊಳ್ಳಬಹುದು.
ಕೇಕ್ ನ ಮೇಲ್ಭಾಗಕ್ಕೆ ಚಾಕುವಿನಿಂದ ಒಂದು ಲೇಯರ್ ಐಸಿಂಗ್ ನ್ನು ಸವರಿಕೊಳ್ಳಿ. ನಾನು ಹೆಸರು ಬರೆಯಲು ಐಸಿಂಗ್ ಗೆ ಸ್ವಲ್ಪ ಕೊಕೋವಾ ಪೌಡರ್ ಸೇರಿಸಿ ಕಲಸಿಕೊಂಡು ಬಳಸಿದ್ದೇನೆ.  
ಇನ್ನೊಂದು ಕೇಕ್ ತಣ್ಣಗಾದ ನಂತರ ಅದರ ಮೇಲ್ಭಾಗಕ್ಕೆ ಒಂದು ಲೇಯರ್ ಐಸಿಂಗ್ ಸವರಿ. ಮೊದಲು ಡೆಕೋರೇಟ್ ಮಾಡಿದ ಕೇಕ್ ನ್ನು ನಾಜೂಕಾಗಿ ಎತ್ತಿ ಈ ಕೇಕ್ ನ ಮೇಲಿಡಿ.
ಈಗ ಕೇಕ್ ನ ಸೈಡ್ ಗಳಿಗೆ ಐಸಿಂಗ್ ಸವರಿ.   
ಬೇಕಿಂಗ್ ಪೇಪರ್ ನಿಂದ ಕೋನ್ ತಯಾರಿಸಿಕೊಂಡು ಅದರಲ್ಲಿ ಐಸಿಂಗ್ ಮಿಶ್ರಣ ತುಂಬಿಕೊಂಡು ನಿಮಗೆ ಬೇಕಾದಂತೆ ಕೇಕ್ ನ್ನು ಡೆಕೋರೇಟ್ ಮಾಡಿ. ಇಲ್ಲವೇ ಅಂಗಡಿಗಳಲ್ಲಿ ಸಿಗುವ ಐಸಿಂಗ್ ಬ್ಯಾಗ್ ನ್ನೂ ಬಳಸಬಹುದು. ಅಂಗಡಿಯಲ್ಲಿ ದೊರೆಯುವ ಪೈಪಿಂಗ್ ನ್ನು ಕೇಕ್ ನ ಮೇಲಿನಿಂದ ಉದುರಿಸಿದರೆ ಕೇಕ್ ನ ಅಂದ ಹೆಚ್ಚುತ್ತದೆ.
ತಯಾರಿಸಿದ ಕೇಕ್ ನ್ನು ಬಳಸುವ ಮೊದಲು ಫ್ರಿಡ್ಜ್ ನಲ್ಲಿ ಅರ್ಧ ಘಂಟೆ ಇಟ್ಟು ಸೆಟ್ ಆಗಲು ಬಿಡಿ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)