ರಿಚ್ ಆಪಲ್ ಕಸ್ಟರ್ಡ್ / Rich Apple Custard

Click here for English version.
 
ಸೇಬು ಹಣ್ಣಿನ ಸೀಜನ್ ನಲ್ಲಿ ನಾನು ಹೆಚ್ಚಾಗಿ ತಯಾರಿಸುವ ಡೆಸರ್ಟ್ ಇದು. ಮನೆಗೆ ಯಾರಾದರೂ ಅತಿಥಿಗಳು ಬರುವರೆಂದರೆ ಇದನ್ನು ಮೊದಲೇ ತಯಾರಿಸಿ ಫ್ರಿಜ್ ನಲ್ಲಿ ಇಟ್ಟುಕೊಳ್ಳಬಹುದು. ಆಪಲ್ ಕಸ್ಟರ್ಡ್ ಜೊತೆಗೆ ವೆನಿಲ್ಲಾ ಐಸ್ ಕ್ರೀಮ್ ಒಳ್ಳೆಯ ಕಾಂಬಿನೇಶನ್. ಇದಕ್ಕೆ ಐಸ್ ಕ್ರೀಮ್ ಹಾಕದಿದ್ದರೂ ಆಗುತ್ತದೆ. ಆದರೆ ಐಸ್ ಕ್ರೀಮ್ ಸೇರಿಸಿದರೆ ರುಚಿ ಹೆಚ್ಚು. ಐಸ್ ಕ್ರೀಮ್ ಬಳಸದಿದ್ದರೆ ಹೆಚ್ಚು ಡ್ರೈ ಫ್ರೂಟ್ಸ್ ಬಳಸಿದರೆ ಒಳ್ಳೆಯದು. ನನ್ನ ಬಳಿ ವೆನಿಲ್ಲಾ ಐಸ್ ಕ್ರೀಮ್ ಸ್ಟಾಕ್ ಇರದಿದ್ದರಿಂದ ಬ್ಲಾಕ್ ಕರೆಂಟ್ ಐಸ್ ಕ್ರೀಮ್ ನ್ನು ಬಳಸಿದ್ದೇನೆ. ಡೆಕೋರೇಶನ್ ಗೆ ನಿಮ್ಮ ಇಷ್ಟದ ಡ್ರೈ ಫ್ರೂಟ್ಸ್ ಬಳಸಬಹುದು.   


ತಯಾರಿಸಲು ಬೇಕಾಗುವ ಸಮಯ: 1/2 ಘಂಟೆ
ತಣ್ಣಗಾಗಲು ಬೇಕಾಗುವ ಸಮಯ: 2 ಘಂಟೆ 
ಸರ್ವಿಂಗ್ಸ್ - 3 
   
ಬೇಕಾಗುವ ಸಾಮಗ್ರಿಗಳು:
ಹಾಲು - 2 1/2 ಕಪ್
ಅರ್ಧ ಸೇಬುಹಣ್ಣು 
ಚೆನ್ನಾಗಿ ಕಳಿತ 1 ದೊಡ್ಡ ಬಾಳೆಹಣ್ಣು 
ಕಸ್ಟರ್ಡ್ ಪೌಡರ್ - 2 ಟೇಬಲ್ ಸ್ಪೂನ್
ಸಕ್ಕರೆ - 5 ಸ್ಪೂನ್ (ಸಿಹಿಯಾಗುವಷ್ಟು) 
ಚಿಟಿಕೆ ಉಪ್ಪು
ಐಸ್ ಕ್ರೀಮ್ - 3 ಸ್ಕೂಪ್ 
ಅಲಂಕಾರಕ್ಕೆ ಗೋಡಂಬಿ, ದ್ರಾಕ್ಷಿ, ಚೆರ್ರಿ


ಮಾಡುವ ವಿಧಾನ:
ಒಂದೂವರೆ ಕಪ್ ನಷ್ಟು ಹಾಲಿಗೆ ಕಸ್ಟರ್ಡ್ ಪೌಡರ್ ಸೇರಿಸಿ ಗಂಟಿಲ್ಲದಂತೆ ಕದಡಿ. ಇದನ್ನು ಬಿಸಿಗಿಟ್ಟು ಸಣ್ಣ ಉರಿಯಲ್ಲಿ ಬಿಡದೆ ಕೈಯಾಡಿಸುತ್ತಿರಿ.
ಕಸ್ಟರ್ಡ್ ಮಿಶ್ರಣ ದೋಸೆ ಹಿಟ್ಟಿನಷ್ಟು ದಪ್ಪಗಾದಾಗ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.
ಸೇಬು ಹಣ್ಣನ್ನು ಸಿಪ್ಪೆಸಹಿತ ಸಣ್ಣಗೆ ಹೆಚ್ಚಿಕೊಳ್ಳಿ. ಬಾಳೆಹಣ್ಣನ್ನೂ ಸಣ್ಣಗೆ ಹೆಚ್ಚಿಕೊಳ್ಳಿ. 


ಕಸ್ಟರ್ಡ್ ಮಿಶ್ರಣ ತಣ್ಣಗಾದ ನಂತರ ಅದಕ್ಕೆ ಹೆಚ್ಚಿದ ಹಣ್ಣುಗಳು, ಸಕ್ಕರೆ, ಚಿಟಿಕೆ ಉಪ್ಪು ಮತ್ತು 1 ಕಪ್ ನಷ್ಟು ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 2 - 3 ಘಂಟೆಕಾಲ ಫ್ರಿಜ್ ನಲ್ಲಿಟ್ಟು ತಣ್ಣಗಾಗಲು ಬಿಡಿ.
ಸರ್ವ್ ಮಾಡುವ ಮುನ್ನ ಕಸ್ಟರ್ಡ್ ನ್ನು 3 ಬೌಲ್ ಗಳಿಗೆ ಹಾಕಿ, ಮೇಲಿನಿಂದ ಒಂದೊಂದು ಸ್ಕೂಪ್ ಐಸ್ ಕ್ರೀಮ್ ಹಾಕಿ. ಮೇಲಿನಿಂದ ಚೆರ್ರಿ ಇಟ್ಟು ಅಲಂಕರಿಸಿ. ನಂತರ ಗೋಡಂಬಿ, ದ್ರಾಕ್ಷಿ ಉದುರಿಸಿ. ಡ್ರೈ ಫ್ರೂಟ್ಸ್ ಜಾಸ್ತಿ ಬಳಸಿದಷ್ಟೂ ರುಚಿ ಹೆಚ್ಚು.


ಕಾಮೆಂಟ್‌ಗಳು