ಅಮಟೆಕಾಯಿ ಸಾರು (ಅಮಟಿ) / Amatekayi Sambar (Amati)

Click here for English version.

ಕಳೆದ ಮೂರು ವರ್ಷಗಳಿಂದ ನಮ್ಮ ಬಳಿ ಒಂದು ಬಟರ್ ಫ್ಲೈ ಮಿಕ್ಸಿ ಇತ್ತು. ಆಸ್ಟ್ರೇಲಿಯಾ ದಿಂದ ವಾಪಾಸ್ ಬರುವಾಗ ಲಗೇಜ್ ಜಾಸ್ತಿಯಾಗುವುದೆಂದು ಅದನ್ನು ಅಲ್ಲಿಯೇ ಮಾರಾಟ ಮಾಡಬೇಕಾಯಿತು. ನನಗೆ ಆ ಬ್ರಾಂಡ್ ನ ಮಿಕ್ಸಿ ತುಂಬ ಇಷ್ಟವಾಗಿಬಿಟ್ಟಿದ್ದರಿಂದ ಪುನಃ ಅದೇ ತರಹದ ಮಿಕ್ಸಿಗಾಗಿ ಬೆಂಗಳೂರಿನಲ್ಲಿ ಹುಡುಕಿದೆವು. ಹೆಚ್ಚಿನ ಅಂಗಡಿಗಳಲ್ಲಿ ಬಟರ್ ಫ್ಲೈ ಮಿಕ್ಸಿಯೇ ಇಲ್ಲ..ಇದ್ದರೂ ನನಗೆ ಬೇಕಾದ ಮಾಡೆಲ್ ಇಲ್ಲ! ನನಗಂತೂ ಯಾಕಾದರೂ ಆ ಮಿಕ್ಸಿಯನ್ನು ಬಿಟ್ಟು ಬಂದೆವೋ ಎನ್ನಿಸಿಬಿಟ್ಟಿತ್ತು! ತುಂಬ ಹುಡುಕಿ ಹುಡುಕಿ, ಕೊನೆಗೂ ಅಂಥದೇ ಮಿಕ್ಸಿ ಸಿಕ್ಕಿತು! ನನ್ನ ಅಕ್ಕ 10 ವರ್ಷಗಳಿಂದ ಬಟರ್ ಫ್ಲೈ ಮಿಕ್ಸಿ ಬಳಸುತ್ತಿದ್ದಾರೆ. ಅವರ ಸಲಹೆಯ ಮೇರೆಗೆ ನಾವು ಆ ಬ್ರಾಂಡ್ ನ ಮಿಕ್ಸಿ ತೆಗೆದುಕೊಂಡಿದ್ದೆವು. ಅದರ ಜೊತೆಗೆ ಬರುವ ಜ್ಯೂಸ್ ಜಾರ್ ಎಂದರೆ ನನಗೆ ತುಂಬ ಇಷ್ಟ! ಈಗ ಅಂಥ ಮಾಡೆಲ್ ಬರುತ್ತಿಲ್ಲ ಎಂದು ಹೇಳುತ್ತಾರೆ; ಇಷ್ಟು ಒಳ್ಳೆಯ ಮಾಡೆಲ್ ಏಕೆ ಜನಪ್ರಿಯತೆ ಕಳೆದುಕೊಳ್ಳುತ್ತಿದೆಯೆಂದು ಗೊತ್ತಿಲ್ಲ.. ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೇನೆ, ಆದಷ್ಟು ವರ್ಷ ಈ ಮಿಕ್ಸಿಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂದು! 
ನಾವು ಒಮ್ಮೆ ಊರಿಗೆ ಹೋಗಿ ಬಂದೆವೆಂದರೆ ಅಲ್ಲಿನ ತರಕಾರಿ, ಸೊಪ್ಪುಗಳ ಸ್ಟಾಕ್ ತುಂಬ ದಿನಗಳವರೆಗೆ ನಮ್ಮ ಫ್ರಿಜ್ ನಲ್ಲಿರುತ್ತದೆ. ಊರಿಗೆ ಹೋದಾಗ ನಮಗೆ ಅಪರೂಪವೆಂದು ಪರಿಚಿತರೊಬ್ಬರು ಅವರ ಮನೆಯಿಂದ ಅಮಟೆಕಾಯಿ ತಂದುಕೊಟ್ಟಿದ್ದರು. ಅಮಟೆಕಾಯಿ ಎಂದರೆ ತುಂಬಾ ಹುಳಿ ಇರುವ ಒಂದು ಬಗೆಯ ತರಕಾರಿ. ಇದನ್ನು ಅಂಬಟೆಕಾಯಿ ಎಂತಲೂ ಹೇಳುತ್ತಾರೆ. ಇದರ ಒಳಗೆ ಜಿಗುಟಿನಿಂದ ಕೂಡಿದ ದೊಡ್ಡ ಬೀಜವಿರುತ್ತದೆ. ಅಮಟೆಕಾಯಿ ಬಳಸಿ ಅನೇಕ ವಿಧದ ಅಡಿಗೆಗಳನ್ನು ಮಾಡಬಹುದು. ಅಮಟೆಕಾಯಿ ಬಳಸಿ ಮಾಡಿದ ಸಾರಿಗೆ ಅಮಟಿ ಎಂದು ಹೇಳುತ್ತಾರೆ. ಸಿಹಿ, ಹುಳಿ, ಖಾರ ಮೂರೂ ಹದವಾಗಿರುವ ಈ ಅಮಟಿ ಊಟಕ್ಕೆ ಬಹಳ ರುಚಿ.


ತಯಾರಿಸಲು ಬೇಕಾಗುವ ಸಮಯ: 25 ನಿಮಿಷಗಳು
ಸರ್ವಿಂಗ್ಸ್: 4 - 5

ಬೇಕಾಗುವ ಸಾಮಗ್ರಿಗಳು:
ಅಮಟೆ (ಅಂಬಟೆ) ಕಾಯಿ - 6
ಲವಂಗ - 3
ಕೊತ್ತಂಬರಿ - 1 1/4 ಚಮಚ
ಸಾಸಿವೆ - 1 /2 ಚಮಚ
ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
ತೆಂಗಿನತುರಿ - 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ - 4 ಚಮಚ (ಸಿಹಿಯಾಗುವಷ್ಟು)
ಒಗ್ಗರಣೆಗೆ: ಎಣ್ಣೆ - 2 ಚಮಚ, ಉದ್ದಿನಬೇಳೆ - 1/2 ಚಮಚ, ಸಾಸಿವೆ - 1/4 ಚಮಚ, ಚಿಟಿಕೆ ಇಂಗು, ಕರಿಬೇವು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ 3 ಲೋಟದಷ್ಟು ನೀರು ಹಾಕಿ ಅಮಟೆಕಾಯಿಯನ್ನು ಮೆತ್ತಗೆ ಬೇಯಿಸಿ.
ಬೆಂದ ಅಮಟೆಕಾಯಿ ತಣ್ಣಗಾದ ನಂತರ ಅದಕ್ಕೆ ಉಪ್ಪು, ಬೆಲ್ಲ ಸೇರಿಸಿ. ಅಮಟೆಕಾಯಿಯನ್ನು ಹಿಂಡಿ, ಸಿಪ್ಪೆ ಹಾಗೂ ಓಟೆಯನ್ನು ಆ ಮಿಶ್ರಣದಲ್ಲೇ ಬಿಡಿ.
ಲವಂಗ, ಕೊತ್ತಂಬರಿ, ಒಣಮೆಣಸು, ಸಾಸಿವೆ ಇಷ್ಟನ್ನೂ ಒಂದು ಚಮಚ ಎಣ್ಣೆ ಹಾಕಿ ಹುರಿದುಕೊಂಡು, ತೆಂಗಿನತುರಿಯೊಡನೆ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ದಪ್ಪ ತಳದ ಪಾತ್ರೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ, ಉದ್ದಿನಬೇಳೆ, ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಅಮಟೆಕಾಯಿ ಮಿಶ್ರಣ, ರುಬ್ಬಿದ ಮಸಾಲೆ ಹಾಕಿ 4 - 5 ನಿಮಿಷ ಕುದಿಸಿ ಇಳಿಸಿ.
ಈ ಅಮಟಿ ಅನ್ನದೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿಟ್ಟು 1 ವಾರದವರೆಗೂ ಬಳಸಬಹುದು.  
 

ಕಾಮೆಂಟ್‌ಗಳು

  1. Can I simply say what a relief to discover a person that genuinely knows what they're discussing over the internet. You certainly understand how to bring a problem to light and make it important. More and more people should look at this and understand this side of the story. I can't believe
    you are not more popular given that you certainly have the gift.
    My site cute scrubs

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)