ಗವ್ವಲು - ಆಂಧ್ರ ಸ್ಪೆಷಲ್ / Gavvalu - Sweet Shells from Andhra

Click here for English version.
ಗವ್ವಲು ಎನ್ನುವುದು ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸುವ ಒಂದು ಬಗೆಯ ಸಿಹಿ ತಿಂಡಿ. ನಾನು ಆಸ್ಟ್ರೇಲಿಯಾದಲ್ಲಿದ್ದಾಗ ಆಂಧ್ರ ಮೂಲದ ಫ್ರೆಂಡ್ ಒಬ್ಬರು ಈ ತಿನಿಸನ್ನು ನಮಗೆ ಕೊಟ್ಟಿದ್ದರು. ನಮಗಂತೂ ಅದರ ಆಕಾರವನ್ನು ನೋಡಿಯೇ ಆಶ್ಚರ್ಯವಾಗಿಬಿಟ್ಟಿತ್ತು! ಕಪ್ಪೆ ಚಿಪ್ಪಿನ ಆಕಾರಕ್ಕೆ ಹೇಗೆ ಮಾಡುತ್ತಾರೆಂದು ಅವರನ್ನು ಕೇಳಿದಾಗ ಅವರು ಗವ್ವಲು ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು. 
ಆದರೆ ಅವರು ಅದಕ್ಕೆ ಆಕಾರ ಕೊಡಲು ಜಿಗ್ ಜಾಗ್ ಮೇಲ್ಮೈ ಇರುವ ಒಂದು ಚಿಕ್ಕ ಬೋರ್ಡ್ ನ್ನು ಬಳಸುವರಂತೆ. ನಾನು ಗೂಗಲ್ ನಲ್ಲಿ ಒಂದಿಷ್ಟು ಹುಡುಕಿ, ಅದಕ್ಕೊಂದು ಪರಿಹಾರ ಹುಡುಕಿಕೊಂಡೆ. ಅದೇನೆಂದರೆ ಆ ಬೋರ್ಡ್ ಗೆ ಬದಲು ಬಾಚಣಿಗೆ ಅಥವಾ ಫೋರ್ಕ್ ಕೂಡ ಬಳಸಬಹುದೆಂದು! ಹೀಗಾಗಿ ಈಗ ಗವ್ವಲು ತಯಾರಿಸಲೆಂದೇ ಒಂದು ಬಾಚಣಿಗೆ ತಂದು ಇಟ್ಟುಕೊಂಡಿದ್ದೇನೆ :) 
ಗರಿಯಾಗಿ ಸಿಹಿಯಾಗಿ ಪುಟ್ಟಗಿರುವ ಈ ಗವ್ವಲು ತಿನ್ನಲು ತುಂಬ ರುಚಿ. ಟೀ ಅಥವಾ ಕಾಫಿಯೊಡನೆ ಸವಿಯಲು ಇದು ಹೇಳಿ ಮಾಡಿಸಿದ ಸ್ನ್ಯಾಕ್ಸ್. ಆದರೆ ಹುಷಾರು, ಒಮ್ಮೆ ತಿನ್ನತೊಡಗಿದರೆ ನಿಲ್ಲಿಸುವುದು ಬಹಳ ಕಷ್ಟ!! 


ತಯಾರಿಸಲು ಬೇಕಾಗುವ ಸಮಯ: 1 1/4 ಘಂಟೆ   
ಸರ್ವಿಂಗ್ಸ್: 5 - 6 (ತಿನ್ನುವವರನ್ನವಲಂಬಿಸಿ ;) )

ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು - 2 ಕಪ್  
ಸೂಜಿ ರವೆ ಅಥವಾ ಚಿರೋಟಿ ರವೆ - 1/2 ಕಪ್ (ಕೆಳಗಿರುವ ಟಿಪ್ಸ್ ನೋಡಿ)
ಉಪ್ಪು - 1/4 ಚಮಚ 
ತುಪ್ಪ - 3 ಚಮಚ 
ನೀರು - ಹಿಟ್ಟನ್ನು ಕಲಸಲು (ಸುಮಾರು 3/4 ಕಪ್)
ಕರಿಯಲು ಎಣ್ಣೆ 
ಸಕ್ಕರೆ ಪಾಕಕ್ಕೆ: ಸಕ್ಕರೆ - 1 ಕಪ್, ನೀರು - 1/2 ಕಪ್, ಚಿಟಿಕೆ ಏಲಕ್ಕಿ ಪುಡಿ  
ಗವ್ವಲು ಮಣೆ, ಬಾಚಣಿಗೆ ಅಥವಾ ಫೋರ್ಕ್   


ಮಾಡುವ ವಿಧಾನ:
ಮೈದಾಹಿಟ್ಟಿಗೆ ರವೆ, ಉಪ್ಪು, ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ಮೆತ್ತಗೂ ಇರಬಾರದು, ತೀರಾ ಗಟ್ಟಿಯೂ ಇರಬಾರದು.
ತಯಾರಿಸಿದ ಹಿಟ್ಟಿಗೆ ಒಂದು ಪ್ಲೇಟ್ ಅಥವಾ ಒದ್ದೆ ಬಟ್ಟೆ ಮುಚ್ಚಿ 20 ನಿಮಿಷ ನೆನೆಯಲು ಬಿಡಿ. ನಂತರ ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. 
ಈ ಉಂಡೆಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ಗವ್ವಲು ಮಣೆ ಅಥವಾ ಬಾಚಣಿಗೆಯ ಹಲ್ಲಿನಮೇಲೆ ನಿಧಾನವಾಗಿ ಒತ್ತಿ. ಜಿಗ್ ಜಾಗ್ ಮೇಲ್ಮೈ ಹೊರಗೆ ಬರುವಂತೆ ಸ್ವಲ್ಪವೇ ಸುರುಳಿ ಮಾಡಿ ಕಪ್ಪೆ ಚಿಪ್ಪಿನ ಅಕಾರ ಕೊಡಿ.
ಬಾಣಲೆಯಲ್ಲಿ ಎಣ್ಣೆಯನ್ನು ಹದವಾಗಿ ಕಾಯಿಸಿಕೊಂಡು, ತಯಾರಿಸಿದ ಗವ್ವಲು ಹಾಕಿ ಮೀಡಿಯಂ ಉರಿಯಲ್ಲಿ ನಾಲ್ಕೈದು ನಿಮಿಷ ಕರಿಯಿರಿ.
ಗವ್ವಲು ಗರಿಯಾಗಿ ಹೊಂಬಣ್ಣಕ್ಕೆ ಬಂದಾಗ ಎಣ್ಣೆಯಿಂದ ಎತ್ತಿ, ಒಂದು ಟಿಶ್ಯೂ ಪೇಪರ್ ಮೇಲೆ ಹರವಿ.
ಸಕ್ಕರೆಗೆ ನೀರು ಸೇರಿಸಿ ಗಟ್ಟಿ ಪಾಕ (2 1/2 ಎಳೆ) ಮಾಡಿಕೊಳ್ಳಿ. ಇದಕ್ಕೆ ಚಿಟಿಕೆ ಏಲಕ್ಕಿ ಪುಡಿ ಹಾಕಿ ಮುಚ್ಚಿಡಿ.
ಗವ್ವಲು ವನ್ನು ಟಿಶ್ಯೂ ಪೇಪರ್ ನಿಂದ ಎತ್ತಿ ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಳ್ಳಿ. 
ಇದಕ್ಕೆ ಮೇಲಿನಿಂದ ರುಚಿಗೆ ತಕ್ಕಷ್ಟು (3 - 4 ಚಮಚ) ಸಕ್ಕರೆ ಪಾಕ ಸುರಿದು, ಚೆನ್ನಾಗಿ ಮಿಕ್ಸ್ ಮಾಡಿ. ಜಾಸ್ತಿ ಸಿಹಿ ಬೇಕಿದ್ದರೆ ಇನ್ನೂ ಸ್ವಲ್ಪ ಸಕ್ಕರೆ ಪಾಕ ಹಾಕಿ ಮಿಕ್ಸ್ ಮಾಡಿ.
ಈಗ ಗವ್ವಲು ವನ್ನು ಒಂದು ಪ್ಲೇಟ್ ಮೇಲೆ ಹರವಿ 2 ನಿಮಿಷ ಬಿಡಿ. ಹೀಗೆ ಮಾಡುವುದರಿಂದ ಸಕ್ಕರೆ ಪಾಕ ಗಟ್ಟಿಯಾಗಿ, ಕೈಗೆ ಅಂಟುವುದಿಲ್ಲ.
ತಯಾರಾದ ಗವ್ವಲು ವನ್ನು ಗಾಳಿಯಾಡದ ಕಂಟೇನರ್ ನಲ್ಲಿ ಹಾಕಿಟ್ಟು, ಬೇಕಾದಾಗ ಬಳಸಿ.  


ಟಿಪ್ಸ್:
  • ಗವ್ವಲು ಗರಿಯಾಗಲು ನಾನು ಇಲ್ಲಿ ಸೂಜಿ ರವೆಯನ್ನು ಬಳಸಿದ್ದೇನೆ. ಇದರ ಬದಲು ಚಿರೋಟಿ ರವೆ ಬಳಸಿದರೂ ಬಹಳ ಚೆನ್ನಾಗಿರುತ್ತದೆ. ಚಿರೋಟಿ ರವೆ ಬಳಸುವುದಾದರೆ ಜೊತೆಗೆ 2 ಚಮಚದಷ್ಟು ಸೂಜಿ ರವೆಯನ್ನೂ ಸೇರಿಸಬಹುದು. 
  • ಕಲಸಿದ ಹಿಟ್ಟು ಸ್ವಲ್ಪ ಮೆತ್ತಗಾಗಿಬಿಟ್ಟರೆ ಚಿಂತೆ ಬೇಡ, ಅದಕ್ಕೆ ಸ್ವಲ್ಪ ರವೆ ಸೇರಿಸಿ ಕಲಸಿ :)
  • ಬೇಕಾದಷ್ಟೇ ಹಿಟ್ಟನ್ನು ಪಾತ್ರೆಯಿಂದ ತೆಗೆದುಕೊಂಡು ಬಳಸಿ; ಇಲ್ಲದಿದ್ದರೆ ಹಿಟ್ಟು ಒಣಗಿದಂತಾಗುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)