ಮೆಂತ್ಯ ಸೊಪ್ಪಿನ ಅನ್ನ / Fenugreek Leaves Rice

Click here for English version.

ಮೆಂತ್ಯ ಸೊಪ್ಪನ್ನು ಮನೆಗೆ ತಂದೆನೆಂದರೆ ಯಾವಾಗಲೂ ನಾನು ತಯಾರಿಸುವ ಐಟಂ ಇದು. ಟಿಫಿನ್ ಬಾಕ್ಸ್ ಗೆ ಒಯ್ಯಲೂ ಚೆನ್ನಾಗಿರುತ್ತದೆ. ಮೊನ್ನೆ ತರಕಾರಿಗಳನ್ನು ತರಲು ಹೋದಾಗ ಫ್ರೆಶ್ ಆಗಿರುವ ಮೆಂತ್ಯ ಸೊಪ್ಪು ಸಿಕ್ಕಿತ್ತು. ನಾನು ಸಾಮಾನ್ಯವಾಗಿ ಮೆಂತ್ಯ, ಹರಿವೆ ಇತ್ಯಾದಿ ಯಾವುದೇ ಸೊಪ್ಪನ್ನು ತಂದರೂ ಅವನ್ನು ಆದಷ್ಟು ಫ್ರೆಶ್ ಇರುವಾಗಲೇ ಖಾಲಿ ಮಾಡಿಬಿಡುತ್ತೇನೆ. ಈ ಬಾರಿ ತಂದ ಮೆಂತೆ ಸೊಪ್ಪಿನಿಂದ ಒಂದು ದಿನ ಪರೋಟಾ ತಯಾರಿಸಿದೆ. ಮುಂದಿನ ಐಟಂ ಏನೆಂದು ನೀವು ಈಗಾಗಲೇ ಊಹಿಸಿರಬಹುದು.. ಮೆಂತ್ಯ ಸೊಪ್ಪಿನ ಅನ್ನ! ನಮ್ಮವರ ಲಂಚ್ ಬಾಕ್ಸ್ ಗೆ ತಯಾರಿಸಿದ ಸಿಂಪಲ್ ಮತ್ತು ಟೇಸ್ಟಿ ಮೆಂತ್ಯ ರೈಸ್ ರೆಸಿಪಿ ಇಲ್ಲಿದೆ:


ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು 
ಸರ್ವಿಂಗ್ಸ್: 1 

ಬೇಕಾಗುವ ಸಾಮಗ್ರಿಗಳು:  
ಅಕ್ಕಿ - 1 ಕಪ್ 
ಮೆಂತ್ಯ ಸೊಪ್ಪು - 1 ಕಟ್ಟು
ಒಗ್ಗರಣೆಗೆ: ಎಣ್ಣೆ - 2 ಚಮಚ, ತುಪ್ಪ - 3 ಚಮಚ, ಉದ್ದಿನಬೇಳೆ - 1/2 ಚಮಚ, ಸಾಸಿವೆ - 1/2 ಚಮಚ, ಹೆಚ್ಚಿದ ಹಸಿಮೆಣಸು - 2
ನಿಂಬೆಹಣ್ಣು - 1
ಸಕ್ಕರೆ - 1/2 ಚಮಚ 
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನತುರಿ - 3 ಚಮಚ 

ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 2 ಕಪ್ ನಷ್ಟು ನೀರು ಸೇರಿಸಿ ಉದುರಾಗಿ ಅನ್ನ ಮಾಡಿಕೊಳ್ಳಿ. ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ ತಣ್ಣಗಾಗಲು ಬಿಡಿ.
ಮೆಂತೆ ಸೊಪ್ಪನ್ನು ತೊಳೆದುಕೊಂಡು ಸಣ್ಣಗೆ ಹೆಚ್ಚಿಕೊಳ್ಳಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಹಾಗೂ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ಉದ್ದಿನಬೇಳೆ, ಸಾಸಿವೆ, ಹಸಿಮೆಣಸು ಸೇರಿಸಿ ಒಗ್ಗರಣೆ ಮಾಡಿ, ಹೆಚ್ಚಿದ ಮೆಂತೆ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ 7 - 8 ನಿಮಿಷ ಚೆನ್ನಾಗಿ ಹುರಿಯಿರಿ.
ನಂತರ ಇದಕ್ಕೆ ಅನ್ನ, ತೆಂಗಿನತುರಿ ಸೇರಿಸಿ ಬಿಸಿಯಾಗುವವರೆಗೆ ಕೈಯಾಡಿಸಿ ಒಲೆ ಆಫ್ ಮಾಡಿ.
ಮೆಂತೆ ಅನ್ನಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಮತ್ತು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ.
ರುಚಿಯಾದ ಮೆಂತೆ ಅನ್ನವನ್ನು ಹಾಗೇ ತಿನ್ನಬಹುದು ಇಲ್ಲವೇ ಉಪ್ಪಿನಕಾಯಿ ಮತ್ತು ಮೊಸರಿನೊಡನೆ ಸರ್ವ್ ಮಾಡಬಹುದು.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)