100ನೇ ಪೋಸ್ಟ್: ಕಲ್ಲಂಗಡಿ ಹಣ್ಣಿನ ಜ್ಯೂಸ್ / Watermelon Juice

Click here for English version.

ಬೆಂಗಳೂರಿನಲ್ಲಿ ಈಗ ಕಲ್ಲಂಗಡಿ ಹಣ್ಣಿನ ಸೀಸನ್ ಶುರುವಾದಂತೆ ಕಾಣುತ್ತದೆ. ಹೊರಗಡೆ ತಿರುಗಾಡಲು ಹೋದರೆ ರಸ್ತೆಯ ಪಕ್ಕದಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಕಳೆದ ವಾರ ತರಕಾರಿ ಕೊಳ್ಳಲು ಹೋದಾಗ ಅಲ್ಲಿ ದೊಡ್ಡ ದೊಡ್ಡ ಕಲ್ಲಂಗಡಿ ಹಣ್ಣುಗಳನ್ನಿಟ್ಟಿದ್ದರು. ಈ ಕಲ್ಲಂಗಡಿ ಹಣ್ಣು ಅರಿಸುವುದೆಂದರೆ ಬಹಳ ಕಷ್ಟದ ಕೆಲಸವೇ ಸರಿ! ಅಲ್ಲಿ ಕಟ್ ಮಾಡಿಟ್ಟ ಹಣ್ಣುಗಳೆಲ್ಲ ಕೆಂಪಗೆ ಚೆನ್ನಾಗಿರುತ್ತವೆ. ಆದರೆ ನಾವು ಕೊಳ್ಳುವ ಹಣ್ಣು ಮಾತ್ರ ಯಾವಾಗಲೂ ಚೆನ್ನಾಗಿರುವುದಿಲ್ಲ!! :D
ಈ ಬಾರಿ ತಂದ ಹಣ್ಣನ್ನು ಕಟ್ ಮಾಡಿದ ತಕ್ಷಣ ಅದರ ಕೆಂಪಗಿನ ಬಣ್ಣ ನೋಡಿ ನಾವು ಖುಷಿಪಟ್ಟೆವು. ಆದರೆ ಹಣ್ಣು ಸಿಹಿಯಾಗಿರದೆ ಸಪ್ಪೆಯಾಗಿತ್ತು. :( ಹಣ್ಣನ್ನು ಹಾಗೇ ತಿನ್ನುವುದಂತೂ ಆಗದ ಕೆಲಸ. ಹೀಗಾಗಿ ಜ್ಯೂಸ್ ಮಾಡಿ ಕುಡಿದು, ಹಣ್ಣನ್ನು ಖಾಲಿ ಮಾಡಿದೆವು! ತಯಾರಿಸಲು ತುಂಬ ಸುಲಭವಾದ ಈ ಜ್ಯೂಸ್ ಕುಡಿಯಲೂ ಚೆನ್ನಾಗಿರುತ್ತದೆ. ಹಾಗಂತ ಜ್ಯೂಸ್ ಮಾಡಲು ಸಪ್ಪೆ ಕಲ್ಲಂಗಡಿ ಹಣ್ಣನ್ನೇ ಬಳಸಬೇಕೆಂದಿಲ್ಲ..ಸಿಹಿಯಾಗಿರುವ ಹಣ್ಣಿನಲ್ಲೂ ಜ್ಯೂಸ್ ತಯಾರಿಸಬಹುದು. ಸಕ್ಕರೆ ಸ್ವಲ್ಪ ಕಡಿಮೆ ಸಾಕು ಅಷ್ಟೇ! :D
ಇದು ಬ್ಲಾಗ್ ನಲ್ಲಿ ನಾನು ಬರೆಯುತ್ತಿರುವ 100 ನೇ ಅಡಿಗೆ. ಸುಮ್ಮನೆ ಟೈಮ್ ಪಾಸ್ ಗೆ ಎಂದು ಶುರುಮಾಡಿದ ಬ್ಲಾಗ್ ನಿಮ್ಮೆಲ್ಲರ ಅಭಿಮಾನ ಗಳಿಸಿರುವುದು ತುಂಬ ಸಂತೋಷವೆನಿಸುತ್ತದೆ. ಮುಂಬರುವ ದಿನಗಳಲ್ಲೂ ನಿಮ್ಮ ಪ್ರೀತಿ - ವಿಶ್ವಾಸ ಹೀಗೇ ಮುಂದುವರಿಯಲೆಂದು ಆಶಿಸುತ್ತೇನೆ :)


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು: 
ಮೀಡಿಯಂ ಸೈಜ್ ಗೆ ಹೆಚ್ಚಿದ ಕಲ್ಲಂಗಡಿ ಹೋಳುಗಳು - 4 ಗ್ಲಾಸ್ ನಷ್ಟು (ನಾನು ಸರ್ವಿಂಗ್ ಗ್ಲಾಸ್ ನಲ್ಲೇ ಅಳತೆ ಮಾಡಿದ್ದೇನೆ)
ಸಕ್ಕರೆ - 4 ರಿಂದ 5 ಚಮಚ (ಸಿಹಿಯಾಗುವಷ್ಟು)
ಚಿಟಿಕೆ ಉಪ್ಪು
ಕಾಳುಮೆಣಸಿನ ಪುಡಿ - 1/2 ಚಮಚ
ಐಸ್ ಕ್ಯೂಬ್ಸ್ - ಬೇಕಿದ್ದರೆ

ಮಾಡುವ ವಿಧಾನ:
ಕಲ್ಲಂಗಡಿ ಹೋಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸೋಸಿಕೊಂಡು ಚರಟವನ್ನು ಬೇರ್ಪಡಿಸಿ.
ತಯಾರಾದ ಜ್ಯೂಸ್ ಗೆ ರುಚಿಗೆ ತಕ್ಕಷ್ಟು ಸಕ್ಕರೆ, ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕದಡಿ.
ಬೇಕಿದ್ದರೆ ಇದನ್ನು ಸ್ವಲ್ಪ ಸಮಯ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿ ಕುಡಿಯಬಹುದು.
ಈ ಜ್ಯೂಸ್ ನ್ನು ಸರ್ವಿಂಗ್ ಗ್ಲಾಸ್ ಗೆ ಹಾಕಿ, ಒಂದೆರಡು ಐಸ್ ಕ್ಯೂಬ್ಸ್ ಸೇರಿಸಿ ಕುಡಿಯಲು ಕೊಡಿ.
ಬಿಸಿಲಿನಲ್ಲಿ ದಣಿದು ಬಂದಾಗ ತಣ್ಣಗಿನ ಜ್ಯೂಸ್ ಕುಡಿಯಲು ಬಹಳ ಚೆನ್ನಾಗಿರುತ್ತದೆ.


ಟಿಪ್ಸ್:
  • ಫ್ರಿಜ್ ನಲ್ಲಿಟ್ಟು ತಣ್ಣಗಾದ ಕಲ್ಲಂಗಡಿ ಹಣ್ಣಿನಿಂದ ಜ್ಯೂಸ್ ಮಾಡಿದರೆ ತಕ್ಷಣ ಕುಡಿಯಲು ತಣ್ಣಗೆ ಚೆನ್ನಾಗಿರುತ್ತದೆ. ಮತ್ತೆ ಐಸ್ ಕ್ಯೂಬ್ಸ್ ಸೇರಿಸಬೇಕೆಂದಿಲ್ಲ.

ಕಾಮೆಂಟ್‌ಗಳು

  1. Congratulations for 100th dish .

    ನಿಮ್ಮ ಎಲ್ಲಾ ಪೋಸ್ಟ್ ಗಳ ಪಟ್ಟಿ ಬ್ಲಾಗ್ ನ ಒಂದು ಬದಿಯಲ್ಲಿ ಬರುವಂತೆ ಮಾಡಿ. ಆಗ ರೆಸಿಪಿ ಬ್ರೌಸ್ ಮಾಡಲು ಅನುಕೂಲವಾಗುತ್ತದೆ.

    Thanks! :)

    ಪ್ರತ್ಯುತ್ತರಅಳಿಸಿ
  2. Thank you..Plz refer the Recipe Index Page (Recipe Index button is there on the top) for detailed list. I'm planning to give easy access to recipe list in the front page soon!

    Thanks for the suggestion :)

    Vani

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)