Click here for English version.
ಕರಿಬೇವು ಆರೋಗ್ಯದ ದೃಷ್ಟಿಯಿಂದ ತುಂಬ ಮಹತ್ವ ಪಡೆದಿದೆ. ಭಾರತೀಯ ಶೈಲಿಯ ಅಡಿಗೆಯಲ್ಲಿ ಹೆಚ್ಚಿನ ಅಡಿಗೆ ಪದಾರ್ಥಗಳಲ್ಲಿ ಕರಿಬೇವನ್ನು ಬಳಸುತ್ತಾರೆ. ಕರಿಬೇವು ಆಹಾರದೊಡನೆ ನಮ್ಮ ದೇಹಕ್ಕೆ ಹೋಗಲೆಂದು ಕೆಲವರು ಇದನ್ನು ಪುಡಿಮಾಡಿಟ್ಟುಕೊಂಡು ಅಡಿಗೆಯಲ್ಲಿ ಬಳಸುತ್ತಾರೆ. ಡಯಾಬಿಟಿಸ್ ಇರುವವರಿಗಂತೂ ಇದು ಒಳ್ಳೆಯ ಔಷಧ. ಇದನ್ನು ಅಡಿಗೆಯಲ್ಲಿ ಬಳಸುವುದರೊಂದಿಗೆ ಚಟ್ನಿಪುಡಿ, ಅನ್ನದೊಡನೆ ಕಲೆಸಿಕೊಳ್ಳುವ ಪುಡಿ, ಇತ್ಯಾದಿಗಳನ್ನೂ ತಯಾರಿಸಬಹುದು. ಆರೋಗ್ಯಕರವಾದ ಕರಿಬೇವಿನ ಚಟ್ನಿಪುಡಿ ತಯಾರಿಸುವ ವಿಧಾನ ಇಲ್ಲಿದೆ. ಇದನ್ನು ನಾನು ಅಡಿಗೆ ಪುಸ್ತಕವೊಂದರಿಂದ ಕಲಿತದ್ದು.
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಬೇಕಾಗುವ ಸಾಮಗ್ರಿಗಳು:
ಒಣಗಿದ ಕರಿಬೇವಿನ ಸೊಪ್ಪು - 10 ದಂಟು (ಕೆಳಗಡೆ ಸೂಚನೆ ನೋಡಿ)
ಕಡಲೆಬೇಳೆ - 1/4 ಕಪ್
ಉದ್ದಿನಬೇಳೆ - 1/4 ಕಪ್
ಕೊಬ್ಬರಿತುರಿ - 1 ಟೇಬಲ್ ಚಮಚ
ಒಣಮೆಣಸು 6 - 7
ಆಮ್ ಚೂರ್ ಪೌಡರ್ - 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ಸಕ್ಕರೆ - 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ: ಎಣ್ಣೆ - 2 ಚಮಚ, ಸಾಸಿವೆ - 1 ಚಮಚ, ಚಿಟಿಕೆ ಇಂಗು
ಮಾಡುವ ವಿಧಾನ:
ಬಾಣಲೆಯನ್ನು ಕಾಯಲಿಟ್ಟು ಕರಿಬೇವಿನ ಸೊಪ್ಪನ್ನು 4 - 5 ನಿಮಿಷ ಹುರಿಯಿರಿ.
ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಕೆಂಪಗೆ ಹುರಿದುಕೊಳ್ಳಿ.
ಒಣಮೆಣಸನ್ನು ಚೆನ್ನಾಗಿ ಹುರಿದುಕೊಂಡು, ಕೊನೆಯಲ್ಲಿ ಕೊಬ್ಬರಿತುರಿ ಸೇರಿಸಿ ಎರಡು ನಿಮಿಷ ಹುರಿಯಿರಿ.
ಹುರಿದ ಸಾಮಗ್ರಿಗಳು, ಸಕ್ಕರೆ, ಉಪ್ಪು, ಆಮ್ ಚೂರ್ ಪೌಡರ್ ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
ಎಣ್ಣೆ ಕಾಯಿಸಿ ಸಾಸಿವೆ, ಇಂಗಿನ ಒಗ್ಗರಣೆ ಮಾಡಿ ಚಟ್ನಿಪುಡಿಗೆ ಸೇರಿಸಿ ಮಿಕ್ಸ್ ಮಾಡಿ.
ಈ ಚಟ್ನಿಪುಡಿಯನ್ನು ದೋಸೆ, ಚಪಾತಿಯೊಡನೆ ಹಾಕಿಕೊಳ್ಳಬಹುದು.
ಹೆಚ್ಚು ದಿನ ಇಟ್ಟು ಬಳಸುವುದಾದರೆ ಈ ಚಟ್ನಿಪುಡಿಯನ್ನು ಫ್ರಿಜ್ ನಲ್ಲಿಟ್ಟು ಬಳಸಿ.
ಸೂಚನೆ: ಕರಿಬೇವಿನ ಸೊಪ್ಪನ್ನು ನೆರಳಿನಲ್ಲಿ ಒಣಗಿಸಿಕೊಳ್ಳಿ. ಇಲ್ಲವೇ ಓವನ್ ನಲ್ಲೂ ಡ್ರೈ ಮಾಡಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)