ಮೊಳಕೆ ಹೆಸರುಕಾಳಿನ ಪಲ್ಯ (ಉತ್ತರ ಕರ್ನಾಟಕ ಸ್ಟೈಲ್) / Moong Sprouts Palya (North Karnataka Style)

Click here for English version.

ಉತ್ತರ ಕರ್ನಾಟಕದ ಊಟವೆಂದರೆ ಬಹಳ ಗಮ್ಮತ್ತು. ನೀವು ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಹಾವೇರಿ ಮುಂತಾದ ಊರುಗಳಿಗೆ ಹೋದರೆ ಅಲ್ಲಿ ರೊಟ್ಟಿಯ ಊಟವೇ ಜಾಸ್ತಿ. ಜೋಳದ ರೊಟ್ಟಿ, ಅದರ ಜೊತೆಗೆ ಕೊಡುವ ರುಚಿರುಚಿಯಾದ ಸೈಡ್ ಡಿಶ್ ಗಳು, ವಿವಿಧ ಚಟ್ನಿ ಪುಡಿಗಳು.. ಆಹಾ! ಅವನ್ನೆಲ್ಲ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ! 
ಬೆಂಗಳೂರಿನಲ್ಲಿ ವಿಜಯನಗರದ ಬಸ್ ಸ್ಟ್ಯಾಂಡ್ ಬಳಿ ಒಂದು ಚಿಕ್ಕ ಅಂಗಡಿಯಿದೆ. ಅಲ್ಲಿ ವಿವಿಧ ಬಗೆಯ ರೊಟ್ಟಿಗಳು, ಸಬ್ಜಿ, ಚಟ್ನಿಪುಡಿಗಳು ಸಿಗುತ್ತವೆ. ಸಾಮಾನ್ಯವಾಗಿ ದಿನದ ಯಾವುದೇ ಟೈಮ್ ನಲ್ಲಿ ಆ ಅಂಗಡಿಗೆ ಹೋದರೂ ರೊಟ್ಟಿಯ ಪಾರ್ಸೆಲ್ ಒಯ್ಯಲು ಬಹಳ ಜನ ಬರುವುದನ್ನು ಕಾಣಬಹುದು. ಹಾಸ್ಟೆಲ್ ಊಟ ಮಾಡಲು ಬೇಜಾರಾದಾಗಲೆಲ್ಲ ನಾವು ಅಲ್ಲಿಂದ ರೊಟ್ಟಿಯ ಪಾರ್ಸೆಲ್ ತಂದು ತಿನ್ನುತ್ತಿದ್ದೆವು. ಅವರು ಕೊಡುವ ಹೆಸರುಕಾಳಿನ ಪಲ್ಯ ಮತ್ತು ಬದನೆಕಾಯಿ ಎಣ್ಣೆಗಾಯಿ ರೊಟ್ಟಿಯೊಡನೆ ಸೂಪರ್ಬ್ ಕಾಂಬಿನೇಶನ್! 
ನನಗೆ ಉತ್ತರ ಕರ್ನಾಟಕದ ಕಡೆಯ ಕಾಳಿನ ಪಲ್ಯವೆಂದರೆ ಬಹಳ ಇಷ್ಟ. ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನವನ್ನು ಟಿ.ವಿ. ಷೋ ಒಂದರಲ್ಲಿ ನೋಡಿದ್ದೆ. ನಂತರ ನಮ್ಮ ಅಭಿರುಚಿಗೆ ತಕ್ಕಂತೆ ಸಾಮಗ್ರಿಗಳನ್ನು ಅಡ್ಜಸ್ಟ್ ಮಾಡಿಕೊಂಡು ಪಲ್ಯ ತಯಾರಿಸಲು ಕಲಿತೆ. ಈ ಪಲ್ಯ ರೊಟ್ಟಿಯೊಡನೆ ಹಾಕಿಕೊಳ್ಳಲು ತುಂಬ ಚೆನ್ನಾಗಿರುತ್ತದೆ.  


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಮೊಳಕೆಬಂದ ಹೆಸರುಕಾಳು - 1 1/2 ಕಪ್ 
ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 1/2 ಚಮಚ
ಜೀರಿಗೆ - 1/2 ಚಮಚ
ಸಾಸಿವೆ - 1/2 ಚಮಚ  
ಈರುಳ್ಳಿ (ಹೆಚ್ಚಿದ್ದು) - 1
ಅಚ್ಚಮೆಣಸಿನಪುಡಿ - 1/2 ಚಮಚ (ಖಾರಕ್ಕೆ ತಕ್ಕಂತೆ)
ಪುಡಿಮಾಡಿದ ಕರಿ ಎಳ್ಳು (ಬೇಕಿದ್ದರೆ) - 2 ಚಮಚ
ಆಮ್ ಚೂರ್ ಪೌಡರ್ (ಹುಳಿಪುಡಿ) - 1/2 ಚಮಚ (ರುಚಿಗೆ ತಕ್ಕಷ್ಟು)
ರುಚಿಗೆ ತಕ್ಕಷ್ಟು ಉಪ್ಪು
3 - 4 ಚಮಚ ಎಣ್ಣೆ


ಮಾಡುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಇದಕ್ಕೆ ಹಸಿಮೆಣಸು-ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿದು, ಹೆಚ್ಚಿದ ಈರುಳ್ಳಿ ಸೇರಿಸಿ 2 - 3 ನಿಮಿಷ ಹುರಿಯಿರಿ.
ನಂತರ ಇದಕ್ಕೆ ಮೊಳಕೆಬಂದ ಹೆಸರುಕಾಳು ಸೇರಿಸಿ ಜೊತೆಗೆ ಉಪ್ಪು, ಮೆಣಸಿನಪುಡಿ, ಆಮ್ ಚೂರ್ ಪೌಡರ್ ಸೇರಿಸಿ ಕೈಯಾಡಿಸಿ. ಬೇಯುವುದಕ್ಕೆ ಕಾಲು ಕಪ್ ನಷ್ಟು ನೀರು ಸೇರಿಸಿ ಒಂದು ಪ್ಲೇಟ್ ಮುಚ್ಚಿ ಬೇಯಿಸಿ.
ಪಲ್ಯ ಚೆನ್ನಾಗಿ ಬೆಂದ ನಂತರ ಪುಡಿಮಾಡಿದ ಕರಿ ಎಳ್ಳು ಸೇರಿಸಿ ಎರಡು ನಿಮಿಷ ಕೈಯಾಡಿಸಿ ಉರಿಯಿಂದ ಇಳಿಸಿ.
ಚಪಾತಿ ಅಥವಾ ರೊಟ್ಟಿಯೊಡನೆ ಈ ಪಲ್ಯವನ್ನು ಸರ್ವ್ ಮಾಡಿ.


ಟಿಪ್ಸ್:
  • ಈ ಪಲ್ಯವನ್ನು ಕರಿ ಎಳ್ಳಿನ ಪುಡಿ ಸೇರಿಸದೆಯೂ ಮಾಡಬಹುದು
  • ಪಲ್ಯಕ್ಕೆ ಕೊನೆಯಲ್ಲಿ ಬೇಕಿದ್ದರೆ ಕಾಲು ಚಮಚದಷ್ಟು ಗರಂ ಮಸಾಲಾ ಪುಡಿ ಸೇರಿಸಬಹುದು

ಕಾಮೆಂಟ್‌ಗಳು