ಪಡ್ಡು (ಗುಳಿಯಪ್ಪ) / Paddu (Guliyappa)

Click here for English version.

ಅಂತೂ ಪಡ್ಡು ಮಾಡುವ ನನ್ನ ಆಸೆ ಈಡೇರಿತು! ಪಡ್ಡು ಕಾವಲಿಯನ್ನು ಕೊಳ್ಳಬೇಕೆಂದು ತುಂಬಾ ದಿನಗಳಿಂದ ನಮ್ಮವರ ಬಳಿ ಹೇಳುತ್ತಿದ್ದೆ. ಹಿಂದಿನ ತಿಂಗಳು ಪಾತ್ರೆ ಅಂಗಡಿಗೆ ಹೋದಾಗ ಪಡ್ಡು ಕಾವಲಿಯನ್ನು ಕೊಂಡೆವು. ಅದನ್ನು ಕೊಂಡಮೇಲೆ ಆಗಲೇ ಸುಮಾರು ಬಾರಿ ಪಡ್ಡು ತಯಾರಿಸಿಯಾಯಿತು. ಪಡ್ಡು ತಯಾರಿಕೆಗೆಂದೇ ಬೇರೆ ಹಿಟ್ಟನ್ನೇನೂ ನಾನು ಮಾಡಿಲ್ಲ. ಯಾವಾಗಲೂ ತಯಾರಿಸುವ ಸೆಟ್ ದೋಸೆ ಹಿಟ್ಟಿನ ವಿಧಾನದಲ್ಲೇ ಹಿಟ್ಟನ್ನು ತಯಾರಿಸಿ ಅದಕ್ಕೆ ಈರುಳ್ಳಿ, ಹಸಿಮೆಣಸು ಇತ್ಯಾದಿಗಳನ್ನು ಸೇರಿಸಿರುವುದಷ್ಟೆ. ಪಡ್ಡು ಬೆಳಗಿನ ತಿಂಡಿ, ಟಿಫಿನ್ ಬಾಕ್ಸ್, ಸಂಜೆಯ ಸ್ನ್ಯಾಕ್ಸ್ ಎಲ್ಲಕ್ಕೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು 
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಸೆಟ್ ದೋಸೆ ಹಿಟ್ಟು - ಸೆಟ್ ದೋಸೆಗೆ ಹೇಳಿದಷ್ಟೇ ಅಳತೆ 
ಸಣ್ಣಗೆ ಹೆಚ್ಚಿದ ಈರುಳ್ಳಿ - 5
ಸಣ್ಣಗೆ ಹೆಚ್ಚಿದ ಹಸಿಮೆಣಸು 6 - 7 
ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳು 15 - 20 
ಬೇಯಿಸಲು ಎಣ್ಣೆ 


ಮಾಡುವ ವಿಧಾನ:
ಸೆಟ್ ದೋಸೆಯ ವಿಧಾನದಲ್ಲಿಯೇ ಹಿಟ್ಟು ತಯಾರಿಸಿಕೊಂಡು 7 - 8 ಘಂಟೆ ಹುದುಗು ಬರಲು ಬಿಟ್ಟು, ನಂತರ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.
ನಂತರ ಈ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಪಡ್ಡು ಕಾವಲಿಯನ್ನು ಕಾಯಲಿಟ್ಟು, ಪ್ರತಿ ತೂತಿನಲ್ಲೂ 1 ಚಮಚದಷ್ಟು ಎಣ್ಣೆ ಹಾಕಿ. 
ಒಂದು ದೊಡ್ಡ ಚಮಚದಲ್ಲಿ ಪಡ್ಡು ಹಿಟ್ಟನ್ನು ತೆಗೆದುಕೊಂಡು, ಎಲ್ಲ ತೂತುಗಳಲ್ಲೂ ಮುಕ್ಕಾಲು ಭಾಗದವರೆಗೆ ಹಾಕಿ. ಪಡ್ಡು ಉಬ್ಬಿ ಬರಲು ಸ್ವಲ್ಪ ಜಾಗ ಬಿಡಿ.
ಪಡ್ಡುವಿನ ತಳಭಾಗ ಹೊಂಬಣ್ಣಕ್ಕೆ ಬರುತ್ತಿದ್ದಂತೆ, ಸ್ಪೂನ್ ಸಹಾಯದಿಂದ ಪಡ್ಡುವನ್ನು ನಿಧಾನಕ್ಕೆ ಮಗುಚಿ ಇನ್ನೊಂದು ಕಡೆಯೂ ಬೇಯಿಸಿ.
ಬಿಸಿ ಬಿಸಿ ಪಡ್ಡುವನ್ನು ತೆಂಗಿನತುರಿ ಚಟ್ನಿಯೊಡನೆ ಸವಿಯಿರಿ.   


ಟಿಪ್ಸ್:
  • ಬೆಳಗ್ಗಿನ ದೋಸೆ ಹಿಟ್ಟು ಉಳಿದಿದ್ದರೆ ಅದನ್ನು ಹಾಗೇ ಫ್ರಿಜ್ ನಲ್ಲಿಟ್ಟು, ಸಾಯಂಕಾಲ ಅಥವಾ ಮರುದಿನ ಬೆಳಗ್ಗಿನ ತಿಂಡಿಗೆ ಪಡ್ಡು ತಯಾರಿಸಬಹುದು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)