ಪಾಪಡ್ ಡಿಲೈಟ್ / Papad Delight

Click here for English version.

ವೀಕೆಂಡ್ ಊಟವೆಂದರೆ ನಮ್ಮ ಮನೆಯಲ್ಲಿ ಸ್ವಲ್ಪ ಸ್ಪೆಷಲ್. ಏಕೆಂದರೆ ಉಳಿದ ದಿನಗಳಲ್ಲಿ ಯಜಮಾನರು ಆಫೀಸಿಗೆ ಊಟದ ಡಬ್ಬ ತೆಗೆದುಕೊಂಡು ಹೋದರೆ ಬರುವುದು ಸಂಜೆಯೇ. ಸಂಜೆಯ ಊಟಕ್ಕೆ ಚಪಾತಿ, ಸಬ್ಜಿ ಮಾಡಿಬಿಟ್ಟರೆ ಅದರಲ್ಲೇ ಅವರ ಊಟ ಮುಗಿದುಹೋಗುತ್ತದೆ. ಸಂಜೆಯ ಊಟ ಲೈಟ್ ಆಗಿದ್ದಷ್ಟೂ ಒಳ್ಳೆಯದೇ! ಹೀಗಾಗಿ ಏನಾದರೂ ಊಟಕ್ಕೆ ಏನಾದರೂ ಸ್ಪೆಷಲ್ ಐಟಂಗಳನ್ನು ಮಾಡುವುದಾದರೆ ಅದು ವೀಕೆಂಡ್ ಗೇ ಸರಿ! 
ಹೋಟೆಲ್ ಗಳಲ್ಲಿ ಸಾಮಾನ್ಯವಾಗಿ ಸ್ಟಾರ್ಟರ್ ಗೆ ಹಪ್ಪಳ ಆರ್ಡರ್ ಮಾಡಿದರೆ ಹಪ್ಪಳದಮೇಲೆ ಈರುಳ್ಳಿ, ತುರಿದ ಕ್ಯಾರೆಟ್ ಇತ್ಯಾದಿಗಳನ್ನು ಹಾಕಿ ಸರ್ವ್ ಮಾಡುತ್ತಾರೆ. ಊಟಕ್ಕೆ ಹಪ್ಪಳ ಇದ್ದಾಗಲೆಲ್ಲ ಇಂಥ ಸ್ಟಾರ್ಟರ್ ನ್ನು ನಾನು ತಯಾರಿಸುತ್ತಿರುತ್ತೇನೆ. ವೀಕೆಂಡ್ ಊಟಕ್ಕೆ ಇಂಥ ಐಟಂಗಳಿದ್ದರೆ ನಮ್ಮವರಿಗೂ ತುಂಬ ಖುಷಿ! :) ಹಸಿ ತರಕಾರಿಗಳನ್ನು ಹಾಗೇ ತಿನ್ನಲು ಬೇಸರಪಡುವವರು ಹೀಗೆ ಪಾಪಡ್ ಡಿಲೈಟ್ ಮಾಡಿಕೊಂಡು ತಿಂದರೆ ನಾಲಿಗೆಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. 
ನಾನು ಹೆಚ್ಚಾಗಿ ಹಪ್ಪಳವನ್ನು ಕರಿಯುವ ಗೋಜಿಗೆ ಹೋಗದೆ, ಹಾಗೇ ಸುಟ್ಟುಕೊಂಡು ಬಳಸುತ್ತೇನೆ. ಓವನ್ ಇದ್ದರಂತೂ ಹಪ್ಪಳ ಸುಡುವುದು ಬಹಳ ಸುಲಭ. ಮೈಕ್ರೋವೇವ್ ಮೋಡ್ (ಹೈ ಟೆಂಪರೇಚರ್)ನಲ್ಲಿ ಇಟ್ಟರೆ 30 - 40 ಸೆಕೆಂಡುಗಳಲ್ಲಿ ಹಪ್ಪಳ ರೆಡಿಯಾಗಿಬಿಡುತ್ತದೆ! 


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಸರ್ವಿಂಗ್ಸ್: 3 
   
ಬೇಕಾಗುವ ಸಾಮಗ್ರಿಗಳು:
ಲಿಜ್ಜತ್ ಹಪ್ಪಳ - 3 
ಈರುಳ್ಳಿ - 1 
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ 
1 ಚಿಕ್ಕ ಕ್ಯಾರೆಟ್   
ಮೆಣಸಿನಪುಡಿ - 1 ಚಮಚ (ರುಚಿಗೆ ತಕ್ಕಷ್ಟು)
ತೆಂಗಿನತುರಿ 3 - 4 ಚಮಚ 
1 ಚಿಕ್ಕ ಟೊಮೆಟೋ
ನಿಂಬೆರಸ - ರುಚಿಗೆ ತಕ್ಕಷ್ಟು 
ರುಚಿಗೆ ಉಪ್ಪು 
ಕಾಳುಮೆಣಸಿನ ಪುಡಿ (ಬೇಕಿದ್ದರೆ) - ಸ್ವಲ್ಪ 


ಮಾಡುವ ವಿಧಾನ:
ಟೊಮೆಟೋ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಕ್ಯಾರೆಟ್ ತುರಿದುಕೊಳ್ಳಿ.
ಹಪ್ಪಳವನ್ನು ಕರಿದು ಅಥವಾ ಸುಟ್ಟು ರೆಡಿಮಾಡಿಕೊಳ್ಳಿ.
ಹಪ್ಪಳವನ್ನು ಸರ್ವ್ ಮಾಡುವ ಮುನ್ನ ಹೆಚ್ಚಿದ ಈರುಳ್ಳಿ, ಟೊಮೆಟೋ, ತುರಿದ ಕ್ಯಾರೆಟ್, ತೆಂಗಿನತುರಿ, ಹೆಚ್ಚಿದ ಕೊತ್ತಂಬರಿಸೊಪ್ಪು ಇಷ್ಟನ್ನೂ ಒಂದು ಬೌಲ್ ನಲ್ಲಿ ಹಾಕಿಕೊಂಡು ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಹಪ್ಪಳ ಖಾರವಿದ್ದರೆ ಮೆಣಸಿನ ಪುಡಿಯನ್ನು ಸ್ವಲ್ಪ ಕಡಿಮೆ ಬಳಸಿ.
ಹಪ್ಪಳದಮೇಲೆ ತಯಾರಿಸಿದ ಮಿಶ್ರಣವನ್ನು ಹರವಿ, ಮೇಲಿನಿಂದ ಸ್ವಲ್ಪ ನಿಂಬೆರಸ ಹಾಕಿ ತಕ್ಷಣ ಸರ್ವ್ ಮಾಡಿ. ರುಚಿಗೆ ಬೇಕಿದ್ದರೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿಕೊಳ್ಳಬಹುದು.


ಟಿಪ್ಸ್:
  • ನಿಮ್ಮ ಅಭಿರುಚಿಗೆ ತಕ್ಕಂತೆ ಬೇರೆ ತರಕಾರಿಗಳು ಅಥವಾ ಚಾಟ್ ಮಸಾಲಾ ಇತ್ಯಾದಿಗಳನ್ನು ಬಳಸಬಹುದು.
  • ಹಪ್ಪಳದಮೇಲೆ ತರಕಾರಿ ಮಿಶ್ರಣವನ್ನು ಹಾಕಿದ ತಕ್ಷಣ ತಿಂದುಬಿಡಿ. ಹೆಚ್ಚು ಹೊತ್ತು ಹಾಗೇ ಇಟ್ಟರೆ ಹಪ್ಪಳ ಮೆತ್ತಗಾಗಿಬಿಡುತ್ತದೆ.

ಕಾಮೆಂಟ್‌ಗಳು