ಮಾವಿನಕಾಯಿ ತಂಬುಳಿ (ತಂಬ್ಳಿ) / Raw Mango Tambuli (Tambli)

Click here for English version.

ಬೇಸಿಗೆ ಕಾಲದಲ್ಲಿ ನಮ್ಮ ಮನೆಯಲ್ಲಿ ಮದ್ಯಾಹ್ನದ ಊಟಕ್ಕೆ ಯಾವುದಾದರೂ ಒಂದು ಬಗೆಯ ತಂಬುಳಿ ಇದ್ದೇ ಇರುತ್ತದೆ. ಸೆಖೆ ಇರುವಾಗ ಸಾಂಬಾರ್, ಇತ್ಯಾದಿ ಬಿಸಿ ಪದಾರ್ಥಗಳನ್ನು ಊಟ ಮಾಡುವುದಕ್ಕಿಂತ ತಂಬುಳಿ, ಅಪ್ಪೆಹುಳಿಯಂಥ ತಣ್ಣಗಿನ ಮೇಲೋಗರಗಳು ಹೆಚ್ಚು ಹಿತವೆನಿಸುತ್ತವೆ. ತಂಬುಳಿಯನ್ನು ವಾಡಿಕೆಯಲ್ಲಿ ತಂಬ್ಳಿ ಎಂತಲೂ ಕರೆಯುತ್ತಾರೆ. ಬೇರೆ ಬೇರೆ ಸಾಮಗ್ರಿಗಳನ್ನು ಬಳಸಿ ವಿವಿಧ ತಂಬುಳಿಗಳನ್ನು ತಯಾರಿಸಬಹುದು.
ಸಾಮಾನ್ಯವಾಗಿ ಎಲ್ಲ ಬಗೆಯ ತಂಬುಳಿಗಳನ್ನೂ ಮಜ್ಜಿಗೆ ಉಪಯೋಗಿಸಿ ತಯಾರಿಸುತ್ತಾರೆ. ನನಗೆ ಗೊತ್ತಿರುವಂತೆ, ಮಜ್ಜಿಗೆ ಬಳಸದೆ ತಯಾರಿಸುವ ಏಕೈಕ ತಂಬುಳಿ ಎಂದರೆ ಮಾವಿನಕಾಯಿ ತಂಬುಳಿ. ಉಪ್ಪಿನಕಾಯಿಗೆ ಬಳಸಬಹುದಾದ ಎಲ್ಲ ಮಾವಿನಕಾಯಿಗಳೂ ತಂಬುಳಿ ಮಾಡಲು ಚೆನ್ನಾಗಿರುತ್ತವೆ. ಬಿರು ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನೀಯುವ ಈ ಮಾವಿನಕಾಯಿ ತಂಬುಳಿಯನ್ನು ನೀವೂ ಮಾಡಿನೋಡಿ!


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಮಾವಿನಕಾಯಿ - 4 ಚಮಚದಷ್ಟು
ತೆಂಗಿನತುರಿ - 1 ಕಪ್
ಹಸಿಮೆಣಸು - ಚಿಕ್ಕ ಚೂರು
ಸಾಸಿವೆ - 1/4 ಚಮಚ
ರುಚಿಗೆ ಉಪ್ಪು
ನೀರು 3 - 4 ಕಪ್ 
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 1/2 ಚಮಚ, ಚಿಟಿಕೆ ಇಂಗು, ಕರಿಬೇವು 4 - 5 ಎಲೆಗಳು

ಮಾಡುವ ವಿಧಾನ:
ಮಾವಿನಕಾಯಿ ಹೋಳುಗಳನ್ನು ಹಸಿಮೆಣಸು, ತೆಂಗಿನತುರಿ, ಸಾಸಿವೆಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ 3 ರಿಂದ 4 ಕಪ್ ನಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ತಂಬುಳಿ ಮಿಶ್ರಣಕ್ಕೆ ಸೇರಿಸಿ.
ತಯಾರಾದ ತಂಬುಳಿಯನ್ನು ಅನ್ನದೊಡನೆ ಸರ್ವ್ ಮಾಡಿ.


ಕಾಮೆಂಟ್‌ಗಳು