ರಾಗಿ ರೊಟ್ಟಿ / Finger Millet (Ragi) Rotti

Click here for English version.

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿರಿಸಲು ಎಷ್ಟು ನೀರು ಕುಡಿದರೂ ಸಾಲದು. ಎಳನೀರು, ಜ್ಯೂಸ್ ಇತ್ಯಾದಿಗಳಂತೆಯೇ ರಾಗಿ ಮಾಲ್ಟ್ ನಂತಹ ಬಿಸಿ ಪೇಯಗಳೂ ಕೂಡ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ರಾಗಿಗೆ ತನ್ನದೇ ಆದ ರುಚಿ ಅಥವಾ ಪರಿಮಳ ಇಲ್ಲ. ಹೀಗಾಗಿ ರಾಗಿ ಬಹಳ ಜನರಿಗೆ ಇಷ್ಟವಾಗುವುದೇ ಇಲ್ಲ! 
ಒಮ್ಮೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಹೋಟೆಲ್ ಒಂದರಲ್ಲಿ ರಾಗಿ ರೊಟ್ಟಿಯನ್ನು ತಿಂದಿದ್ದೆ. ಅಂದಿನಿಂದ ನಾನು ರಾಗಿ ರೊಟ್ಟಿಯ ಪಕ್ಕಾ ಅಭಿಮಾನಿಯಾಗಿಬಿಟ್ಟಿ ದ್ದೇನೆ! ಆ ರೊಟ್ಟಿಯ ನೆನಪಿನಲ್ಲಿ ನಾನು ತಯಾರಿಸಿದ ರೊಟ್ಟಿಯೂ ಚೆನ್ನಾಗಿಯೇ ಬಂತು. ರುಚಿಕರವಾದ ಅಂತೆಯೇ ಆರೋಗ್ಯಕ್ಕೆ ಹಿತಕರವಾದ ರಾಗಿ ರೊಟ್ಟಿಯ ರೆಸಿಪಿ ಇಲ್ಲಿದೆ, ನೀವೂ ಟ್ರೈ ಮಾಡಿ ನೋಡಿ!
ಈ ರೊಟ್ಟಿಗೆ ಮೆಂತ್ಯ ಸೊಪ್ಪಿನ ಬದಲು ಸಬ್ಬಸಿಗೆ ಸೊಪ್ಪನ್ನೂ ಬಳಸಬಹುದು. 


ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು - 1 3/4 ಕಪ್ 
ತುರಿದ ಕ್ಯಾರೆಟ್ - 1 
ತೆಂಗಿನತುರಿ - 1 ಕಪ್ 
1 ಮೀಡಿಯಂ ಸೈಜ್ ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 
ಸಣ್ಣಗೆ ಹೆಚ್ಚಿದ ಹಸಿಮೆಣಸು 2 - 3
ಮೆಂತ್ಯ ಸೊಪ್ಪು - 1 ಕಟ್ಟು 
ರುಚಿಗೆ ತಕ್ಕಷ್ಟು ಉಪ್ಪು 
ಬೇಯಿಸಲು ಎಣ್ಣೆ 
ಬಿಸಿ ನೀರು - 1/2 ಅಥವಾ 3/4 ಕಪ್ 

ಮಾಡುವ ವಿಧಾನ:
ಮೆಂತ್ಯ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
ರಾಗಿ ಹಿಟ್ಟನ್ನು ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಂಡು ಅದಕ್ಕೆ ಎಣ್ಣೆ, ಬಿಸಿನೀರು ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಣ ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಬಿಸಿ ನೀರು ಸೇರಿಸುತ್ತ ಚಪಾತಿ ಹಿಟ್ಟಿನಂತೆ ಉಂಡೆ ಕಟ್ಟುವ ಹದಕ್ಕೆ ಕಲಸಿ.
ಹಿಟ್ಟನ್ನು 10 - 15 ನಿಮಿಷ ನೆನೆಯಲು ಬಿಟ್ಟು ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
ಹಿಟ್ಟಿನ ಉಂಡೆಯನ್ನು ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯಮೇಲೆ ತೆಳ್ಳಗೆ ತಟ್ಟಿ, ಮಧ್ಯೆ ಒಂದು ತೂತು ಮಾಡಿ.
ಕಾದ ಬಾಣಲಿಯಮೇಲೆ ಈ ರೊಟ್ಟಿಯನ್ನು ಎರಡೂ ಕಡೆ ಎಣ್ಣೆ ಹಾಕಿ ಬೇಯಿಸಿ.
ಬಿಸಿಬಿಸಿ ರೊಟ್ಟಿಯನ್ನು ಬೆಣ್ಣೆ ಅಥವಾ ನಿಮ್ಮಿಷ್ಟದ ಸೈಡ್ ಡಿಷ್ ನೊಡನೆ ಸರ್ವ್ ಮಾಡಿ.


ಟಿಪ್ಸ್:
  • ಈ ರೊಟ್ಟಿಗೆ ಮೆಂತ್ಯ ಸೊಪ್ಪಿನ ಬದಲು ಸಬ್ಬಸಿಗೆ ಸೊಪ್ಪನ್ನು ಕೂಡ ಬಳಸಬಹುದು. 

ಕಾಮೆಂಟ್‌ಗಳು