ಕೊಬ್ಬರಿ ಚಟ್ನಿಪುಡಿ / Dry Coconut Chutney Powder (Pudi, Podi)

Click here for English version.

ಬೆಳಗ್ಗಿನ ತಿಂಡಿಯ ನೆನಪಾದರೆ ಸಾಕು, ಒಮ್ಮೊಮ್ಮೆ ತಿಂಡಿಗಿಂತ ಅದಕ್ಕೆ ಏನು ಸೈಡ್ ಡಿಶ್ ಮಾಡಬೇಕು ಎನ್ನುವುದೇ ಸಮಸ್ಯೆಯಾಗಿಬಿಡುತ್ತದೆ! ಚಟ್ನಿ ಪುಡಿ, ಖಾರದ ಪುಡಿ ಇತ್ಯಾದಿ ಯಾವುದಾದರೂ ಪುಡಿ ಮಾಡಿಟ್ಟುಕೊಂಡರೆ ಚಟ್ನಿ ಅಥವಾ ಬೇರೆ ಸೈಡ್ ಡಿಶ್ ತಯಾರಿಸಲು ಬೇಜಾರಾದಾಗ ಉಪಯೋಗಿಸಲು ಚೆನ್ನಾಗಿರುತ್ತದೆ. 
ಮನೆಯಲ್ಲಿ ಕೊಬ್ಬರಿ ಗಿಟುಕು ಇದ್ದರೆ ಸುಲಭದಲ್ಲಿ ತಯಾರಿಸಬಹುದಾದ ಚಟ್ನಿಪುಡಿಯ ರೆಸಿಪಿ ಇಲ್ಲಿದೆ. ನನ್ನ ಅಮ್ಮನಿಂದ ಕಲಿತ ಈ ಚಟ್ನಿಪುಡಿ ದೋಸೆ, ಚಪಾತಿ, ಇಡ್ಲಿ ಎಲ್ಲಕ್ಕೂ ಒಳ್ಳೆಯ ಕಾಂಬಿನೇಶನ್!


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಈ ಅಳತೆಯಿಂದ ಸುಮಾರು 3 ಕಪ್ ನಷ್ಟು ಚಟ್ನಿಪುಡಿ ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಕೊಬ್ಬರಿ - 1 ಗಿಟುಕಿನ ಅರ್ಧಭಾಗ (ಅಂಗಡಿಗಳಲ್ಲಿ ಸಿಗುವ ತುರಿದ ಒಣಕೊಬ್ಬರಿಯನ್ನೂ ಬಳಸಬಹುದು)
ಕಡಲೆಬೇಳೆ - 5ರಿಂದ 6 ಚಮಚ 
ಉದ್ದಿನಬೇಳೆ - 1/2 ಚಮಚ 
ಒಣಮೆಣಸು - 15ರಿಂದ 16
ಮೆಂತ್ಯ - 3/4 ಚಮಚ
ಜೀರಿಗೆ - 1/2 ಚಮಚ 
ಎಳ್ಳು - 1 ಚಮಚ 
ಕೊತ್ತಂಬರಿ - 3ರಿಂದ 4 ಚಮಚ    
ಲವಂಗ - 8
ಸಾಸಿವೆ - 1 ಚಮಚ 
ಒಂದು ದೊಡ್ಡ ಚಿಟಿಕೆ ಇಂಗು 
ಕರಿಬೇವು - 2 ಎಸಳು 
ಅರಿಶಿನ - 1/4 ಚಮಚ 
ಎಣ್ಣೆ - 2 ಚಮಚ
ಆಮ್ ಚೂರ್ ಪೌಡರ್ - 1/2 ಚಮಚ ಅಥವಾ ರುಚಿಗೆ ತಕ್ಕಷ್ಟು 
ಸಕ್ಕರೆ - 6 ಚಮಚ ಅಥವಾ ರುಚಿಗೆ ತಕ್ಕಷ್ಟು 
ರುಚಿಗೆ ತಕ್ಕಷ್ಟು ಉಪ್ಪು  


ಮಾಡುವ ವಿಧಾನ:
ಮೊದಲು ಕೊಬ್ಬರಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿಕೊಳ್ಳಿ. 
ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಕಡಲೇಬೇಳೆಯನ್ನು 1 ನಿಮಿಷ ಹುರಿಯಿರಿ. ನಂತರ ಉದ್ದಿನಬೇಳೆ, ಮೆಂತ್ಯ, ಒಣಮೆಣಸು ಸೇರಿಸಿ ಸ್ವಲ್ಪ ಪರಿಮಳ ಬರುವವರೆಗೆ ಹುರಿಯಿರಿ.
ನಂತರ ಇದಕ್ಕೆ ಕೊತ್ತಂಬರಿ, ಜೀರಿಗೆ ಸೇರಿಸಿ ಸ್ವಲ್ಪ ಹುರಿದು, ಸಾಸಿವೆ ಮತ್ತು ಎಳ್ಳು ಸೇರಿಸಿ ಚಟಪಟ ಎನ್ನುವಂತೆ ಹುರಿಯಿರಿ. ನಂತರ ಲವಂಗ, ಒಂದು ದೊಡ್ಡ ಚಿಟಿಕೆ ಇಂಗು ಸೇರಿಸಿ ಒಮ್ಮೆ ಕೈಯಾಡಿಸಿ, ಅರಿಶಿನ ಸೇರಿಸಿ.
ಕೊನೆಯಲ್ಲಿ ಕರಿಬೇವಿನ ಎಸಳುಗಳನ್ನು ಸೇರಿಸಿ 2 - 3 ನಿಮಿಷ ಹುರಿದು ಉರಿಯನ್ನು ಆಫ್ ಮಾಡಿ.
ಹುರಿದ ಸಾಮಗ್ರಿಗಳು ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿಕೊಂಡು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿ. ಇದರ ಜೊತೆ ಕೊಬ್ಬರಿ ಚೂರುಗಳನ್ನು ಸೇರಿಸಿ ಪುಡಿಮಾಡಿ. ಮಿಶ್ರಣ ರವೆಯಷ್ಟು ತರಿಯಾಗಿರಲಿ. 
ತಯಾರಾದ ಚಟ್ನಿಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬೇಕಾದಾಗ ಬಳಸಿ. 


ಟಿಪ್ಸ್:
  • ಈ ಚಟ್ನಿಪುಡಿ 15 - 20 ದಿನಗಳವರೆಗೆ ಕೆಡದೆ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿಟ್ಟರೆ ತಿಂಗಳಾನುಗಟ್ಟಲೆ ಇಟ್ಟುಕೊಂಡು ಬಳಸಬಹುದು.

ಕಾಮೆಂಟ್‌ಗಳು