ಅವರೆಕಾಳು ರೊಟ್ಟಿ (ತಾಲಿಪಿಟ್ಟು) | Avarekaalu Rotti (Talipittu)

Click here for English version.

ಬೆಂಗಳೂರಿನಲ್ಲಿ ಸೀಜನ್ ಅಲ್ಲದ ಟೈಮ್ ನಲ್ಲಿ ಅವರೆಕಾಳು ಸಿಕ್ಕಿಬಿಟ್ಟಿತ್ತು ಈ ವರ್ಷ! ಸಾಮಾನ್ಯವಾಗಿ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಎಲ್ಲ ಕಡೆ ಅವರೆಕಾಳು ಸಿಗುತ್ತದೆ. ಆದರೆ ಈ ವರ್ಷ ಅದು ಹೇಗೋ ಗೊತ್ತಿಲ್ಲ, ಜುಲೈ ತಿಂಗಳಿನಲ್ಲೂ ಅವರೆಕಾಳು ಕೆಲವು ಕಡೆಗಳಲ್ಲಿ ದೊರೆಯುತ್ತಿದೆ! ಕಳೆದ ವಾರ ನನ್ನ ತಂಗಿ ಅವರ ಮನೆಯ ಬಳಿ ಅವರೆಕಾಳು ಮಾರುತ್ತಿದ್ದನ್ನು ಕಂಡು, ಒಂದಿಷ್ಟು ಕೊಂಡಳಂತೆ. ನಂತರ ನನಗೂ ಸ್ವಲ್ಪ ಅವರೆಕಾಳು ತಂದುಕೊಟ್ಟಿದ್ದಳು. ನಮ್ಮ ಮನೆಯಲ್ಲಿ ಅವರೆಕಾಳು ತಂದರೆ ಹೆಚ್ಚಾಗಿ ತಯಾರಿಸುವ ತಿಂಡಿ ಎಂದರೆ ಅವರೆಕಾಳು ರೊಟ್ಟಿ. ನಮಗಿಬ್ಬರಿಗೂ ಈ ರೊಟ್ಟಿ ಎಂದರೆ ಬಹಳ ಇಷ್ಟ. ಹೀಗಾಗಿ ಅಪರೂಪಕ್ಕೆ ಅವರೆಕಾಳಿನ ರೊಟ್ಟಿ ತಯಾರಿಸಿ ಸವಿದೆವು!


ತಯಾರಿಸಲು ಬೇಕಾಗುವ ಸಮಯ: 30 - 40 ನಿಮಿಷಗಳು 
ಈ ಅಳತೆಯಿಂದ 6 ರೊಟ್ಟಿಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು: 
ಮೆತ್ತಗೆ ಬೇಯಿಸಿದ ಅವರೆಕಾಳು - 1 ಕಪ್
ಮೀಡಿಯಂ ಸೈಜ್ ಕ್ಯಾರೆಟ್ - 1
ಮೆಂತ್ಯ ಸೊಪ್ಪು ಅಥವಾ ಸಬ್ಬಸಿಗೆ ಸೊಪ್ಪು - 1 ಕಟ್ಟು 
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ತೆಂಗಿನತುರಿ - 1 ಕಪ್ 
ಈರುಳ್ಳಿ - 2 
ಅಕ್ಕಿಹಿಟ್ಟು - 1 3/4 ಕಪ್ ಅಂದಾಜು 
ರುಚಿಗೆ ತಕ್ಕಷ್ಟು ಉಪ್ಪು 


ಮಾಡುವ ವಿಧಾನ:
ಅವರೆಕಾಳನ್ನು ಮೆತ್ತಗೆ ಬೇಯಿಸಿ, ನೀರನ್ನೆಲ್ಲ ಬಸಿದುಬಿಡಿ. ಕುಕ್ಕರ್ ನಲ್ಲಿ 3 ವಿಸಿಲ್ ಆಗುವತನಕ ಬೇಯಿಸಿದರೆ ಕಾಳು ಮೆತ್ತಗೆ ಬೆಂದಿರುತ್ತದೆ.
ಕ್ಯಾರೆಟ್ ತುರಿದುಕೊಳ್ಳಿ. ಹಸಿಮೆಣಸನ್ನು ಜಜ್ಜಿಕೊಳ್ಳಿ. ಸೊಪ್ಪು ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಪಾತ್ರೆಯಲ್ಲಿ ತುರಿದ ಕ್ಯಾರೆಟ್, ಜಜ್ಜಿದ ಹಸಿಮೆಣಸು, ತೆಂಗಿನತುರಿ, ಹೆಚ್ಚಿದ ಸೊಪ್ಪು ಮತ್ತು ಈರುಳ್ಳಿಯನ್ನು ಉಪ್ಪು ಸೇರಿಸಿ ಕಲಸಿ 10 ನಿಮಿಷ ಇಡಿ. ಅಷ್ಟರಲ್ಲಿ ತರಕಾರಿಗಳು ನೀರು ಬಿಟ್ಟುಕೊಂಡು, ಹಿಟ್ಟು ಕಲಸಲು ಸುಲಭವಾಗುತ್ತದೆ.
ಬೇಯಿಸಿದ ಅವರೆಕಾಳನ್ನು ಸ್ವಲ್ಪ ಹಿಸುಕಿಕೊಂಡು, ಮಿಶ್ರಣಕ್ಕೆ ಸೇರಿಸಿ ಕಲಸಿ. 
ಇದಕ್ಕೆ ಹಿಡಿಸುವಷ್ಟು ಅಕ್ಕಿಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ತುಂಬಾ ಉದುರಾಗಿದ್ದರೆ ಒಂದೆರಡು ಚಮಚ ನೀರು ಸೇರಿಸಬಹುದು.
ಕಲಸಿದ ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಆದಷ್ಟು ತೆಳ್ಳಗೆ ರೊಟ್ಟಿಯಂತೆ ತಟ್ಟಿ, ಮಧ್ಯೆ ಒಂದು ತೂತು ಮಾಡಿ.
ಈ ರೊಟ್ಟಿಯನ್ನು ಕಾದ ಬಾಣಲಿಯಮೇಲೆ ಎಣ್ಣೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ಸ್ವಲ್ಪ ಕಡಿಮೆ ಉರಿಯಲ್ಲಿ ಬೇಯಿಸಿದರೆ ರೊಟ್ಟಿ ಗರಿಯಾಗಿ ತಿನ್ನಲು ಚೆನ್ನಾಗಿರುತ್ತದೆ.
ತಯಾರಾದ ರೊಟ್ಟಿಯನ್ನು ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ಸರ್ವ್ ಮಾಡಿ. ಈ ರೊಟ್ಟಿಯನ್ನು ಯಾವುದೇ ಸೈಡ್ ಡಿಶ್ ಇಲ್ಲದೆ ಹಾಗೆಯೇ ತಿನ್ನಬಹುದು.


ಟಿಪ್ಸ್:
  • ನಾನು ಈ ರೊಟ್ಟಿಗೆ ಸಬ್ಬಸಿಗೆ ಸೊಪ್ಪನ್ನು ಬಳಸಿದ್ದೇನೆ. ಸಬ್ಬಸಿಗೆಯ ಬದಲು ಮೆಂತ್ಯ ಸೊಪ್ಪನ್ನು ಬಳಸಿದರೂ ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು