ಚಕ್ಕೆ ಪಳದ್ಯ | Chakke Paladya

Click here for English version.

ಚಕ್ಕೆ ಪಳದ್ಯ ಎನ್ನುವುದು ಮಲೆನಾಡ ಕಡೆ ತಯಾರಿಸುವ ಒಂದು ಬಗೆಯ ಮೇಲೋಗರ. ಹಲಸಿನಕಾಯಿಯಿಂದ ತಯಾರಿಸುವುದರಿಂದ ಇದನ್ನು ಹಲಸಿನ ಸೀಜನ್ ನಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಊಟಕ್ಕೆ ಬಹಳ ರುಚಿ ಕೊಡುವ ಈ ಪಳದ್ಯವನ್ನು ತಯಾರಿಸುವುದು ತೀರಾ ಸುಲಭ! 
ಬೆಂಗಳೂರಿನಲ್ಲಿ ಹಲಸಿನಕಾಯಿ ಸಿಗುವುದು ಕಷ್ಟವಾದ್ದರಿಂದ ಊರಿನಿಂದ ನಮಗಾಗಿ ಹಲಸಿನ ತೊಳೆಗಳನ್ನು ಬಿಡಿಸಿ ಕಳಿಸಿದ್ದರು. ಅದನ್ನು ಫ್ರೀಜರ್ ನಲ್ಲಿ ಇಟ್ಟುಕೊಂಡು ನಾವು ತಿಂಗಳುಗಟ್ಟಲೆ ಬಳಸಿದೆವು. ಹಲಸಿನಕಾಯಿ ಸಾಂಬಾರ್, ಪಲ್ಯ, ಚಕ್ಕೆ ಪಳದ್ಯ, ಹೀಗೆ ಅನೇಕ ವೆರೈಟಿಗಳನ್ನು ತಯಾರಿಸಿದ್ದಾಯಿತು. ರುಚಿಕರವಾದ ಹಾಗೂ ಸುಲಭದಲ್ಲಿ ತಯಾರಿಸಬಹುದಾದ ಚಕ್ಕೆ ಪಳದ್ಯದ ರೆಸಿಪಿ ಇಲ್ಲಿದೆ, ಟ್ರೈ ಮಾಡಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಬೆಳೆದ ಹಲಸಿನ ಕಾಯಿಯ ತೊಳೆಗಳು 10 - 12 
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ನಿಂಬೆಹಣ್ಣು - 1 
ಎಣ್ಣೆ 3 - 4 ಹನಿ 
ನೀರು - 3 ಕಪ್ 
ರುಚಿಗೆ ತಕ್ಕಷ್ಟು ಉಪ್ಪು 
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 1/2 ಚಮಚ, ಚಿಟಿಕೆ ಇಂಗು, ಕರಿಬೇವು 

ಮಾಡುವ ವಿಧಾನ:
ಹಲಸಿನ ಬೀಜ ತೆಗೆದು, ತೊಳೆಗಳನ್ನು ಉದ್ದುದ್ದವಾಗಿ ಮಧ್ಯಮಗಾತ್ರದ ಹೋಳುಗಳಾಗಿ ಮಾಡಿಕೊಳ್ಳಿ.
ಕುಕ್ಕರ್ ನಲ್ಲಿ 2 1/2 ಕಪ್ ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, 3 - 4 ಹನಿ ಎಣ್ಣೆ ಸೇರಿಸಿ ಬಿಸಿಗಿಡಿ. ಇದಕ್ಕೆ ಉದ್ದಕ್ಕೆ ಸೀಳಿದ ಹಸಿಮೆಣಸು ಮತ್ತು ಹೆಚ್ಚಿದ ಹಲಸಿನ ತೊಳೆಗಳನ್ನು ಸೇರಿಸಿ 3 ವಿಸಿಲ್ ಆಗುವವರೆಗೆ ಬೇಯಿಸಿ.
ಬೆಂದ ಮಿಶ್ರಣ ಸ್ವಲ್ಪ ತಣ್ಣಗಾದಾಗ ಹಲಸಿನ ತೊಳೆಯ ಅರ್ಧದಷ್ಟನ್ನು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. 
ರುಬ್ಬಿದ ಪೇಸ್ಟ್ ನ್ನು ಹಲಸಿನ ತೊಳೆ ಮಿಶ್ರಣಕ್ಕೆ ಸೇರಿಸಿ 3 - 4 ನಿಮಿಷ ಕುದಿಸಿ ಇಳಿಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ಕುದಿಸಿದ ಪಳದ್ಯಕ್ಕೆ ಸೇರಿಸಿ.
ರುಚಿಕಟ್ಟಾದ ಬಿಸಿಬಿಸಿ ಪಳದ್ಯವನ್ನು ಅನ್ನದೊಡನೆ ಸರ್ವ್ ಮಾಡಿ.


ಟಿಪ್ಸ್:
  • ಹಲಸಿನ ತೊಳೆಗಳನ್ನು ಕುಕ್ಕರ್ ನ ಬದಲು ಹಾಗೇ ಪಾತ್ರೆಯಲ್ಲೂ ಬೇಯಿಸಬಹುದು. ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕು ಅಷ್ಟೆ!
  • ಈ ಪಳದ್ಯಕ್ಕೆ ಬೇಯಿಸಿದ ಹಲಸಿನ ತೊಳೆಗಳಲ್ಲಿ ಸ್ವಲ್ಪ ಭಾಗವನ್ನು ರುಬ್ಬಿ ಸೇರಿಸುವುದರಿಂದ ಪಳದ್ಯ ತೀರಾ ನೀರಾಗಿರದೆ, ಸ್ವಲ್ಪ ದಪ್ಪಗಾಗುತ್ತದೆ.

ಕಾಮೆಂಟ್‌ಗಳು